ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಸಿಡಿಆರ್‌ ಸೃಷ್ಟಿಸುತ್ತಿದ್ದ ಬಿಡಿಎ ಗುತ್ತಿಗೆ ನೌಕರ ಬಂಧನ

Last Updated 3 ಜನವರಿ 2021, 23:04 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಖಚಿತ ಅಳತೆ ವರದಿ (ಸಿಡಿಆರ್‌) ಸೃಷ್ಟಿಸಿ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಹಾಗೂ ಮಾರಾಟ ಮಾಡಲು ಸಹಕರಿಸುತ್ತಿದ್ದ ಆರೋಪದಡಿ ನವೀನ್ ಎಂಬುವರನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬನಶಂಕರಿ ಕಚೇರಿಯಲ್ಲಿ ಗುತ್ತಿಗೆ ನೌಕರರಾಗಿದ್ದ ನವೀನ್, ಎಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸಿಡಿಆರ್‌ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಅವರೂ ಭಾಗಿಯಾಗುತ್ತಿದ್ದರು. ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ನಿವೇಶನ ಮಾರಾಟ ಮಾಡಿದ್ದ ಬಗ್ಗೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದಾಗ, ಆರೋಪಿ ಸುಳಿವು ಸಿಕ್ಕಿತ್ತು’ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನವೀನ್‌ ಅವರನ್ನು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಲಿದ್ದೇವೆ’ ಎಂದರು.

ಅಕ್ರಮ ಸಂಪಾದನೆ: ‘ನವೀನ್, ಅಕ್ರಮವಾಗಿ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದನೆ ಮಾಡಿರುವ ಅನುಮಾನ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬಿಡಿಎ ನಿವೇಶನಗಳ ಸಿಡಿಆರ್‌ ಬಗ್ಗೆ ತಿಳಿದುಕೊಂಡಿದ್ದ ಆರೋಪಿ, ನಕಲಿ ಸಿಡಿಆರ್ ಸೃಷ್ಟಿಸಲಾರಂಭಿಸಿದ್ದರು. ಕೆಲವರು ಆರೋಪಿಗೆ ದುಡ್ಡು ಕೊಟ್ಟು ನಕಲಿ ಸಿಡಿಆರ್‌ ಸೃಷ್ಟಿಸಿಕೊಂಡಿದ್ದರು. ಮಧ್ಯವರ್ತಿಗಳು ಹಾಗೂ ಇತರರ ಮೂಲಕ ಆರೋಪಿ ನಿವೇಶನಗಳನ್ನು ಮಾರಾಟ ಮಾಡಿಸುತ್ತಿದ್ದ ಮಾಹಿತಿಯೂ ಇದೆ. ಬಂದ ಹಣವನ್ನು ತಾವೂ ಇಟ್ಟುಕೊಂಡು, ಕೆಲ ಪಾಲನ್ನು ಇತರರಿಗೆ ನೀಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಸಲ್ಲಿಕೆಯಾಗಿದ್ದ ದೂರು: ‘ಆರೋಪಿ ನವೀನ್‌ಅವರಿಂದ ವಂಚನೆಗೀಡಾಗಿದ್ದ ಕೆಲ ಸಾರ್ವಜನಿಕರು, ಬಿಡಿಎ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ, ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕಚೇರಿ ನೌಕರರೊಬ್ಬರ ಮೇಲೂ ಆರೋಪಿ ನವೀನ್ ಹಲ್ಲೆ ಮಾಡಿದ್ದರು. ಆ ಬಗ್ಗೆ ಎಚ್‌ಎಸ್‌ಆರ್‌ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT