ಬೆಂಗಳೂರು: ಬಿಡಿಎ ಎಂಜಿನಿಯರಿಂಗ್ ಸದಸ್ಯ ಹುದ್ದೆಯಿಂದ ವರ್ಗಾವಣೆಯಾದ ಬಳಿಕ ಅಧಿಕಾರ ಹಸ್ತಾಂತರಿಸದೇ ಕಚೇರಿಯಿಂದ ನಿರ್ಗಮಿಸಿದ್ದ ಮುಖ್ಯ ಎಂಜಿನಿಯರ್ ಎಚ್.ಆರ್. ಶಾಂತರಾಜಣ್ಣ ಹದಿನೈದು ದಿನಗಳಾದರೂ ಸರ್ಕಾರಿ ಕಾರು ಹಿಂದಿರುಗಿಸಿಲ್ಲ.
ಮುಖ್ಯ ಎಂಜಿನಿಯರ್ ಟಿ.ಡಿ. ನಂಜುಂಡಪ್ಪ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಜನಿಯರಿಂಗ್ ಸದಸ್ಯ ಹುದ್ದೆಗೆ ವರ್ಗಾವಣೆ ಮಾಡಿ ಜುಲೈ 22ರಂದು ಆದೇಶ ಹೊರಡಿಸಲಾಗಿತ್ತು. ಜುಲೈ 23ರಂದು ನಂಜುಂಡಪ್ಪ ಅಧಿಕಾರ ವಹಿಸಿಕೊಳ್ಳಲು ಬಿಡಿಎ ಕಚೇರಿಗೆ ಹೋಗಿದ್ದರು. ಆದರೆ, ಅಧಿಕಾರ ಹಸ್ತಾಂತರಿಸದೇ ಶಾಂತರಾಜಣ್ಣ ಹೊರಟುಹೋಗಿದ್ದರು. ಬಳಿಕ ನಂಜುಂಡಪ್ಪ ಅವರು ತಾವಾಗಿಯೇ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು.
ಬಿಡಿಎ ಎಂಜಿನಿಯರಿಂಗ್ ಸದಸ್ಯ ಹುದ್ದೆಯಲ್ಲೇ ಮುಂದುವರಿಯಲು ಪ್ರಯತ್ನಿಸುತ್ತಿರುವ ಶಾಂತರಾಜಣ್ಣ, ಮರಳಿ ಲೋಕೋಪಯೋಗಿ ಇಲಾಖೆಯಲ್ಲಿ ವರದಿ ಮಾಡಿಕೊಂಡಿಲ್ಲ. ಬಿಡಿಎ ಕಾರನ್ನೂ ತಮ್ಮೊಂದಿಗೆ ಕೊಂಡೊಯ್ದಿದ್ದು, ಬಳಸುತ್ತಿದ್ದಾರೆ. ಎಂಜಿನಿಯರಿಂಗ್ ಸದಸ್ಯರಾಗಿ ಬಂದಿರುವ ನಂಜುಂಡಪ್ಪ ಅವರ ಬಳಕೆಗೆ ಸರ್ಕಾರಿ ಕಾರು ಇಲ್ಲದಂತಾಗಿದೆ ಎಂದು ಮೂಲಗಳು ತಿಳಿಸಿವೆ.
ಸಮಾಲೋಚಕರ ಜತೆ ಕೆಲಸ: ಬಿಡಿಎ ಹುದ್ದೆಯಿಂದ ವರ್ಗವಾಗಿದ್ದರೂ ಶಾಂತರಾಜಣ್ಣ ಅವರು ಪ್ರಾಧಿಕಾರದ ವಿವಿಧ ಯೋಜನೆಗಳ ಸಮಾಲೋಚಕರಾಗಿ ನೇಮಕಗೊಂಡಿರುವ ಖಾಸಗಿ ಸಂಸ್ಥೆಗಳ ಜತೆ ಅನಧಿಕೃತವಾಗಿ ಕೆಲಸ ಮಾಡುತ್ತಿದ್ದಾರೆ. ಪೆರಿಫೆರಲ್ ವರ್ತುಲ ರಸ್ತೆ ಸೇರಿದಂತೆ ಕೆಲವು ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದ ಯೋಜನಾ ವರದಿ ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.
ಪುನಃ ಬಿಡಿಎ ಎಂಜಿನಿಯರಿಂಗ್ ಸದಸ್ಯ ಹುದ್ದೆಗೆ ವರ್ಗಾವಣೆ ಆದೇಶ ಪಡೆದು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದಾಗಿ ಶಾಂತರಾಜಣ್ಣ ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಕಾರಣದಿಂದ ಕಾರು ಮರಳಿಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.