ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಡಿಎ ವಸತಿ ಸಮುಚ್ಚಯಗಳಿಗೆ ಕೊಳವೆಯಲ್ಲಿ ಅಡುಗೆ ಅನಿಲ’

Last Updated 19 ಜನವರಿ 2021, 17:21 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸುವ ವಸತಿ ಸಮುಚ್ಚಯಗಳ ಮನೆಗಳಿಗೆ ಕೊಳವೆ ಮೂಲಕ ಅಡುಗೆ ಅನಿಲ ಪೂರೈಸಲಾಗುತ್ತದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದರು.

ಮಾಳಗಾಲದಲ್ಲಿ ಬಿಡಿಎ ನಿರ್ಮಿಸಿರುವ ಬ್ರಹ್ಮಗಿರಿ ವಸತಿ ಸಂಕೀರ್ಣಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಅಲ್ಲಿನ ವಸತಿ ಮಾಲೀಕರ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿದರು.

‘ಬಿಡಿಎ ವಸತಿ ಸಂಕೀರ್ಣಗಳಿಗೆ ಕೊಳವೆಯಲ್ಲಿ ಅಡುಗೆ ಅನಿಲ ಪೂರೈಸುವಂತೆ ಕೋರಿ ಭಾರತೀಯ ಅನಿಲ ಪ್ರಾಧಿಕಾರಕ್ಕೆ (ಗೇಲ್) ಪತ್ರ ಬರೆದಿದ್ದೇವೆ. ಬಿಡಿಎ ವಸತಿ ಸಂಕೀರ್ಣಗಳಿಗೆ ಅಡುಗೆ ಅನಿಲ ಪೂರೈಸುವ ಬಗ್ಗೆ ಗೇಲ್ ಸಂಸ್ಥೆ ಆಸಕ್ತಿ ತೋರಿಸಿದೆ’ ಎಂದರು.

ಮಾಳಗಾಲ ವಸತಿ ಸಂಕೀರ್ಣದಲ್ಲಿ ನಿವಾಸಿಗಳ ಅನುಕೂಲಕ್ಕಾಗಿ ತೆರೆದ ವ್ಯಾಯಾಮ ಶಾಲೆ ಮತ್ತು ಮಕ್ಕಳಿಗಾಗಿ ಕ್ರೀಡಾ ಪರಿಕರಗಳನ್ನು ಅಳವಡಿಸಬೇಕು. ಬಾಕಿ ಇರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ವಿಶ್ವನಾಥ್ ಸೂಚನೆ ನೀಡಿದರು.

ನಾಗರಬಾವಿ ಬಳಿ ಚಂದ್ರಾ ಲೇಔಟ್ ನಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಂಕೀರ್ಣಕ್ಕೂ ಬಿಡಿಎ ಅಧ್ಯಕ್ಷರು ಭೇಟಿ ನೀಡಿದರು. ಇಲ್ಲಿನ ಕಾಮಗಾರಿಯನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಜೂನ್‌ ತಿಂಗಳ ಒಳಗೆ ವಸತಿ ಹಂಚಿಕೆಗೆ ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಕೊಮ್ಮಘಟ್ಟದಲ್ಲಿ ನೈಸ್ ರಸ್ತೆಗೆ ಹೊಂದಿಕೊಂಡ ಪ್ರದೇಶದಲ್ಲಿ ಬಿಡಿಎ ವಸತಿ ಸಮುಚ್ಚಯವನ್ನು ನಿರ್ಮಿಸುತ್ತಿದೆ. ಈ ಯೋಜನೆಯಲ್ಲಿ ಮೂರನೇ, ನಾಲ್ಕನೇ ಹಾಗೂ ಐದನೇ ಹಂತಗಳಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಂಕೀರ್ಣಗಳ ಕಾಮಗಾರಿ ಶೇ 70 ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ಮುಂದಿನ ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ವಿಶ್ವನಾಥ್‌ ಸೂಚಿಸಿದರು.

‘ಬಿಡಿಎ ನಿರ್ಮಾಣ ಮಾಡುತ್ತಿರುವ ಅಪಾರ್ಟ್‌ಮೆಂಟ್ ಸಮುಚ್ಚಯಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಉತ್ತಮ ಗುಣಮಟ್ಟದ ಕಾಪಾಡದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT