ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣಾ ಶುಲ್ಕದಿಂದ ವಿನಾಯಿತಿ ನೀಡಿದ ಬಿಡಿಎ

ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರ ಒತ್ತಾಯಕ್ಕೆ ಮಣಿದ ಪ್ರಾಧಿಕಾರ
Last Updated 30 ಜೂನ್ 2021, 20:12 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನದಾರರಿಗೆ ನಿರ್ವಹಣೆ ಶುಲ್ಕದಿಂದ ವಿನಾಯಿತಿ ಪ್ರಕಟಿಸಿದೆ.

ಮೂಲಸೌಕರ್ಯ ಕಲ್ಪಿಸದಿರುವುದರಿಂದ ನಿವೇಶನದಾರರಿಂದ ನಿರ್ವಹಣೆ ಶುಲ್ಕ ವಸೂಲಿ ಮಾಡಬಾರದು ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆಯ ಮುಕ್ತ ವೇದಿಕೆಯ ನಿಯೋಗವು ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅವರನ್ನು ಬುಧವಾರ ಭೇಟಿ ಮಾಡಿ ಒತ್ತಾಯಿಸಿತ್ತು. ಇನ್ನೊಂದೆಡೆ, ನಾಡಪ್ರಭು ಕೆಂಪೇಗೌಡ ಬಡಾವಣೆಯ ಪ್ರಗತಿಪರರ ವೇದಿಕೆಯವರು ಬಡಾವಣೆಯಲ್ಲಿ ಪ್ರತಿಭಟನೆ ನಡೆಸಿ ನಿರ್ವಹಣಾ ಶುಲ್ಕ ಕೈಬಿಡುವಂತೆ ಒತ್ತಾಯಿಸಿದ್ದರು. ಬಳಿಕ ಅಧಿಕಾರಿಗಳ ಜತೆಗೆ ಎಸ್‌.ಆರ್‌.ವಿಶ್ವನಾಥ್‌ ಸಭೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ‘ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಕಲ್ಪಿಸುವ ಯೋಜನೆಗಳನ್ನು ಈಗಷ್ಟೇ ಅನುಷ್ಠಾನಗೊಳಿಸಲಾಗುತ್ತಿದೆ. ಪೂರ್ಣಪ್ರಮಾಣದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸದಿರುವ ಕಾರಣ ಈ ಬಡಾವಣೆಗೆ ಸೀಮಿತವಾಗಿ ನಿರ್ವಹಣಾ ಶುಲ್ಕದಿಂದ ವಿನಾಯ್ತಿ ನೀಡಲು ನಿರ್ಧರಿಸಲಾಗಿದೆ. ಈ ಪ್ರಸ್ತಾಪಕ್ಕೆ ಸದ್ಯದಲ್ಲೇ ನಡೆಯಲಿರುವ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಘಟನೋತ್ತರ ಮಂಜೂರಾತಿ ನೀಡಲಿದ್ದೇವೆ’ ಎಂದು ತಿಳಿಸಿದರು.

‘ಬಿಡಿಎ ಸ್ವಚ್ಛತಾ ಸಿಬ್ಬಂದಿಯನ್ನು ಹೊಂದಿಲ್ಲ. ಹಾಗಾಗಿ ಕೆಲವು ಬಡಾವಣೆಗಳನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ. ಪ್ರಾಧಿಕಾರವು ನಿವೇಶನಗಳ ಮಾಲೀಕರಿಂದ ನಿರ್ವಹಣಾ ಶುಲ್ಕ ಸಂಗ್ರಹಿಸಿ ಬಿಬಿಎಂಪಿಗೆ ನೀಡುತ್ತದೆ. ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ನಿರ್ವಹಣಾ ಶುಲ್ಕ ನಿಗದಿಪಡಿಸಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ವಾಣಿಜ್ಯ ಸಂಕೀರ್ಣ ನಿರ್ಮಾಣ ಒಪ್ಪಂದ ಮರುಪರಿಶೀಲನೆ’
‘ತನ್ನ ಜಾಗದಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಬಿಡಿಎ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಇದರಿಂದ ಪ್ರಾಧಿಕಾರಕ್ಕೆ ನಿರೀಕ್ಷಿತ ವರಮಾನ ಬಂದಿಲ್ಲ. ಈ ಒಪ್ಪಂದ ಗುತ್ತಿಗೆ ಪಡೆದ ಖಾಸಗಿ ಕಂಪನಿಗಳಿಗೆ ಹೆಚ್ಚು ಲಾಭ ಮಾಡಿಕೊಡಲಿದೆ. ಪ್ರಾಧಿಕಾರಕ್ಕೆ ಹೆಚ್ಚಿನ ವರಮಾನ ಬರುವ ರೀತಿಯಲ್ಲಿ ಮರು ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಗುತ್ತಿಗೆದಾರ ಕಂಪನಿಗಳ ಜೊತೆ ಚರ್ಚಿಸಲಾಗಿದ್ದು, ವಾರದೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದ್ದೇವೆ’ ಎಂದು ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದರು.

‘ಹಳೆ ಒಪ್ಪಂದವನ್ನು ಮುಂದುವರಿಸಿದರೆ ಬಿಡಿಎಗೆ ತನ್ನ ಜಾಗದ ಮೇಲಿನ ಹಿಡಿತ ಸಡಿಲವಾಗುವುದಲ್ಲದೇ ವರಮಾನವೂ ಕಡಿತವಾಗಲಿದೆ. ಖಾಸಗಿ ಕಂಪನಿಗಳು ಬಿಡಿಎ ಷರತ್ತುಗಳಿಗೆ ಸಹಮತ ವ್ಯಕ್ತಪಡಿಸದಿದ್ದಲ್ಲಿ ಪ್ರಾಧಿಕಾರವೇ ವಾಣಿಜ್ಯ ಸಂಕೀರ್ಣಗಳನ್ನು ಅಭಿವೃದ್ಧಿಪಡಿಸಿ ಬಾಡಿಗೆಗೆ ನೀಡಲಿದೆ. ಕಂಪನಿಗಳು ನೀಡುವ ಅಭಿಪ್ರಾಯಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಅವರು ತಿಳಿಸಿದರು.

ಬಿಡಿಎ ಆಯುಕ್ತ ಎಂ.ಬಿ. ರಾಜೇಶ್ ಗೌಡ, ಎಂಜಿನಿಯರಿಂಗ್‌ ಸದಸ್ಯ ಶಾಂತರಾಜಣ್ಣ ಸಭೆಯಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT