ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಅಕ್ರಮ l ಮೂಲೆ ನಿವೇಶನ ಬದಲಿ ನಿವೇಶನವಾಗಿ ಹಂಚಿಕೆ!

ಕೆಎಎಸ್‌ ಅಧಿಕಾರಿ, ಇಬ್ಬರು ಎಂಜಿನಿಯರ್‌ಗಳ ವಿಚಾರಣೆಗೆ ಅನುಮತಿ ನೀಡುವಂತೆ ಶಿಫಾರಸು
Last Updated 27 ಜನವರಿ 2022, 21:28 IST
ಅಕ್ಷರ ಗಾತ್ರ

ಬೆಂಗಳೂರು: ಬದಲಿ ನಿವೇಶನದ ರೂಪದಲ್ಲಿ ಮೂಲೆ ನಿವೇಶನವನ್ನು ಹಂಚಿಕೆ ಮಾಡುವ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವ ಆರೋಪದ ಮೇರೆಗೆ ಪ್ರಾಧಿಕಾರದಲ್ಲಿ ಈ ಹಿಂದೆ ಉಪಕಾರ್ಯದರ್ಶಿ–2 ಆಗಿ ಕಾರ್ಯನಿರ್ವಹಿಸಿದ್ದ ದಯಾನಂದ ಭಂಡಾರಿ, ದಕ್ಷಿಣ ವಲಯದಲ್ಲಿ ಕಾರ್ಯಪಾಲಕ ಎಂಜಿನಿಯರ್‌ (ಇ.ಇ) ಆಗಿದ್ದ ಎನ್‌.ವಿಶ್ವನಾಥ್‌ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಆಗಿದ್ದ ಎಚ್.ಎಸ್.ಮಂಜುನಾಥ್ ಅವರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ವಿಚಾರಣೆಯ ತೂಗುಗತ್ತಿ ಎದುರಿಸುತ್ತಿದ್ದಾರೆ.

ನಿಯಮಗಳನ್ನು ಮೀರಿ ಮೂಲೆ ನಿವೇಶನವನ್ನು ಬದಲಿ ನಿವೇಶನದ ರೂಪದಲ್ಲಿ ಹಂಚಿಕೆ ಮಾಡಿದ್ದ ಬಗ್ಗೆ ವೇಣುಗೋಪಾಲಕೃಷ್ಣ ಎಂಬುವವರು ಎಸಿಬಿಗೆ ದೂರು ಸಲ್ಲಿಸಿದ್ದರು. ಈ ಅರ್ಜಿಯಲ್ಲಿರುವ ಆರೋಪಗಳನ್ನು ಪ್ರಾಧಿಕಾರದ ವಿಶೇಷ ಕಾರ್ಯಪಡೆ ಮತ್ತು ವಿಜಿಲೆನ್ಸ್ ವಿಭಾಗವು ಆಂತರಿಕ ತನಿಖೆಗೆ ಒಳಪಡಿಸಿತ್ತು. ಈ ಮೂವರು ಅಧಿಕಾರಿಗಳನ್ನು ಎಸಿಬಿಯಿಂದ ವಿಚಾರಣೆ / ತನಿಖೆ ನಡೆಸಲು 1988ರ ಭ್ರಷ್ಟಾಚಾರ ತಡೆ ಕಾಯ್ದೆಯ ನಿಯಮ 17(ಎ) ಅನ್ವಯ ಎಸಿಬಿಗೆ ಅನುಮತಿ ನೀಡಬಹುದು ಎಂದು ಬಿಡಿಎ ಆಯುಕ್ತ ಎಂ.ಬಿ.ರಾಜೇಶ ಗೌಡ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಏನಿದು ಪ್ರಕರಣ?: ಶ್ರೀನಿವಾಸಗೌಡ ಅವರಿಗೆ ಬನಶಂಕರಿ ಬಡಾವಣೆಯ ಆರನೇ ಹಂತದ 4ನೇ ಬ್ಲಾಕ್‌ನಲ್ಲಿ 12x18 ಮೀಟರ್‌ ಅಳತೆಯ ನಿವೇಶನವನ್ನು (ಸಂಖ್ಯೆ 927) ಬಿಡಿಎ 2003-04ರಲ್ಲಿ ಹಂಚಿಕೆ ಮಾಡಿತ್ತು. ಇದು ಮೂಲೆ ನಿವೇಶನವಾಗಿದ್ದರಿಂದ ಹಂಚಿಕೆಯನ್ನು ರದ್ದುಪಡಿಸಿದ್ದ ಬಿಡಿಎ, ಅದೇ ಬಡಾವಣೆಯ 4ನೇ ಬಿ ಬ್ಲಾಕ್‌ನಲ್ಲಿ ಅಷ್ಟೇ ವಿಸ್ತೀರ್ಣದ ಬದಲಿ ನಿವೇಶನವನ್ನು (ಸಂಖ್ಯೆ 1116ಎ) 2004ರ ನ.2ರಂದು ಹಂಚಿಕೆ ಮಾಡಿತ್ತು.

ಇದಾಗಿ 10 ವರ್ಷಗಳ ನಂತರ (2015ರ ನ.3ರಂದು) ಶ್ರೀನಿವಾಸ ಗೌಡ ಅವರು ‘ತನಗೆ ಮಂಜೂರಾದ ನಿವೇಶನವು ಕಲ್ಲುಬಂಡೆಗಳಿಂದ ಕೂಡಿದೆ. ಇದು ವಾಸ ಯೋಗ್ಯವಾಗಿಲ್ಲದ ಕಾರಣ ಮತ್ತೆ ಬದಲಿ ನಿವೇಶನವನ್ನು ಹಂಚಿಕೆ ಮಾಡಬೇಕು’ ಎಂದು ಕೋರಿ ಬಿಡಿಎ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಸ್ಥಳ (ನಿವೇಶನ ಸಂ. 1116ಎ) ಪರಿಶೀಲಿಸಿ ವಸ್ತುಸ್ಥಿತಿಯ ವರದಿ ನೀಡುವಂತೆ ಉಪ ಕಾರ್ಯದರ್ಶಿ–4 ಅವರು ದಕ್ಷಿಣ ವಿಭಾಗದ ಇ.ಇ ವಿಶ್ವನಾಥ್ ಅವರಿಗೆ 2015ರ ನ.6ರಂದು ಸೂಚಿಸಿದ್ದರು. ವಿಶ್ವನಾಥ್ ಹಾಗೂ ಎಇಇ ಮಂಜುನಾಥ್ ಈ ಬಗ್ಗೆ ವರದಿ ನೀಡಿದ್ದು, ಶ್ರೀನಿವಾಸಗೌಡ ಅವರಿಗೆ ಹಂಚಿಕೆಯಾದ ನಿವೇಶನವು ಕಲ್ಲುಬಂಡೆಗಳಿಂದ ಕೂಡಿರುವುದನ್ನು ಖಚಿತಪಡಿಸಿದ್ದರು.

ಬಿಡಿಎ ಆಯುಕ್ತರ ಅಧ್ಯಕ್ಷತೆಯಲ್ಲಿ 2016ರ ಜ.2ರಂದು ನಡೆದ ನಿವೇಶನ ಹಂಚಿಕೆ ಸಮಿತಿಯ ಸಭೆಯಲ್ಲಿ ಬನಶಂಕರಿ ಬಡಾವಣೆಯ 6ನೇ ಹಂತದ 1ನೇ ಬ್ಲಾಕ್‌ನಲ್ಲಿ ಶ್ರೀನಿವಾಸ ಗೌಡ ಅವರಿಗೆ ಬದಲಿ
ನಿವೇಶನ (ಸಂಖ್ಯೆ 1293) ಹಂಚಿಕೆ ಮಾಡಲು ತೀರ್ಮಾನಿಸಲಾಗಿತ್ತು. 2016ರ ಫೆ. 9ರಂದು ಆಗಿನ ಉಪಕಾರ್ಯದರ್ಶಿ–2 ಅವರು ‌ನಿವೇಶನ ಸಂಖ್ಯೆ 1293ರ ಖಚಿತ ಅಳತೆ ವರದಿ (ಸಿಡಿಆರ್‌) ನೀಡುವಂತೆ ದಕ್ಷಿಣ ವಿಭಾಗದ ಇ.ಇ.ಗೆ ಸೂಚಿಸಿದ್ದರು. ಶ್ರೀನಿವಾಸ ಗೌಡ ಅವರಿಗೆ ಉಪಕಾರ್ಯದರ್ಶಿ–2 ಅವರು 2016ರ ಫೆ. 9ರಂದೇ ಬದಲಿ ನಿವೇಶನವನ್ನೂ (ಸಂಖ್ಯೆ 1293) ಹಂಚಿಕೆ ಮಾಡಿದ್ದರು.

ಈ ಬಗ್ಗೆ ಎಸಿಬಿಗೆ ದೂರು ಸಲ್ಲಿಕೆಯಾದ ಬಳಿಕ ಪ್ರಾಧಿಕಾರದ ಬಡಾವಣೆಯ ನಕ್ಷೆಯನ್ನು ಪರಿಶೀಲಿಸಿದಾಗ 1293 ಸಂಖ್ಯೆಯ ನಿವೇಶನವೂ ಮೂಲೆ ನಿವೇಶನ ಎಂದು ಗೊತ್ತಾಗಿತ್ತು. ಬಿಡಿಎಯ ಮೂಲೆ ನಿವೇಶನ ಮತ್ತು ವಾಣಿಜ್ಯ ನಿವೇಶನಗಳ ವಿಲೇವಾರಿ ನಿಯಮಗಳು–1984ರ ಕಲಂ 3ರ ಪ್ರಕಾರ, ಯಾವುದೇ ಮೂಲೆ ನಿವೇಶನವನ್ನು ಹರಾಜಿನ ಮೂಲಕವೇ ಮಾರಾಟ ಮಾಡಬೇಕಿದೆ. ಅದನ್ನು ಬದಲಿ ನಿವೇಶನವನ್ನಾಗಿ ಹಂಚಿಕೆ ಮಾಡುವಂತಿಲ್ಲ.

‘ಶ್ರೀನಿವಾಸಗೌಡ ಅವರಿಗೆ ಈ ಹಿಂದೆ ಮಂಜೂರು ಮಾಡಿದ್ದ ಬದಲಿ ನಿವೇಶನದಲ್ಲಿ (ಸಂಖ್ಯೆ 1116ಎ) ಕಲ್ಲು ಬಂಡೆಗಳಿರಲಿಲ್ಲ. ಆದರೂ ದಕ್ಷಿಣ ವಿಭಾಗದ ಇ.ಇ ವಿಶ್ವನಾಥ್ ಹಾಗೂ ಎಇಇ ಎಚ್.ಎಸ್. ಮಂಜುನಾಥ್ ಅವರು ತಪ್ಪಾಗಿ ವರದಿ ನೀಡಿದ್ದಲ್ಲದೇ, ನಿವೇಶನದಾರರಿಗೆ ಬದಲಿ ನಿವೇಶನ ಪಡೆಯಲು ಖಚಿತ ಅಳತೆವರದಿಯನ್ನೂ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ. ಈ ವಿಚಾರಗಳು ತಿಳಿದಿದ್ದರೂ ಉಪ ಕಾರ್ಯದರ್ಶಿ–2 ಆಗಿದ್ದ ದಯಾನಂದ ಭಂಡಾರಿ ಅವರು ಶ್ರೀನಿವಾಸಗೌಡ ಅವರಿಗೆ ಬದಲಿ ನಿವೇಶನದ ರೂಪದಲ್ಲಿ ಮೂಲೆ ನಿವೇಶನ (ಸಂಖ್ಯೆ 1293) ಮಂಜೂರು ಮಾಡಿ ಹಂಚಿಕೆ ಪತ್ರ ನೀಡಿದ್ದಾರೆ. ಇದರಿಂದ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದೆ. ಈ ಅಧಿಕಾರಿಗಳ ವಿರುದ್ಧದ ಆರೋಪಗಳ ತನಿಖೆ ಹಾಗೂ ವಿಚಾರಣೆ ನಡೆಸಲು ಎಸಿಬಿಗೆ ಅನುಮತಿ ನೀಡಬಹುದು’ ಎಂದು ಬಿಡಿಎ ಆಯುಕ್ತರು 2022ರ ಜ. 17ರಂದು ನಗರಾಭಿವೃದ್ಧಿ ಇಲಾಖೆಗೆ ಅಭಿಪ್ರಾಯ ಸಲ್ಲಿಸಿದ್ದಾರೆ.

‘ಸಿ.ಎಂ. ಅನುಮತಿ ನೀಡಿದ ಬಳಿಕ ವಿಚಾರಣೆಗೆ ಕ್ರಮ’

‘ಬಿಡಿಎಗೆ ನಷ್ಟ ಉಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಎಸಿಬಿ ವಿಚಾರಣೆಗೆ ಅನುಮತಿ ನೀಡುವ ಬಗ್ಗೆ ಬಿಡಿಎ ಮಾಡಿರುವ ಶಿಫಾರಸುಗಳನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದ್ದೇವೆ. ಅವರಿಂದ ಒಪ್ಪಿಗೆ ಸಿಕ್ಕ ತಕ್ಷಣವೇ, ಕೆಎಎಸ್‌ ಅಧಿಕಾರಿಗಳನ್ನು ಎಸಿಬಿಯಿಂದ ವಿಚಾರಣೆ ಒಳಪಡಿಸುವ ಬಗ್ಗೆ ಸೂಕ್ತ ಆದೇಶ ಹೊರಡಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕೋರುತ್ತೇವೆ. ಬಿಡಿಎ ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡುವಂತೆ ಪ್ರಾಧಿಕಾರಕ್ಕೆ ಸೂಚನೆ ನೀಡುತ್ತೇವೆ’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ತಿಳಿಸಿದ್ದಾರೆ.

’ಪ್ರಜಾವಾಣಿ‘ಯಲ್ಲಿ ಗುರುವಾರ ಪ್ರಕಟವಾದ ’ಬಿಡಿಎ: ಬದಲಿ ನಿವೇಶನ– ಮತ್ತೊಂದು ಅಕ್ರಮ‘ ವರದಿಯಲ್ಲಿನ ’ನಗರಾಭಿವೃದ್ಧಿ ಇಲಾಖೆ ಮೀನಮೇಷ‘ ಎಂಬ ಅಂಶಕ್ಕೆ ಈ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT