ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎ ನಿವೇಶನ: ಮಾರಾಟ ಮಾಡಲಿದೆ ಬಿಡಿಎ

ನಿವೇಶನದ ಮಾಲೀಕತ್ವ ಬಿಟ್ಟುಕೊಡಲು ಬಿಡಿಎ ಕಾಯ್ದೆಯ ನಿಯಮಗಳಿಗೆ ತಿದ್ದುಪಡಿ
Last Updated 8 ಆಗಸ್ಟ್ 2020, 21:11 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಬೇರೆ ಬೇರೆ ಉದ್ದೇಶಗಳಿಗಾಗಿ ವಿವಿಧ ಸಂಸ್ಥೆಗಳಿಗೆ ನಿರ್ದಿಷ್ಟ ಅವಧಿಯವರೆಗೆ ಗುತ್ತಿಗೆಗೆ ನೀಡಿರುವ ನಾಗರಿಕ ಮೂಲಸೌಕರ್ಯ (ಸಿ.ಎ) ನಿವೇಶನಗಳ ಮಾಲೀಕತ್ವವನ್ನು ಆ ಸಂಸ್ಥೆಗಳಿಗೇ ಮಾರಾಟ ಮಾಡಲಿದೆ. ಈ ಸಲುವಾಗಿ ನಗರಾಭಿವೃದ್ಧಿ ಇಲಾಖೆಯು 1976ರ ಬಿಡಿಎ ಕಾಯ್ದೆಯ ಸೆಕ್ಷನ್‌ 69ರ ಅಡಿ ಲಭ್ಯವಿರುವ ಅಧಿಕಾರವನ್ನು ಬಳಸಿ ಬಿಡಿಎ ಕಾಯ್ದೆ (ಸಿ.ಎ ನಿವೇಶನ ಹಂಚಿಕೆ) ನಿಯಮಗಳಿಗೆ ತಿದ್ದುಪಡಿ ತಂದಿದೆ.

ಹಿಂದಿನ ನಿಯಮಗಳಿಗೆ ‘10–ಎ’ ನಿಯಮವನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸುವ ಮೂಲಕ ಸಿ.ಎ. ನಿವೇಶನಗಳ ಮಾರಾಟಕ್ಕೆ ಮಾನದಂಡಗಳನ್ನು ಗೊತ್ತುಪಡಿಸಲಾಗಿದೆ. ಪರಿಷ್ಕೃತ ನಿಯಮಾವಳಿಯನ್ನು 2020ರ ಜುಲೈ 28ರಂದು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

ಇದುವರೆಗೆ ಸಿ.ಎ ನಿವೇಶನಗಳನ್ನು ಸಂಸ್ಥೆಗಳಿಗೆ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗುತ್ತಿತ್ತು. ಈ ಅವಧಿ ಮುಗಿದ ಬಳಿಕ ಸಂಸ್ಥೆಗಳು ನಿಗದಿತ ಶುಲ್ಕವನ್ನು ಪಾವತಿಸಿ ಗುತ್ತಿಗೆ ನವೀಕರಿಸಬಹುದಾಗಿತ್ತು. ನಿವೇಶನದ ಸಂಪೂರ್ಣ ಮಾಲೀಕತ್ವವನ್ನು ಸಂಸ್ಥೆಗಳಿಗೆ ಬಿಟ್ಟುಕೊಡುವುದಕ್ಕೆ ಅವಕಾಶ ಇರಲಿಲ್ಲ.

ನಿವೇಶನಕ್ಕೆ ನಿರ್ದಿಷ್ಟ ದರವನ್ನು ನಿಗದಿಪಡಿಸಿ, ಮಾಲೀಕತ್ವವನ್ನು ತಮಗೇ ಬಿಟ್ಟುಕೊಡುವಂತೆ ಅನೇಕ ಸಂಸ್ಥೆಗಳು ಸರ್ಕಾರವನ್ನು ಒತ್ತಾಯಿಸಿದ್ದವು. ಈ ಸಲುವಾಗಿ ತಿದ್ದುಪಡಿ ತರುವ ಬಗ್ಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಚರ್ಚೆಗಳು ನಡೆದಿದ್ದವು. ಆದರೆ, ನಿಯಮಗಳ ಪರಿಷ್ಕರಣೆ ಆಗಿರಲಿಲ್ಲ.

10 –ಎ’ ನಿಯಮದಲ್ಲೇನಿದೆ?

ಈಗಾಗಲೇ ಸಿ.ಎ ನಿವೇಶನವನ್ನು ಹಂಚಿಕೆ ಮಾಡಿರುವ ಉದ್ದೇಶಕ್ಕೇ ಅದನ್ನು ಬಳಸುತ್ತಿರುವ ಸಂಸ್ಥೆಗಳು ಬಿಡಿಎ ನಿಗದಿಪಡಿಸಿದಷ್ಟು ಮೌಲ್ಯವನ್ನು ಪಾವತಿಸಿ ಆ ನಿವೇಶನ ಖರೀದಿಸಬಹುದು. ಬಿಡಿಎ ನಿಯಮ 7ರ ಉಪವಿಧಿ 2ರ ಅಡಿ ಸ್ಥಾಪಿಸಿರುವ ಸಿ.ಎ ನಿವೇಶನ ಹಂಚಿಕೆ ಸಮಿತಿಯು ನಿವೇಶನದ ಮೌಲ್ಯವನ್ನು ಅಂತಿಮಗೊಳಿಸಲಿದೆ.ನಿವೇಶನದ ಮೌಲ್ಯವು ಅದರ ಈಗಿನ ಮಾರ್ಗಸೂಚಿ ದರಕ್ಕಿಂತ ಕಡಿಮೆ ಇರುವಂತಿಲ್ಲ.

ಮುಂಬರುವ ವರ್ಷಗಳ ಶುಲ್ಕವನ್ನೂ ಸಂಸ್ಥೆಯು ಈಗಾಗಲೇ ಬಿಡಿಎಗೆ ಪಾವತಿಸಿದ್ದರೆ ಅದನ್ನು ಪ್ರೋ–ರೇಟಾ ಆಧಾರದಲ್ಲಿ ಲೆಕ್ಕ ಹಾಕಿ ನಿವೇಶನದ ಒಟ್ಟು ಮೌಲ್ಯದಲ್ಲಿ ಆ ಮೊತ್ತವನ್ನು ಕಡಿತಗೊಳಿಸಬಹುದು. ಬಾಕಿ ಮೊತ್ತವನ್ನು ಸಂಸ್ಥೆಯು ಮೂರು ಕಂತುಗಳಲ್ಲಿ ಪಾವತಿಸಬಹುದು. ಮೊದಲ ಕಂತನ್ನು ಬಿಡಿಎ ಬೇಡಿಕೆ ನೋಟಿಸ್‌ ಸಲ್ಲಿಸಿದ 72 ಗಂಟೆಗಳ ಒಳಗೆ ಪಾವತಿಸಬೇಕು. ಎರಡನೇ ಕಂತನ್ನು 45 ದಿನಗಳ ಒಳಗೆ ಹಾಗೂ ಅಂತಿಮ ಕಂತನ್ನು 120 ದಿನಗಳ ಒಳಗೆ ಪಾವತಿ ಮಾಡಬೇಕು. ಬಿಡಿಎ ಜೊತೆಗೆ ಕ್ರಯಪತ್ರವನ್ನು ಮಾಡಿಕೊಂಡ ದಿನದಿಂದ ಸಂಸ್ಥೆಯು ನಿವೇಶನದ ಪೂರ್ಣ ಮಾಲೀಕತ್ವವನ್ನು ಪಡೆಯಲಿದೆ.

ಸಂಸ್ಥೆಯು ಮೂಲಸೌಕರ್ಯ ನಿವೇಶನವನ್ನು ವಿಭಜಿಸುವಂತಿಲ್ಲ. ಕ್ರಯಪತ್ರವು ಜಾರಿಗೆ ಬಂದ ದಿನದಿಂದ ನಿವೇಶನಕ್ಕೆ ಹಾಗೂ ಅಲ್ಲಿನ ಕಟ್ಟಡಕ್ಕೆ ತೆರಿಗೆ, ಶುಲ್ಕ ಹಾಗೂ ನಿಗದಿತ ಸೆಸ್‌ಗಳನ್ನು ಪಾವತಿಸುವ ಹೊಣೆ ಆ ಸಂಸ್ಥೆಯದ್ದಾಗಲಿದೆ. ಕ್ರಯಪತ್ರ ಮಾಡಿಕೊಂಡ 10 ವರ್ಷಗಳ ಬಳಿಕ ಸಿ.ಎ ನಿವೇಶನವನ್ನು ಸಂಸ್ಥೆಯು ಮಾರಾಟ ಮಾಡಬಹುದು. ಆದರೆ, ಅದನ್ನು ಖರೀದಿಸುವ ಸಂಸ್ಥೆಯೂ ಆ ನಿವೇಶನವನ್ನು ಯಾವ ಉದ್ದೇಶಕ್ಕೆ ಹಂಚಿಕೆ ಮಾಡಲಾಗಿತ್ತೋ ಅದಕ್ಕೆ ಮಾತ್ರ ಬಳಸಬಹುದು. ಬಿಡಿಎ ಗಮನಕ್ಕೆ ತಾರದೆಯ ಮಾರಾಟ ನಡೆಸುವಂತಿಲ್ಲ.

‘1,248 ನಿವೇಶನಗಳಿಗೆ ಮಾತ್ರ ಅನ್ವಯ’

ಬಿಡಿಎ ಇದುವರೆಗೆ ಒಟ್ಟು 1,248 ಸಿ.ಎ ನಿವೇಶನಗಳನ್ನು ಹಂಚಿಕೆ ಮಾಡಿದೆ. ಈ ನಿವೇಶನಗಳನ್ನು ಈಗಾಗಲೇ ಗುತ್ತಿಗೆಗೆ ಪಡೆದ ಸಂಸ್ಥೆಗಳಿಗೆ ಮಾಲೀಕತ್ವವನ್ನು ಮಾರಾಟ ಮಾಡುವುದಕ್ಕೆ ಮಾತ್ರ ಪರಿಷ್ಕೃತ ನಿಯಮವು ಅನ್ವಯವಾಗಲಿದೆ.

‘ಬಿಡಿಎ ಇದುವರೆಗೆ ಹಂಚಿಕೆ ಮಾಡಿರುವ ಸಿ.ಎ ನಿವೇಶನಗಳನ್ನು ಮಾತ್ರ ನಾವು ಮಾರಾಟ ಮಾಡಲಿದ್ದೇವೆ. ಹಂಚಿಕೆಗೆ ಬಾಕಿ ಇರುವ ಸಿ.ಎ ನಿವೇಶನಗಳ ಮಾರಾಟಕ್ಕೆ ಪರಿಷ್ಕೃತ ನಿಯಮದಲ್ಲೂ ಅವಕಾಶ ಇಲ್ಲ. ಅವುಗಳ ಹಂಚಿಕೆ ಈ ಹಿಂದಿನಂತೆಯೇ ನಡೆಯಲಿದೆ. ಇದು ಒಮ್ಮೆಗೆ ಮಾತ್ರ ಜಾರಿ ತಂದಿರುವ ವ್ಯವಸ್ಥೆ. ಇನ್ನು ಗುತ್ತಿಗೆ ಆಧಾರದಲ್ಲಿ ಹಂಚಿಕೆ ಮಾಡುವ ನಿವೇಶನಗಳನ್ನು ಭವಿಷ್ಯದಲ್ಲಿ ಅದೇ ಸಂಸ್ಥೆ ಖರೀದಿ ಮಾಡುವುದಕ್ಕೆ ಪರಿಷ್ಕೃತ ನಿಯಮ ಅವಕಾಶ ಕಲ್ಪಿಸುವುದಿಲ್ಲ’ ಎಂದು ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿ.ಎ. ನಿವೇಶನಗಳನ್ನು ಗುತ್ತಿಗೆಗೆ ಪಡೆದವರು ಶುಲ್ಕ ಬಾಕಿ ಇರಿಸಿಕೊಂಡಿದ್ದರೆ, ಅದನ್ನು ಚುಕ್ತಾ ಮಾಡಿದ ಬಳಿಕವಷ್ಟೇ ಅವರಿಗೆ ಆ ನಿವೇಶನ ಖರೀದಿಸುವ ಅವಕಾಶ ಸಿಗಲಿದೆ. ನಿವೇಶನವನ್ನು ಖರೀದಿಸಿದ ಬಳಿಕವೂ ಬಿಡಿಎ ಹಂಚಿಕೆ ಮಾಡಿದಾಗ ಗೊತ್ತುಪಡಿಸಿದ ಉದ್ದೇಶಕ್ಕೆ ಮಾತ್ರ ಅದನ್ನು ಬಳಸಬೇಕು. ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಸಿ.ಎ ನಿವೇಶನಗಳ ಮಾರಾಟದಿಂದ ಎಷ್ಟು ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಸಾಧ್ಯ ಎಂಬುದನ್ನು ಇನ್ನೂ ಲೆಕ್ಕ ಹಾಕಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT