ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಮ ಕಾರಂತ ಬಡಾವಣೆಗೆ ಅನುಮೋದನೆ

3,546 ಎಕರೆ 12 ಗುಂಟೆ, ₹5,337 ಕೋಟಿ ವೆಚ್ಚದಲ್ಲಿ ನಿರ್ಮಾಣ
Last Updated 8 ಜುಲೈ 2022, 19:22 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಶಿವರಾಮ ಕಾರಂತ ಬಡಾವಣೆಯನ್ನು 17 ವಿವಿಧ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ರಚಿಸುವ ಯೋಜನೆಗೆ ರಾಜ್ಯ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.

ಒಟ್ಟು 3,546 ಎಕರೆ 12 ಗುಂಟೆಯಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಿಸಲು ₹5,337 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಮಾಡಬೇಕಿದ್ದು, ಕಾಲಕಾಲಕ್ಕೆ ನ್ಯಾಯಾಲಯ ನೀಡುವ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಸರ್ಕಾರ ವಿಧಿಸಿರುವ ಷರತ್ತುಗಳಿಗೆ ಒಳಪಟ್ಟು, ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ಪಡೆದು ಯೋಜನೆ ಅನುಷ್ಠಾನಗೊಳಿಸಬೇಕು. ಈ ಯೋಜನೆಗೆ ಸರ್ಕಾರ ಈಗಾಗಲೇ ಮಂಜೂರು ನೀಡಿದೆ. ಹೀಗಾಗಿ ಪ್ರಾಧಿಕಾರ ಸಭೆಯ ಅನುಮೋದನೆ ಪಡೆದು ಟೆಂಡರ್‌ಗಳನ್ನು ಆಹ್ವಾನಿಸಬಹುದು.

ಬಡಾವಣೆ ರಚನೆ ಯೋಜನೆಯನ್ನು ನಿರ್ದಿಷ್ಟಪಡಿಸಿರುವ ಕಾಲಮಿತಿಯಲ್ಲಿ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಂಡು ಅನುಷ್ಠಾನಕ್ಕೆ ತರಬೇಕು. ಒಟ್ಟಾರೆ ಪ್ರದೇಶದ ಶೇ 45ರಷ್ಟನ್ನು ಉದ್ಯಾನ, ನಾಗರಿಕ ಸೌಲಭ್ಯ ಮತ್ತು ರಸ್ತೆಗಾಗಿ ಮೀಸಲಿಡಬೇಕು. ಬಿಡಿಎಗೆ ಶೇ 60 ಮತ್ತು ಭೂಮಾಲೀಕರಿಗೆ ಶೇ 40ರಷ್ಟು ಅಭಿವೃದ್ಧಿಪಡಿಸಿದ ಪ್ರದೇಶವನ್ನು ಹಂಚಿಕೆ ಮಾಡಬೇಕು.

ಹಾರೋಹಳ್ಳಿ, ಕಾಳತಿಮ್ಮನಹಳ್ಳಿ ಹಾಗೂ ಲಕ್ಷ್ಮೀಪುರ ಗ್ರಾಮಗಳಲ್ಲಿ ಸುಮಾರು 200 ಎಕರೆ ಪ್ರದೇಶವನ್ನು ವಸತಿ ಹಾಗೂ ವಾಣಿಜ್ಯ ಕಟ್ಟಡಗಳನ್ನು ಟೌನ್‌ಶಿಪ್‌ ಅಭಿವೃದ್ಧಿಗೆ ಗುರುತಿಸಲಾಗಿದೆ. ಸುಪ್ರೀಂ ಕೋರ್ಟ್‌ 150 ಎಕರೆ ಪ್ರದೇಶವನ್ನು ರಾಜೀವ್‌ಗಾಂಧಿ ವಸತಿ ನಿಗಮ ನಿಯಮಿತಕ್ಕೆ ಹಸ್ತಾಂತರಿಸಲು ನಿರ್ದೇಶಿಸಿದೆ. ಬಿಡಿಎ ಅಭಿವೃದ್ಧಿಪಡಿಸಿರುವ ವಸತಿ ಯೋಜನೆಗಳಲ್ಲಿ ಮಾರಾಟವಾಗದೇ ಹಲವಾರು ವಸತಿ ಗೃಹಗಳು ಉಳಿದಿವೆ. ಆದ್ದರಿಂದ ವಸತಿ ಮತ್ತು ವಾಣಿಜ್ಯ ಉದ್ದೇಶಕ್ಕೆ ಪ್ರತ್ಯೇಕ ಜಮೀನು ಮೀಸಲಿಡುವುದನ್ನು ಪರಿಶೀಲಿಸಬೇಕು.

ಐಐಎಸ್‌ಸಿ, ಲೋಕೋಪಯೋಗಿ ಇಲಾಖೆ ಹಾಗೂ ತಜ್ಞರೊಂದಿಗೆ ಬಿಡಿಎ ಅಧಿಕಾರಿಗಳು ತಾಂತ್ರಿಕ ಸಮಿತಿ ರಚಿಸಿ ಟೆಂಡರ್‌ ಪರಿಶೀಲಿಸಬೇಕು. ಪ್ರಾಧಿಕಾರದ ಶಿಫಾರಸಿನೊಂದಿಗೆ ಸರ್ಕಾರದ ಅನುಮೋದನೆಗೆ ಕಳುಹಿಸಬೇಕು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಕಾರ್ಯದರ್ಶಿ, ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿಯಿಂದ ಅಂತಿಮ ಅನುಮೋದನೆ ಪಡೆಯಬೇಕು ಎಂದು ಸರ್ಕಾರ ಶುಕ್ರವಾರ ಹೊರಡಿಸಿರುವ ಆದೇಶದಲ್ಲಿ ಷರತ್ತು ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT