ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ ಹಾನಿ: ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಚಾಟಿ

Published 3 ಜೂನ್ 2024, 16:27 IST
Last Updated 3 ಜೂನ್ 2024, 16:27 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರಕ್ಕೆ ಸಂಬಂಧಿಸಿದ ಯಾವ ಇಲಾಖೆಯೂ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಒತ್ತುವರಿ ತೆರವಿಗೆ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದು ಮೈಗೆ ಎಣ್ಣೆ ಹಚ್ಚಿಕೊಂಡು ಅಧಿಕಾರಿಗಳು ಸಬೂಬು ಹೇಳುವಂತಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಮಳೆ ಹಾನಿ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬೆಸ್ಕಾಂ, ಕೆಪಿಟಿಸಿಎಲ್, ಬಿಬಿಎಂಪಿ, ಜಲಮಂಡಳಿ, ಅರಣ್ಯ ಇಲಾಖೆ ಸೇರಿದಂತೆ ಬೆಂಗಳೂರಿಗೆ ಸಂಬಂಧಿಸಿದ ಯಾವ ಇಲಾಖೆಯೂ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ರಾಜಕಾಲುವೆಗೆ ಸಂಬಂಧಿಸಿದಂತೆ ಒಂದಷ್ಟು ಜನ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುತ್ತಾರೆ. ಇದನ್ನೇ ನೆಪ ಮಾಡಿಕೊಂಡು ಬಿಬಿಎಂಪಿ ರಾಜಕಾಲುವೆ ವಿಭಾಗದ ಎಂಜಿನಿಯರ್‌ಗಳು ಕೆಲಸದಿಂದ ನುಣುಚಿಕೊಳ್ಳುವಂತಿಲ್ಲ. ಒತ್ತುವರಿಯಾಗಿರುವ ಜಾಗಗಳು ಸರ್ಕಾರದ ಆಸ್ತಿಗಳು. ನೀರು ಹರಿಯಲು ತೊಂದರೆಯಾಗುವಲ್ಲಿ ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡಬೇಕು’ ಎಂದರು.

ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆ ಮತ್ತು ಬಿಬಿಎಂಪಿ ಜಂಟಿಯಾಗಿ ಸಮೀಕ್ಷೆ ನಡೆಸಿ ಕಾರ್ಯ ನಿರ್ವಹಿಸಬೇಕು. ತಗ್ಗಿನಲ್ಲಿರುವ ವಸತಿ ಪ್ರದೇಶಗಳಿಗೆ ನೀರು ನುಗ್ಗದಂತೆ ಉತ್ತಮ ಸಾಮರ್ಥ್ಯದ ಪಂಪ್‌ಸೆಟ್, ಜನರೇಟರ್‌ಗಳು ಹಾಗೂ ಹೆಚ್ಚು ನೀರು ಹರಿಯುವ ರಾಜಕಾಲುವೆ ಬಳಿ ಜೆಸಿಬಿ, ಟಿಪ್ಪರ್‌ಗಳನ್ನು ಮುನ್ನೆಚರಿಕೆ ಕ್ರಮವಾಗಿ ಸಿದ್ಧ ಮಾಡಿಕೊಂಡಿರಬೇಕು. ಎನ್‌ಡಿಆರ್‌ಎಫ್ ತಂಡದೊಟ್ಟಿಗೂ ಸಂಪರ್ಕದಲ್ಲಿರಬೇಕು ಸೂಚಿಸಲಾಗಿದೆ ಎಂದು ಹೇಳಿದರು.

‘ಜೂನ್‌ನಲ್ಲಿ ಉತ್ತಮ ಮಳೆ ಬಿದ್ದಿರುವುದು ನನಗೆ ಸಾಕಷ್ಟು ಸಂತೋಷವಾಗಿದೆ. ಮೂರು ಜನರಿಗೆ ಗಾಯಗಳಾಗಿವೆ. ವಾಹನಗಳು ಜಖಂಗೊಂಡಿವೆ. 265 ಮರಗಳು ಬಿದ್ದಿವೆ. 96 ಮರಗಳನ್ನು ತೆರವುಗೊಳಿಸಲಾಗಿದೆ. 365 ಕೊಂಬೆಗಳು ಬಿದ್ದಿದ್ದವು, ಎಲ್ಲವನ್ನು ತೆರವುಗೊಳಿಸಲಾಗಿದೆ. 261 ವಿದ್ಯುತ್ ಕಂಬಗಳು ಬಿದ್ದಿದ್ದವು. ಇದನ್ನು ಸರಿಪಡಿಸಲಾಗುತ್ತಿದೆ’ ಎಂದರು.

ನಗರದಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ಲಾ ಇಲಾಖೆಗಳು ಸರ್ವ ಸನ್ನದ್ಧವಾಗಿ ಕೆಲಸ ಮಾಡಬೇಕು. ಯಾವುದೇ ಜೀವ, ಆಸ್ತಿ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT