ಶುಕ್ರವಾರ, ಮಾರ್ಚ್ 31, 2023
25 °C
ಸರ ಕಳ್ಳನ ಹಿಡಿಯಲು ಹೋಗಿದ್ದ ಸಾಯಿಚರಣ್

ಬಿ.ಇ ವಿದ್ಯಾರ್ಥಿ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿನ್ನದ ಸರ ಕಳ್ಳತನ ವೇಳೆ ಮಹಿಳೆಯ ಸಹಾಯಕ್ಕೆ ಹೋಗಿದ್ದ ಸಾಯಿಚರಣ್‌ (22) ಎಂಬುವವರನ್ನು ಕೊಲೆ ಮಾಡಿದ್ದ ಅಪರಾಧಿ ಜಾನ್ಸನ್‌ಗೆ (21) ಜೀವಾವಧಿ ಶಿಕ್ಷೆ ವಿಧಿಸಿ ನಗರದ 29ನೇ ಸಿಸಿಎಚ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಎಚ್‌ಎಎಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಕೆ.ಎಂ. ರಾಜಶೇಖರ್ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಜಹಿದಾ ಬಾನು ವಾದಿಸಿದ್ದರು.

‘ವಿಭೂತಿಪುರ ನಿವಾಸಿ ಜಾನ್ಸನ್, ಎಚ್‌ಎಎಲ್‌ ಉದ್ಯೋಗಿಯೊಬ್ಬರ ಮಗ. ಅಪರಾಧ ಹಿನ್ನೆಲೆಯುಳ್ಳ ಈತ, ನಗರದಲ್ಲಿ ಸುತ್ತಾಡಿ ಮಹಿಳೆಯರ ಚಿನ್ನದ ಸರಗಳನ್ನು ಕಳವು ಮಾಡುತ್ತಿದ್ದ. ಈತನ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೊಲೆಯಾಗಿದ್ದ ಸಾಯಿಚರಣ್ ಆಂಧ್ರಪ್ರದೇಶದವರು. ಬಿ.ಇ ವ್ಯಾಸಂಗಕ್ಕಾಗಿ ನಗರಕ್ಕೆ ಬಂದಿದ್ದರು. 2017ರ ಜೂನ್ 10ರಂದು ಸಾಯಿಚರಣ್‌ ಅವರನ್ನು ಜಾನ್ಸನ್ ಕೊಲೆ ಮಾಡಿದ್ದ’ ಎಂದು ತಿಳಿಸಿವೆ.

ಬೈಕ್‌ನಲ್ಲಿ ಬೆನ್ನಟ್ಟಿದ್ದ ಸಾಯಿಚರಣ್: ‘ವಿಜ್ಞಾನನಗರದಲ್ಲಿ ಹೊರಟಿದ್ದ ಮಹಿಳೆಯೊಬ್ಬರನ್ನು ಹಿಂಬಾಲಿಸಿದ್ದ ಜಾನ್ಸನ್, ಚಿನ್ನದ ಸರ ಕಿತ್ತುಕೊಂಡು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದ. ಸಹಾಯಕ್ಕಾಗಿ ಮಹಿಳೆ ಕೂಗಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸ್ನೇಹಿತರ ಜೊತೆ ನಿಂತಿದ್ದ ಸಾಯಿಚರಣ್, ಮಹಿಳೆ ಕೂಗಾಟ ಕೇಳಿ ಸಹಾಯಕ್ಕೆ ಹೋಗಿದ್ದರು. ತಮ್ಮ ಪಲ್ಸರ್ ಬೈಕ್‌ನಲ್ಲಿ ಜಾನ್ಸನ್‌ನನ್ನು ಬೆನ್ನಟ್ಟಿದ್ದರು. ಕಗ್ಗದಾಸಪುರ ಮುಖ್ಯರಸ್ತೆಯಲ್ಲಿ ಜಾನ್ಸನ್‌ನನ್ನು ಅಡ್ಡಗಟ್ಟಿ, ಹಿಡಿದುಕೊಳ್ಳಲು ಮುಂದಾಗಿದ್ದರು. ಇದೇ ವೇಳೆಯೇ ಅಪರಾಧಿ, ಚಾಕುವಿನಿಂದ ಇರಿದು ಸಾಯಿಚರಣ್‌ ಅವರನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದ’ ಎಂದು ಮೂಲಗಳು ತಿಳಿಸಿವೆ.

‘ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಜಾನ್ಸನ್‌ನನ್ನು ಬಂಧಿಸಿದ್ದ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಜೀವಾವಧಿ ಶಿಕ್ಷೆ ಜೊತೆಯಲ್ಲಿ ಅಪರಾಧಿಗೆ ₹ 2 ಲಕ್ಷ ದಂಡವನ್ನೂ ವಿಧಿಸಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು