ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸಿಗೆ ಬ್ಲಾಕ್‌ ದಂಧೆ; ಮಹಿಳೆ ಸೇರಿ ಇಬ್ಬರ ಬಂಧನ

ಸೋಂಕಿತರ ಸಂಬಂಧಿಕರ ಹೆಸರಿನಲ್ಲಿ ಜಯನಗರ ಪೊಲೀಸರ ಕಾರ್ಯಾಚರಣೆ
Last Updated 4 ಮೇ 2021, 16:48 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರ ಹೆಸರಿನಲ್ಲಿ ಹಾಸಿಗೆ ಬ್ಲಾಕ್ ಮಾಡಿಸಿ ದುಬಾರಿ ಬೆಲೆಗೆ ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಜಯನಗರ ಪೊಲೀಸರು ಭೇದಿಸಿದ್ದು, ಜಾಲದಲ್ಲಿದ್ದ ಮಹಿಳೆ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

‘ಬೇಗೂರು ನಿವಾಸಿಗಳಾದ ನೇತ್ರಾವತಿ (42) ಹಾಗೂ ರೋಹಿತ್‌ಕುಮಾರ್ (32) ಬಂಧಿತರು. ಅವರ ಜೊತೆಗಿದ್ದ ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಮಿಷನರ್ ಸೂಚನೆಯಂತೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಂಡು ಓಡಾಡುತ್ತಿದ್ದ ನೇತ್ರಾವತಿ, ನೆರೆಮನೆಯ ರೋಹಿತ್ ಕುಮಾರ್ ಹಾಗೂ ಹಲವರನ್ನು ತನ್ನ ಜೊತೆ ಸೇರಿಸಿಕೊಂಡು ದಂಧೆ ನಡೆಸುತ್ತಿದ್ದಳು. ತಾನೇ ಕೊರೊನಾ ಸೋಂಕಿತರ ನೆರವಿಗಾಗಿ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡಿದ್ದಳು. ರೋಗಿಗಳನ್ನು ಅದರಲ್ಲಿ ಸೇರಿಸಿ ಪರಿಚಯ ಮಾಡಿಕೊಂಡು ಅವರ ಹೆಸರಿನಲ್ಲೇ ಹಾಸಿಗೆ ಕಾಯ್ದಿರಿಸಿ ಬ್ಲಾಕ್ ಮಾಡಿಸುತ್ತಿದ್ದಳು.’

‘ಕೊರೊನಾ ವಾರ್‌ ರೂಮ್ ಹಾಗೂ ಖಾಸಗಿ ಆಸ್ಪತ್ರೆ ಸಿಬ್ಬಂದಿ ಜೊತೆಯಲ್ಲಿ ಶಾಮೀಲಾಗಿ, ಹಾಸಿಗೆಗಳನ್ನು ಹೆಚ್ಚಿನ ಹಣ ಪಡೆದು ಮಾರುತ್ತಿದ್ದಳು. ಹಾಸಿಗೆ ಪಡೆಯುತ್ತಿದ್ದ ರೋಗಿಗಳು ಹಾಗೂ ಅವರ ಸಂಬಂಧಿಕರು, ಆರೋಪಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡುತ್ತಿದ್ದರು’ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.

ಬಂಧಿತರಾದ ನೇತ್ರಾವತಿ (42) ಹಾಗೂ ರೋಹಿತ್‌ಕುಮಾರ್ (32)
ಬಂಧಿತರಾದ ನೇತ್ರಾವತಿ (42) ಹಾಗೂ ರೋಹಿತ್‌ಕುಮಾರ್ (32)

‘ಆರೋಪಿ ನೇತ್ರಾವತಿ, ಜಯನಗರದ ಎರಡು ಖಾಸಗಿ ಆಸ್ಪತ್ರೆಯಲ್ಲಿ ತಲಾ ₹ 50 ಸಾವಿರಕ್ಕೆ ಎರಡು ಹಾಸಿಗೆಯನ್ನು ಕಾಯ್ದಿರಿಸಿದ್ದಳು. ಈ ಬಗ್ಗೆ ಅನುಮಾನಗೊಂಡ ಪೊಲೀಸರು, ಸೋಂಕಿತರ ಸಂಬಂಧಿಗಳ ವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಜಾಲದಲ್ಲಿ ಮತ್ತಷ್ಟು ಮಂದಿ ಶಾಮೀಲಾಗಿರುವ ಶಂಕೆ ಇದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT