ಶನಿವಾರ, ಜೂನ್ 19, 2021
24 °C
ಕೋವಿಡ್ ಹಾಸಿಗೆ ಹಂಚಿಕೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ

ಸರ್ಕಾರಕ್ಕೆ ಮೊದಲೇ ಮಾಹಿತಿ ನೀಡಿದ್ದ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಹಾಗೂ ಮೂವರು ಶಾಸಕರು ದಕ್ಷಿಣ ವಲಯದ ಕೋವಿಡ್ ವಾರ್‌ ರೂಮ್‌ ಮೇಲೆ ದಾಳಿ ನಡೆಸಿ ಹಾಸಿಗೆ ಬ್ಲಾಕಿಂಗ್‌ ಪ್ರಕರಣ ಬಯಲಿಗೆ ಎಳೆಯುವುದಕ್ಕೆ ಹಲವು ದಿನಗಳ ಮೊದಲೇ ಅಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದರು ಎಂಬ ವಿಷಯ ಬಹಿರಂಗಗೊಂಡಿದೆ.

ಬೊಮ್ಮನಹಳ್ಳಿ ವಲಯದಲ್ಲಿ ಬರುವ ಬನ್ನೇರುಘಟ್ಟದ ಅಪೊಲೊ ಆಸ್ಪತ್ರೆಯು ಮೃತರು ಮತ್ತು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಹೆಸರಿನಲ್ಲಿ ಹಾಸಿಗೆ ಕಾಯ್ದಿರಿಸಿತ್ತು. ಈ ಕುರಿತು ಎಫ್‌ಐಆರ್ ಕೂಡ ದಾಖಲಾಗಿತ್ತು. ಏ.25ರಂದು ಈ ಕುರಿತು ಮುಖ್ಯಕಾರ್ಯದರ್ಶಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಅಧಿಕಾರಿಗಳು ರಾಜಕಾರಣಿಗಳ ಹಸ್ತಕ್ಷೇಪದ ಕುರಿತು ಪ್ರಸ್ತಾಪಿಸಿದ್ದರು ಎಂದು ಮೂಲಗಳು ತಿಳಿಸಿವೆ.

‘ಸಂಸದರು, ಶಾಸಕರು, ಮಾಜಿ ಕಾರ್ಪೊರೇಟರ್‌ಗಳು ಮತ್ತು ಅವರ ಬೆಂಬಲಿಗರ ಹಸ್ತಕ್ಷೇಪದಿಂದ ಶೇ 75ರಷ್ಟು ಹಾಸಿಗೆಗಳು ಬ್ಲಾಕ್ ಆಗುತ್ತಿವೆ. ಆಮ್ಲಜನಕ ಮಟ್ಟ ಚೆನ್ನಾಗಿದ್ದವರೂ, ಸೋಂಕಿನ ಸೌಮ್ಯ ಲಕ್ಷಣ ಹೊಂದಿದವರಿಗೂ ಐಸಿಯು ಹಾಸಿಗೆ ನೀಡಬೇಕಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದರು’ ಎಂದು ಮೂಲಗಳು ಹೇಳಿವೆ.

‘ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಮುಖ್ಯ ಕಾರ್ಯದರ್ಶಿಯವರು ಎಲ್ಲ ವಲಯ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಮುಖ್ಯ ಕಾರ್ಯದರ್ಶಿಯವರ ಸೂಚನೆಯನ್ನು ವಲಯ ಅಧಿಕಾರಿಗಳು ಮರೆತೇ ಬಿಟ್ಟರು’ ಎಂದೂ ಮೂಲಗಳು ತಿಳಿಸಿವೆ. 

‘ಬೊಮ್ಮನಹಳ್ಳಿ ವಲಯದ ನೋಡಲ್‌ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಅಲ್ಲಿನ ವಾರ್‌ ರೂಮ್‌ಗೆ ಏ.29ರಂದು ತೆರಳಿದ್ದರು. ಶಾಸಕ ಸತೀಶ್ ರೆಡ್ಡಿ ಅವರ ಆಪ್ತ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬ ವಾರ್‌ ರೂಮ್‌ನಲ್ಲಿ ಇದ್ದ. ವಿಚಾರಿಸಿದಾಗ ತಮ್ಮ ಕಡೆಯವರಿಗೆ ಹಾಸಿಗೆ ಮೀಸಲಿಡಲು ಇಲ್ಲಿರುವುದಾಗಿ ಹೇಳಿದ್ದ. ಕಟಾರಿಯಾ ಅವರು ಅವನಿಗೆ ಬೈದು ಹೊರಗಟ್ಟಿದ್ದರು. ಇದಾದ ಮರುದಿನವೇ ಸತೀಶ್ ರೆಡ್ಡಿ ಬೆಂಬಲಿಗರು ಎಂದು ಹೇಳಿಕೊಂಡ ಗುಂಪೊಂದು ಅಧಿಕಾರಿಯ ಕಚೇರಿಗೆ ದಾಳಿ ಮಾಡಿತ್ತು. ಐಎಎಸ್‌ ಪ್ರೊಬೆಷನರಿ ಅಧಿಕಾರಿ ವಿ. ಯಶವಂತ ಅವರ ಮೇಲೆ ಹಲ್ಲೆಗೆ ಯತ್ನಿಸಿತ್ತು’ ಎಂದೂ ಮೂಲಗಳು ಹೇಳಿವೆ.

’ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ಎರಡು ದಿನ ಕಳೆದರೂ ಮಾಡಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ವಾರ್‌ ರೂಂನ ಸಿಬ್ಬಂದಿ ಸಮರ್ಪಕವಾಗಿ ಉತ್ತರ ನೀಡಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಲು ಅಧಿಕಾರಿಯ ಬಳಿ ಹೋಗಿದ್ದೆವು. ಅಧಿಕಾರಿಗಳು ಸ್ಪಂದಿಸದ ಕಾರಣಕ್ಕೆ ಕೆಲವು ಕಾರ್ಯಕರ್ತರು ಆಕ್ರೋಶದಿಂದ ವರ್ತಿಸಿದರು. ಅವರನ್ನು ನಾನೇ ಸಮಾಧಾನಪಡಿಸಿದ್ದೇನೆ‘ ಎಂದು ಶಾಸಕ ಎಂ. ಸತೀಶ್‌ ರೆಡ್ಡಿ ಹೇಳಿದರು.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಕರೆ ಮಾಡಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.