ಭಾನುವಾರ, ಡಿಸೆಂಬರ್ 8, 2019
20 °C
ಮಕ್ಕಳ ಸಹಾಯವಾಣಿಗೆ ಹೆಚ್ಚು ಕರೆಗಳು

ಪೋಷಕರಿಂದಲೇ ಅಭಯ: ನಿಲ್ಲದ ಮಕ್ಕಳ ಭಿಕ್ಷಾಟನೆ

ಮನೋಹರ್ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸರ್ಕಾರ ಏನೇ ಕ್ರಮ ಕೈಗೊಂಡರೂ ನಗರದಲ್ಲಿ ಮಕ್ಕಳ ಭಿಕ್ಷಾಟನೆ ಕಡಿಮೆಯಾಗುತ್ತಿಲ್ಲ. ಮಕ್ಕಳ ಸಹಾಯವಾಣಿಗೆ (1098) ಈ ಕುರಿತು ಹೆಚ್ಚಿನ ಪ್ರಮಾಣದಲ್ಲಿ ಕರೆಗಳು ಬರುತ್ತಿವೆ. 2018ರ ಏಪ್ರಿಲ್‌ನಿಂದ 2019ರ ಸೆಪ್ಟೆಂಬರ್‌ವರೆಗೆ 945 ಮಂದಿ ಈ ಕುರಿತು ಸಹಾಯವಾಣಿಗೆ ದೂರು ನೀಡಿದ್ದಾರೆ.

ಬೆಂಗಳೂರು ಶಾಖೆ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸಹಯೋಗದಲ್ಲಿ ಸಿದ್ಧಪಡಿಸಲಾದ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಮಕ್ಕಳ ಭಿಕ್ಷಾಟನೆ ಕುರಿತ ಕರೆಗಳು ಮೊದಲ ಸ್ಥಾನದಲ್ಲಿವೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಬಾಲಕಾರ್ಮಿಕರ ಸಮಸ್ಯೆ, ಮಕ್ಕಳಿಗೆ ಕಿರುಕುಳ, ದೈಹಿಕ ಶಿಕ್ಷೆ, ಬಾಲ್ಯವಿವಾಹ, ಮಕ್ಕಳ ಕಳ್ಳಸಾಗಣೆ ಕುರಿತ ದೂರುಗಳು ಬಂದಿವೆ.

‘ಮಕ್ಕಳ ಸಹಾಯವಾಣಿಯ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲ. ಜನರು ನೀಡಿದ ದೂರಿನ ಆಧಾರದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳನ್ನು ರಕ್ಷಿಸುವ ಪ್ರಯತ್ನ ಮಾಡಿದ್ದೇವೆ. ಅನೇಕ ಪ್ರಕರಣಗಳಲ್ಲಿ ಮಗುವಿನ ಪೋಷಕರೇ ಭಿಕ್ಷಾಟನೆಗೆ ಬೆಂಬಲವಾಗಿ ನಿಂತಿರುವುದು ಕಂಡುಬಂದಿದೆ. ಸಂತ್ರಸ್ತ ಮಕ್ಕಳನ್ನು ರಕ್ಷಿಸಲು ಮುಂದಾದಾಗ ಪೋಷಕರೇ ಆಕ್ಷೇಪ ವ್ಯಕ್ತಪಡಿಸಿದ್ದೂ ಇದೆ’ ಎನ್ನುತ್ತಾರೆ ಬೆಂಗಳೂರಿನ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಅಂಜಲಿ ರಾಜಣ್ಣ.

‘ಹೊರ ರಾಜ್ಯಗಳಿಂದ ಬರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಪ್ರತಿದಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಕನಿಷ್ಠ 15 ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ 5 ಮಕ್ಕಳು ಬರುತ್ತಿದ್ದಾರೆ. ರೈಲು ನಿಲ್ದಾಣಗಳಲ್ಲಿ ನಮ್ಮ ತಂಡ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಮಾಹಿತಿ ನೀಡಿದರು.

‘ಜನರಿಗೆ ಮಕ್ಕಳ ಸಹಾಯವಾಣಿ ಬಗ್ಗೆ ಮಾಹಿತಿ ಇಲ್ಲ.  ಹತ್ತರಲ್ಲಿ ಎಂಟು ಮಕ್ಕಳಿಗೆ ಸಹಾಯವಾಣಿ ಬಗ್ಗೆ ತಿಳಿದಿಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸಹಾಯವಾಣಿ ಸಂಖ್ಯೆ ಪ್ರಕಟವಾಗಬೇಕು. ಆಗ ಮಾತ್ರ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾದಾಗ ಅದನ್ನು ತಕ್ಷಣವೇ ತಡೆಯಬಹುದು’ ಎಂದು ಸಲಹೆ ನೀಡಿದರು.

‘ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಹಾಗೂ ಕೋರಮಂಗಲ ಮುಖ್ಯರಸ್ತೆಯಲ್ಲಿ ನಿಂತು ಶಿಕ್ಷಣ ವಂಚಿತ ಅಪ್ರಾಪ್ತ ಹೆಣ್ಣು ಮಕ್ಕಳು ಮಧ್ಯರಾತ್ರಿವರೆಗೆ ಹೂವು ಮಾರುತ್ತಿರುತ್ತಾರೆ. ಬಾಲ ಕಾರ್ಮಿಕ ಪದ್ಧತಿ ಅನ್ವಯ ಮಕ್ಕಳು ದುಡಿಯುವುದು ತಪ್ಪು. ಅವರನ್ನು ರಕ್ಷಿಸಲು ಹೋದಾಗ ಪೋಷಕರೇ ಅಡ್ಡಿಪಡಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ವಲಸೆ ಮಕ್ಕಳ ತಡೆಗೆ ‘ಭದ್ರತಾ ಸಂಖ್ಯೆ’
‘ದೇಶದಲ್ಲಿ ಹುಟ್ಟುವ ಪ್ರತಿ ಮಗುವಿಗೂ ‘ಸಾಮಾಜಿಕ ಭದ್ರತಾ ಸಂಖ್ಯೆ’ (ಸೋಷಿಯಲ್‌ ಸೆಕ್ಯುರಿಟಿ ನಂಬರ್‌) ನಿಗದಿ ಮಾಡಲು ಅಮೆರಿಕ ಮಾದರಿಯ ವ್ಯವಸ್ಥೆ ಜಾರಿಯಾಗಬೇಕು. ಉತ್ತರ ಭಾರತದಿಂದ ಮಕ್ಕಳು ಬೆಂಗಳೂರಿಗೆ ಬಂದು ಭಿಕ್ಷಾಟನೆಯಲ್ಲಿ ತೊಡಗುತ್ತಾರೆ. ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಅವರ ಪೂರ್ಣ ಮಾಹಿತಿ ಪಡೆದು ಅವರನ್ನು ರಕ್ಷಿಸಲು ಈ ಸಂಖ್ಯೆ ನೆರವಾಗಲಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು’ ಎಂದು ಅಂಜಲಿ ರಾಜಣ್ಣ ಸಲಹೆ ನೀಡಿದರು. 

‘ಸಹಾಯವಾಣಿ ಜೊತೆ ಸ್ನೇಹ’ ಇಂದಿನಿಂದ
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಪ್ಪಂದವು 30 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಹಾಗೂ ಬೆಂಗಳೂರು ಚೈಲ್ಡ್‌ಲೈನ್ 1098 ಸಹಯೋಗದಲ್ಲಿ ಮಕ್ಕಳ ಸಹಾಯವಾಣಿ ಬಗ್ಗೆ ಅರಿವು ಮೂಡಿಸಲು ನವೆಂಬರ್‌ 14ರಿಂದ 21ರವರೆಗೆ ‘ಚೈಲ್ಡ್‌ಲೈನ್‌ನೊಂದಿಗೆ ಸ್ನೇಹ’ ಸಪ್ತಾಹ ಹಮ್ಮಿಕೊಳ್ಳಲಾಗಿದೆ.

ಮಕ್ಕಳ ಹಕ್ಕುಗಳ ಬಗ್ಗೆ ರೇಡಿಯೊ ಆಕ್ಟಿವ್‌ ವಾಹಿನಿಯಲ್ಲಿ ಒಂದು ವಾರ ವಿಶೇಷ ಕಾರ್ಯಕ್ರಮಗಳು ಪ್ರಸಾರ ಆಗಲಿವೆ. ನಗರದ ವಿವಿಧ ಶಾಲೆಗಳಲ್ಲಿ ಮಕ್ಕಳಿಗೆ ರಸಪ್ರಶ್ನೆ, ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ.

ಇದೇ 19ರಂದು ಬಾಲಭವನದಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ. 20ರಂದು ಸಾರ್ವಜನಿಕರು ಮಕ್ಕಳ ಹಕ್ಕುಗಳು ಹಾಗೂ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮಕ್ಕಳ ಹಕ್ಕುಗಳ ನಿರ್ದೇಶಕ ನಾಗಸಿಂಹ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಕ್ರಿಯಿಸಿ (+)