ಸೋಮವಾರ, ಜುಲೈ 4, 2022
21 °C
ತಡರಾತ್ರಿವರೆಗೂ ನಡೆದ ಮತ ಎಣಿಕೆ l ಎಂ. ತಿಮ್ಮಯ್ಯಗೆ ನಿರಾಸೆ

ಕಸಾಪ: ಬೆಂಗಳೂರು ನಗರ ಜಿಲ್ಲೆಗೆ ಪ್ರಕಾಶಮೂರ್ತಿ ಸಾರಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿಯೇ ಗರಿಷ್ಠ ಮತದಾರರನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಬೆಂಗಳೂರು ನಗರ ಜಿಲ್ಲೆ ಘಟಕಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಎಂ. ಪ್ರಕಾಶಮೂರ್ತಿ ಗೆಲುವಿನ ನಗೆ ಬೀರಿದರು. 

ಎಂ. ಪ್ರಕಾಶಮೂರ್ತಿ 5314 ಮತಗಳಿಸಿದ್ದಾರೆ. ಎಂ. ತಿಮ್ಮಯ್ಯ 3987 ಮತ ಗಳಿಸಿದರು. ಪ್ರಕಾಶಮೂರ್ತಿ 1327 ಅಂತರದಿಂದ ಗೆಲುವು ಸಾಧಿಸಿದರು. ತಡರಾತ್ರಿವರೆಗೂ ಮತ ಎಣಿಕೆ ನಡೆಯಿತು.ಗೆಲವು ಖಚಿತವಾಗುತ್ತಿದ್ದಂತೆ ಬೆಂಬಲಿಗರೊಂದಿಗೆ ಸಂಭ್ರಮಿಸಿದ ಪ್ರಕಾಶಮೂರ್ತಿ, ‘ಡಾ. ಅಶ್ವತ್ಥನಾರಾಯಣ ಅವರ ‘ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ’ ಕೃತಿ ಬಿಡುಗಡೆ ಮಾಡಿದರು. 

ಭಾನುವಾರ ಬೆಳಿಗ್ಗೆ ಮತದಾನ ಮಂದಗತಿಯಲ್ಲಿ ಆರಂಭವಾದರೂ, ಮಧ್ಯಾಹ್ನದ ಬಳಿಕ ಬಿರುಸಿನಿಂದ ನಡೆಯಿತು. ಆದರೂ ಶೇ 28.88 ರಷ್ಟು ಮಾತ್ರ ಮತದಾನ ನಡೆದಿದೆ. 36,491 ಮತದಾರರಲ್ಲಿ 10,538 ಮಂದಿ ಹಕ್ಕು ಚಲಾಯಿಸಿದ್ದಾರೆ. 

28 ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನಕ್ಕೆ 42 ಮತಗಟ್ಟೆಗಳನ್ನು ಗುರುತಿಸಲಾಗಿತ್ತು. ಮತದಾರರು ಈ ಬಾರಿ ವಿವಿಧೆಡೆ ಹಂಚಿ ಹೋಗಿದ್ದರಿಂದ ಎಲ್ಲಿಯೂ ನೂಕಾಟ, ತಳ್ಳಾಟ ನಡೆಯಲಿಲ್ಲ. ಹೆಚ್ಚಿನ ಮತದಾನದ ಕೇಂದ್ರಗಳಲ್ಲಿ ಚುನಾವಣೆಯ ಕಾವು ಕಾಣಿಸಲಿಲ್ಲ. 

ಕವಿ ದೊಡ್ಡರಂಗೇಗೌಡ, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಹಂ.ಪ. ನಾಗರಾಜಯ್ಯ, ಕಮಲಾ ಹಂಪನಾ, ವಿದ್ವಾಂಸ ಗೊ.ರು. ಚನ್ನಬಸಪ್ಪ, ಕವಿ ಬಿ.ಆರ್. ಲಕ್ಷ್ಮಣ ರಾವ್, ಲೇಖಕಿಯರಾದ ವಿಜಯಾ, ವಸುಂಧರಾ ಭೂಪತಿ ಸೇರಿದಂತೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಮತದಾನ ಮಾಡಿದರು. 

ಮತ ಕೇಂದ್ರದಲ್ಲಿ ಪ್ರಚಾರ: ಮತಗಟ್ಟೆಯ ಆವರಣದಲ್ಲಿ ಅಭ್ಯರ್ಥಿಗಳ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಅಭ್ಯರ್ಥಿಗಳು ಕೆಲವೆಡೆ ಮತದಾರರನ್ನು ತಮ್ಮೆಡೆಗೆ ಸೆಳೆಯಲು ಕೊನೆಯ ಕ್ಷಣದ ಕಸರತ್ತನ್ನೂ ನಡೆಸಿದರು. ಮತದಾನ ನಡೆಯುತ್ತಿರುವ ಕಟ್ಟಡಗಳ ಒಳಗಡೆಯೂ ಬೆಂಬಲಿಗರು ಅಭ್ಯರ್ಥಿಗಳ ಕ್ರಮ ಸಂಖ್ಯೆ ಹಾಗೂ ಮಾಹಿತಿ ಒಳಗೊಂಡ ಕಾರ್ಡ್‌ಗಳನ್ನು ವಿತರಿಸಿ, ಮನವಿ ಮಾಡಿಕೊಂಡರು. ಆದರೆ, ಮತ ಪತ್ರಗಳಲ್ಲಿ ಕ್ರಮ ಸಂಖ್ಯೆ ಇಲ್ಲದಿದ್ದರಿಂದ ಕೆಲ ಮತದಾರರು ಗೊಂದಲಕ್ಕೆ ಒಳಗಾಗಿ, ತಮ್ಮ ನೆಚ್ಚಿನ ಅಭ್ಯರ್ಥಿಯ ಹೆಸರಿಗಾಗಿ ಹುಡುಕಿದರು. 

ಮಧ್ಯಾಹ್ನ ಆಗುತ್ತಿದ್ದಂತೆ ಅಭ್ಯರ್ಥಿಗಳು ಮತದಾನಕ್ಕೆ ಬರದಿದ್ದವರಿಗೆ ಕರೆಮಾಡಿ, ಮತ ಚಲಾಯಿಸುವಂತೆ ಮನವಿ ಮಾಡಿಕೊಂಡರು. ಸಂಜೆ 4 ಗಂಟೆ ನಂತರ ಬಂದವರನ್ನು ಚುನಾವಣಾಧಿಕಾರಿಗಳು ಮತಗಟ್ಟೆಯೊಳಕ್ಕೆ ಬಿಟ್ಟುಕೊಳ್ಳದೇ ವಾಪಸ್ ಕಳುಹಿಸಿದರು.

ಮತಗಟ್ಟೆಗಾಗಿ ಹುಡುಕಾಟ

ಕಳೆದ ವರ್ಷ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಮಾತ್ರ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಬಾರಿ ನಗರದ ವಿವಿಧೆಡೆ ಮತ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಕೆಲವರು ಮಾಹಿತಿ ಕೊರತೆಯಿಂದ ಮತಗಟ್ಟೆಗಾಗಿ ಅಲೆದಾಟ ನಡೆಸಿದರು. ಬೆಳಿಗ್ಗೆ 9 ಗಂಟೆಗೆ ಬನಶಂಕರಿಯ ಬಿಎನ್‌ಎಂ ಪದವಿಪೂರ್ವ ಕಾಲೇಜಿಗೆ ಬಂದ ಕವಿ ಬಿ.ಆರ್. ಲಕ್ಷ್ಮಣ ರಾವ್, ಅಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದರಿಂದ ಜಯನಗರಕ್ಕೆ ತೆರಳಿದರು.

ಕಳೆಗುಂದಿದ ಚುನಾವಣೆ

ಈ ಹಿಂದೆ ನ್ಯಾಷನಲ್‌ ಕಾಲೇಜಿನ ಮೈದಾನದಲ್ಲಿ ಮಾತ್ರ ಮತಗಟ್ಟೆಗಳು ಇರುತ್ತಿದ್ದರಿಂದ ಒಂದೇ ಕಡೆ ಮತದಾರರು ಸೇರುತ್ತಿದ್ದರು. ಹೀಗಾಗಿ, ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. ಸಾಹಿತಿಗಳು ಸೇರಿದಂತೆ ಮತದಾನದ ಹಕ್ಕನ್ನು ಹೊಂದಿರುವ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಕಣ್ತುಂಬಿಕೊಳ್ಳಲು ಜನರು ದಿನವಿಡೀ ಅಲ್ಲಿ ಕಾಯುತ್ತಿದ್ದರು. ಈ ಬಾರಿ ವಿಕೇಂದ್ರೀಕರಣ ಮಾಡಿ, ವಿವಿಧೆಡೆ ಮತಗಟ್ಟೆ ಸ್ಥಾಪಿಸಿದ್ದರಿಂದ ಸರಳವಾಗಿ ಚುನಾವಣೆ ನಡೆಯಿತು.

ಕಸಾಪ : ಮಹೇಶ್ ಜೋಶಿ ಗೆಲುವು ನಿಶ್ಚಿತ

ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಮಹೇಶ್ ಜೋಶಿ ಮುನ್ನಡೆ ಸಾಧಿಸಿದ್ದಾರೆ.ಅವರು 51,169 ಮತ ಗಳಿಸಿದ್ದು, 33,513 ಸಾವಿರ ಮತಗಳ ಮುನ್ನಡೆ ಹೊಂದಿದ್ದಾರೆ. ಶೇಖರಗೌಡ ಮಾಲಿ ಪಾಟೀಲ ಅವರು 17,656 ಸಾವಿರ ಮತ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿ ಇದ್ದಾರೆ. ಇನ್ನೂ 5 ಜಿಲ್ಲೆಗಳು ಹಾಗೂ ಹೊರ ರಾಜ್ಯಗಳ ಅಂಚೆ ಮತಪತ್ರ ಬರಬೇಕಿದೆ.

ಇದೇ 24 ರಂದು ಪರಿಷತ್ತಿನ ಚುನಾವಣಾಧಿಕಾರಿಯ ಕೇಂದ್ರ ಕಚೇರಿಯಲ್ಲಿ ಗಡಿನಾಡ ಘಟಕಗಳ ಅಧ್ಯಕ್ಷರ ಚುನಾವಣೆಗೆ ಸಂಬಂಧಪಟ್ಟ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಿ, ಫಲಿತಾಂಶ ಘೋಷಿಸಲಾಗುತ್ತದೆ. ರಾಜ್ಯಾಧ್ಯಕ್ಷರ ಆಯ್ಕೆಗೆ ಎಲ್ಲ ಜಿಲ್ಲೆಗಳಿಂದ ಬಂದ ಮತಗಳು ಹಾಗೂ ಅಂಚೆ ಮತಗಳನ್ನು ಕ್ರೋಢೀಕರಿಸಿ, ಅದೇ ದಿನ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು