ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಇನ್ನೂ ಮುಗಿಯದ ಕಲಾಸಿಪಾಳ್ಯ ಟಿಟಿಎಂಸಿ ಕಾಮಗಾರಿ

ನಾಲ್ಕು ವರ್ಷಗಳಿಂದ ಕುಂಟುತ್ತಾ ಸಾಗಿರುವ ಕೆಲಸ l 2019ರ ನವೆಂಬರ್‌ಗೆ ಮುಗಿಯಬೇಕಿದ್ದ ಕಾಮಗಾರಿ l ಕೆಎಸ್‌ಆರ್‌ಟಿಸಿ ಬಸ್‌ ನಿಲುಗಡೆಗೂ ಅವಕಾಶ
Last Updated 9 ಅಕ್ಟೋಬರ್ 2020, 2:55 IST
ಅಕ್ಷರ ಗಾತ್ರ

ಬೆಂಗಳೂರು: ಕಲಾಸಿಪಾಳ್ಯದಲ್ಲಿ ಸುಸಜ್ಜಿತ ಬಸ್ ನಿಲ್ದಾಣದ (ಟಿಟಿಎಂಸಿ) ಕಾಮಗಾರಿ ಆರಂಭವಾಗಿ ನಾಲ್ಕು ವರ್ಷಗಳು ಕಳೆದಿವೆ. ಇನ್ನೂ ಕಾಮಗಾರಿ ಕುಂಟುತ್ತಾ ಸಾಗಿದೆ.‌

1940ರಲ್ಲಿ ದಿವಾನರಾಗಿದ್ದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಮಾರ್ಗದರ್ಶನದಲ್ಲಿ ಇಲ್ಲಿ ಬಸ್‌ ನಿಲ್ದಾಣ ಸ್ಥಾಪಿಸಲಾಗಿತ್ತು. ರಾಜ್ಯದ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ನಿಲ್ದಾಣ ಇದಾಗಿತ್ತು. ಕೆ.ಆರ್.ಮಾರುಕಟ್ಟೆಗೆ ಸಮೀಪ ಇರುವ ಕಾರಣ ಇದು ಈಗಲೂ ಅತ್ಯಂತ ಜನನಿಬಿಡ ಪ್ರದೇಶ.

ಈ ಜಾಗದಲ್ಲಿ ಸುಸಜ್ಜಿತ ಟಿಟಿಎಂಸಿ ನಿರ್ಮಾಣಕ್ಕೆ 2016ರಲ್ಲಿ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿ ದ್ದರು. 4.13 ಎಕರೆ ವಿಸ್ತೀರ್ಣದಲ್ಲಿ ₹60 ಕೋಟಿ ವೆಚ್ಚದಲ್ಲಿ ನಿಲ್ದಾಣ ನಿರ್ಮಾಣವಾಗುತ್ತಿದೆ.

‘ಕೆಎಂವಿ ಪ್ರಾಜೆಕ್ಟ್ಸ್ ಲಿಮಿಟೆಡ್‌ ಸಂಸ್ಥೆಯು ಯೋಜನೆಯ ಗುತ್ತಿಗೆ ಪಡೆದಿದ್ದು, ನಿಗದಿಯಂತೆ 2019ರ ನವೆಂಬರ್‌ನಲ್ಲೇ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ನವೆಂಬರ್‌ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರಲಿಲ್ಲ. ಆದರೆ, ಅನುದಾನ ಬಿಡುಗಡೆ ವಿಳಂಬವಾದ ಕಾರಣ ಕಾಮಗಾರಿ ವಿಳಂಬವಾಯಿತು’ ಎನ್ನುತ್ತಾರೆ ಗುತ್ತಿಗೆದಾರರು.

‘ಅನುದಾನ ಬಿಡುಗಡೆಯಾದ ಬಳಿಕ ಲಾಕ್‌ಡೌನ್ ಜಾರಿಯಾಯಿತು. ಬಳಿಕ ಕಾರ್ಮಿಕರ ಕೊರತೆಯಿಂದಾಗಿ ಈ ಕಾಮಗಾರಿ ಯೂ ಸ್ಥಗಿತಗೊಂಡಿತ್ತು. ಈಗ ತ್ವರಿತಗತಿಯಲ್ಲಿ ಕೆಲಸ ನಡೆಸುತ್ತಿದ್ದೇವೆ. ಶೀಘ್ರವೇ ಪೂರ್ಣಗೊಳಿಸುತ್ತೇವೆ’ ಎಂದು ಅವರು ಹೇಳುತ್ತಾರೆ.

ಈ ಟಿಟಿಎಂಸಿಯಿಂದ ಬಿಎಂಟಿಸಿ ಬಸ್‌ಗಳು ಮಾತ್ರವಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳೂ ಕಾರ್ಯಾಚರಣೆ ನಡೆಸಲಿವೆ. ನಿರ್ಮಾಣವಾಗಿರುವ ಕಟ್ಟಡದ ಒಳಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ಲಲಿದ್ದು, ಹೊರಾಂಗಣದಲ್ಲಿ ಬಿಎಂಟಿಸಿ ಬಸ್‌ಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಬಸ್‌ಗಳು ಮತ್ತು ಪ್ರಯಾಣಿಕರ ನಿಲುಗಡೆಗೆ ಪ್ರತ್ಯೇಕ ತಾಣಗಳನ್ನು ನಿರ್ಮಿಸಲಾಗಿದೆ.

ಕೆ.ಆರ್. ಮಾರುಕಟ್ಟೆ ಕಡೆಯಿಂದ ಬರುವ ಜನರು ನೇರವಾಗಿ ಕೆಎಸ್‌ಆರ್‌ಟಿಸಿ ಬಸ್‌ ನಿಲುಗಡೆ ತಾಣದ ಕಡೆಗೆ ಹೋಗಲು ಸುರಂಗ ಮಾರ್ಗವೊಂದನ್ನು ನಿರ್ಮಿಸಲಾಗಿದೆ. ಬಿಎಂಟಿಸಿ ಬಸ್‌ಗಳು ನಿಲ್ಲುವ ಜಾಗದಿಂದ ಮೇಲಕ್ಕೆ ಹತ್ತಲು ಅಲ್ಲಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.

ಸುಸಜ್ಜಿತವಾದ ಟಿಟಿಎಂಸಿ ನಿರ್ಮಾಣವಾಗುತ್ತಿರುವುದು ಖುಷಿಯ ವಿಚಾರ. ಆದರೆ, ಅದು ಸಾರ್ವಜನಿಕರ ಬಳಕೆಗೆ ಲಭ್ಯವಾಗಲು ಇನ್ನೂ ಕಾಲಾವಕಾಶ ಹಿಡಿಯಲಿದೆ. ಕಾಮಗಾರಿಯನ್ನು ಚುರುಕುಗೊಳಿಸಿದರೆ ಒಳ್ಳೆಯದು ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT