ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು, ನಾಳೆ ‘ಬಿಐಸಿ ಹಬ್ಬ’

ಬೆಂಗಳೂರಿನ ಕಥೆಗಳ ಅನಾವರಣ, ನೃತ್ಯ, ಸಂಗೀತದ ವೈವಿಧ್ಯಮಯ ಕಾರ್ಯಕ್ರಮಗಳು
Last Updated 24 ಫೆಬ್ರುವರಿ 2023, 22:00 IST
ಅಕ್ಷರ ಗಾತ್ರ

ಬೆಂಗಳೂರು: ಸಂಗೀತ, ನೃತ್ಯ, ಬೆಂಗಳೂರಿನ ಕಥೆ ಹೇಳುವ ವಿಶಿಷ್ಟ ಕಾರ್ಯಕ್ರಮಗಳು, ರಾಜಧಾನಿಯ ಜೀವನಮಟ್ಟ ಸುಧಾರಣೆಗೆ ರೂಪಿಸಬೇಕಾದ ಯೋಜನೆಗಳಿಗೆ ಚೌಕಟ್ಟು ಹಾಕಿಕೊಡುವ ಚಿಂತನಾಗೋಷ್ಠಿಗಳನ್ನು ಒಳಗೊಂಡ ‘ಬಿಐಸಿ ಹಬ್ಬ’ದ ಸಡಗರಕ್ಕೆ ಮತ್ತೊಮ್ಮೆ ವೇದಿಕೆ ಅಣಿಗೊಂಡಿದೆ.

‘ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌’ ಆಯೋಜಿಸಿರುವ ಐದನೇ ಆವೃತ್ತಿಯ ‘ಬಿಐಸಿ ಹಬ್ಬ’ ಈ ಬಾರಿ ಫೆ. 25 ಮತ್ತು 26ರಂದು ನಡೆಯಲಿದೆ. ಪ್ರತಿಯೊಬ್ಬರ ಮನಸೂರೆಗೊಳ್ಳಲಿರುವ ವಿವಿಧ ಚಟುವಟಿಕೆಗಳು ಹಬ್ಬದಲ್ಲಿ ಮೇಳೈಸಲಿವೆ.

ಬೆಂಗಳೂರಿನ ಇತಿಹಾಸದ ವೈಭವ ಮತ್ತು ಪ್ರಸ್ತುತ ಸ್ಥಿತಿಗತಿಗಳನ್ನು ಬಿಂಬಿಸುವ ‘ನಮ್ಮ ಬೆಂಗಳೂರು ಕಥೆಗಳು’ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಈ ಬಾರಿ ಆಯೋಜಿಸಲಾಗಿದೆ. ನಗರದ ಪರಂಪರೆ, ಧೋಬಿ ಘಾಟ್, ಉದ್ಯಾನಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಜ್ಞರು ಚರ್ಚಿಸಲಿದ್ದಾರೆ. ಜತೆಗೆ, 20 ಮಂದಿ ದೃಶ್ಯಾವಳಿಗಳನ್ನು ಪ್ರದರ್ಶಿಸಲಿದ್ದಾರೆ.

‘ಬಿ ಹರ್ಡ್‌’ ಎನ್ನುವ ಕಾರ್ಯಕ್ರಮ ವಿಭಿನ್ನವಾಗಿದೆ. ಯಾವುದೇ ವ್ಯಕ್ತಿಯು ಯಾವುದೇ ವಿಷಯದ ಬಗ್ಗೆ ಮಾತನಾಡಲು ವೇದಿಕೆ ಕಲ್ಪಿಸಲಾಗಿದೆ. ತಮ್ಮ ಕಲ್ಪನೆಗಳು, ಚಿಂತನೆಗಳನ್ನು ಇಲ್ಲಿ ಅನಾವರಣಗೊಳಿಸಬಹುದಾಗಿದೆ. ಈ ಮೂಲಕ ಪ್ರತಿಯೊಬ್ಬರಿಗೂ ಮಾತನಾಡುವ ಅವಕಾಶ ಒದಗಿಸಲಾಗಿದೆ ಎಂದು ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನ ಗೌರವ ನಿರ್ದೇಶಕ ವಿ. ರವಿಚಂದರ್ ಅವರು ಶುಕ್ರವಾರ ತಿಳಿಸಿದರು.

ಶಾಸ್ತ್ರೀಯ ನೃತ್ಯ, ಭರತನಾಟ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ. ಕ್ರೈಸ್ಟ್ ಕಾಲೇಜಿನ ವತಿಯಿಂದ ಬ್ಯಾಂಡ್‌ ಕಾರ್ಯಕ್ರಮ ಆಯೋಜಿಸಲಾಗಿದೆ.

ಎಲ್ಲ ವಯೋಮಾನದ ಮಕ್ಕಳಿಗಾಗಿ ‘ಮಕ್ಕಳ ಕೂಟ’ ಕಾರ್ಯಕ್ರಮ ನಡೆಯಲಿದೆ. ಮಣ್ಣಿನಲ್ಲಿ ಕಲೆ ಅರಳಿಸುವ ಅವಕಾಶ ಮಕ್ಕಳಿಗೆ ಇರಲಿದೆ. ಚೌಕಾಬಾರಾ, ಗಿಲ್ಲಿದಾಂಡು, ಮುಂತಾದ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು.

ಪೋಕ್ಸೊ ಕಾಯ್ದೆ, ಭಾರತ–ಚೀನಾ ಸಂಬಂಧಗಳು, 2023ರಲ್ಲಿ ಜಾಗತಿಕ ಸವಾಲುಗಳು, ಕನ್ನಡ ವಿಷಯದ ಕುರಿತು ಚರ್ಚೆ ನಡೆಯಲಿದೆ.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದ ನಿರ್ವಹಣೆಯಲ್ಲಿ ನೀವು ಭಾಗಿಯಾದರೆ ಏನು ಮಾಡಬಹುದು ಎನ್ನುವ ಬಗ್ಗೆಯೂ ಸಲಹೆಗಳನ್ನು ನೀಡಬಹುದು. ಇಂತಹ ಸಂಸ್ಥೆಗೆ ಹೊಸ ವಿಷಯಗಳ ಬಗ್ಗೆ ಹೇಳಿಕೊಳ್ಳಬಹುದು. ನಿರ್ದೇಶಕರ ಕುರ್ಚಿಯಲ್ಲಿ ಕುಳಿತು ಬಿಐಸಿ ನಿರ್ವಹಣೆ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು.

ಎಲ್ಲಿ: ದೊಮ್ಮಲೂರಿನ ಬಿಐಸಿ ಆವರಣ

ಸಮಯ: ಎರಡು ದಿನವೂ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ

ಏನೇನು: 75 ವೈವಿಧ್ಯಮಯ ಕಾರ್ಯಕ್ರಮಗಳು

ಕೆಲವು ‘ತಲೆಹರಟೆ ಚರ್ಚೆ’ಗಳನ್ನು ಸಹ ಪ್ರಸ್ತುತ ಪಡಿಸಲಾಗುತ್ತಿದೆ. ವಿವಿಧ ಚಟುವಟಿಕೆಗಳು ಮತ್ತು ಪ್ರದರ್ಶನಕ್ಕಾಗಿ ‘ಊರು ಹಬ್ಬ’ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿವರಗಳಿಗೆ: http://bit.ly/3StuJFA

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT