ಬೆಂಗಳೂರು: ಸುಧಾರೆಡ್ಡಿ ಫೌಂಡೇಶನ್ ಮತ್ತು ಮೆಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ (ಎಂಇಐಎಲ್) ಫೌಂಡೇಶನ್ ಜಂಟಿಯಾಗಿ ಇದೇ 29ರಂದು ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ‘ಪಿಂಕ್ ಪವರ್ ರನ್’ ಸ್ತನ ಕ್ಯಾನ್ಸರ್ ಜಾಗೃತಿ ಓಟ ಹಮ್ಮಿಕೊಂಡಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾರೆಡ್ಡಿ ಫೌಂಡೇಶನ್‌ನ ಸಂಸ್ಥಾಪನಾಧ್ಯಕ್ಷೆ ಸುಧಾರೆಡ್ಡಿ, ‘ಈ ಓಟದಲ್ಲಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ. ‘ಪಿಂಕ್ ಪವರ್ ರನ್’ ಮೂರು ವಿಭಿನ್ನ ವಿಭಾಗಗಳಲ್ಲಿ ನಡೆಯಲಿದೆ. 3 ಕಿ.ಮೀ., 5 ಕಿ.ಮೀ. ಮತ್ತು 10 ಕಿ.ಮೀ. ಓಟದಲ್ಲಿ ವಿವಿಧ ವಯೋಮಾನದವರು ಭಾಗವಹಿಸಬಹುದಾಗಿದ್ದು, ಓಟದಲ್ಲಿ ಪಾಲ್ಗೊಳ್ಳುವವರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ’ ಎಂದು ವಿವರಿಸಿದರು.
‘ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಸ್ತನ ಕ್ಯಾನ್ಸರ್ ಪೀಡಿತರಿಗೆ ಭರವಸೆ ನೀಡುವ ಪ್ರಯತ್ನ ಇದಾಗಿದೆ. ಈ ಓಟದಲ್ಲಿ ಪಾಲ್ಗೊಳ್ಳಲು www.pinkpowerrun.in ಮೂಲಕ ನೋಂದಾಯಿಸಿಕೊಳ್ಳಬಹುದು’ ಎಂದು ತಿಳಿಸಿದ್ದಾರೆ.
ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಹಾಗೂ ಸ್ತ್ರೀರೋಗ ತಜ್ಞೆ ಡಾ. ಸುಧಾ ಸಿನ್ಹ ಉಪಸ್ಥಿತರಿದ್ದರು.