ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಒಂದೇ ದಿನ 7,113 ಜನರಿಗೆ ಕೋವಿಡ್

ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆ * ಆತಂಕ ಬೇಡ– ಬಿಬಿಎಂಪಿ
Last Updated 8 ಜನವರಿ 2022, 20:55 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಶನಿವಾರ ಭಾರಿ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಒಂದೇ ದಿನ 7,113 ಮಂದಿ ಸೋಂಕು ಹೊಂದಿರುವುದು ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 32,157ಕ್ಕೆ ಏರಿಕೆಯಾಗಿದೆ.

ಕೋವಿಡ್‌ ಪರೀಕ್ಷೆಗೆ ಒಳಗಾದವರಲ್ಲಿ ಸೋಂಕು ಪತ್ತೆ ಪ್ರಮಾಣವೂ ಏರಿಕೆ ಕಾಣುತ್ತಿದೆ. ಶುಕ್ರವಾರ ಶೇ 7.54ರಷ್ಟಿದ್ದ ಸೋಂಕು ಪತ್ತೆ ದರ, ಶನಿವಾರ ಶೇ 9.80ಕ್ಕೆ ಏರಿಕೆ ಆಗಿದೆ.

ಕಳೆದ 24 ಗಂಟೆಗಳಲ್ಲಿ 72,594 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ‍ಅವರಲ್ಲಿ ಸೋಂಕು ಪತ್ತೆಯಾದವರ ಪ್ರಮಾಣ ಶೇ 10ರ ಆಸುಪಾಸಿನಲ್ಲಿದೆಯಾದರೂ, ಆತಂಕ ಪಡುವ ಸ್ಥಿತಿ ಇಲ್ಲ ಎಂದು ಬಿಬಿಎಂಪಿ ಹೇಳಿದೆ.

‘ಕೋವಿಡ್‌ ಸೋಂಕಿತರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಆತಂಕದ ಸ್ಥಿತಿ ಇದೆ ಎಂದು ಹೇಳಲಾಗದು. ಏಕೆಂದರೆ,ಸದ್ಯಕ್ಕೆ 743 ಜನ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದು, ಆ ಪೈಕಿ 6 ಜನರನ್ನು ಮಾತ್ರ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ವಯಸ್ಸಾದವರು ಮತ್ತು ಬೇರೆ ಖಾಯಿಲೆಗಳಿಂದ ಬಳಲುತ್ತಿರುವವರೇ ಜಾಸ್ತಿ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ. ಬಾಲಸುಂದರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಪರೀಕ್ಷೆಗೆ ಒಳಪಡಿಸಿದ ಜನರ ಸಂಖ್ಯೆಯನ್ನು ಗಮನಿಸಿದರೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ತೀರಾ ಕಡಿಮೆ. ಅವರಲ್ಲಿ ಶೇ 1ರಷ್ಟು ಜನರಷ್ಟೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೊಸ ಖಾಯಿಲೆ ಆಗಿರುವುದರಿಂದ, ಇದರ ಹರಡುವಿಕೆ ಮುಂದೆ ಯಾವ ರೀತಿ ತಿರುವು ಪಡೆಯಲಿದೆ ಎಂದು ಈಗಲೇ ಹೇಳಲಾಗದು. ಬೇರೆ ಬೇರೆ ದೇಶಗಳಲ್ಲಿನ ಸ್ಥಿತಿಯನ್ನು ಗಮನಿಸುತ್ತಿದ್ದೇವೆ. ನಮ್ಮ ದೇಶದಲ್ಲಿ ಕೊರೊನಾ ವೈರಾಣು ಬೇರೆಯೇ ರೀತಿಯಲ್ಲಿ ವರ್ತಿಸುತ್ತಿದೆ. ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಏರಿಕೆಯಾಗುವುದಿಲ್ಲ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎಂದು ಹೇಳಿದರು.

‘ಪರಿಸ್ಥಿತಿ ಬಿಗಡಾಯಿಸಿದರೆ ಎದುರಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಬಿಬಿಎಂಪಿ ಮಾಡಿಕೊಂಡಿದೆ. ಸೋಂಕಿತರ ಚಿಕಿತ್ಸೆಗೆ ಅಗತ್ಯ ಇರುವ ಹಾಸಿಗೆ ಸಂಖ್ಯೆಗಳನ್ನು ಹೆಚ್ಚಿಸಲಾಗಿದೆ. ಕೋವಿಡ್‌ ಪರೀಕ್ಷೆ ನಡೆಸುವ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಶಾಲಾ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ಮನೆಯಲ್ಲಿ ಪ್ರತ್ಯೇಕ ವಾಸಕ್ಕೆ ಒಳಗಾಗುತ್ತಿರುವ ಸೋಂಕಿತರ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಸಂಪರ್ಕಿತರನ್ನು ಗುರುತಿಸಿ ಅವರು ಪ್ರತ್ಯೇಕ ವಾಸ ಇರುವಂತೆ ಸೂಚಿಸಲಾಗಿತ್ತು. ಕಂಟೈನ್‌ಮೆಂಟ್ ವಲಯ 250ಕ್ಕೆ ಏರಿಕೆಯಾಗಿದ್ದು, ಅಲ್ಲಿಯೂ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಕೋವಿಡ್ ವಿರುದ್ಧದ ಹೋರಾಟಕ್ಕೆ ಬಿಬಿಎಂಪಿ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT