ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬೆಂಕಿ ಅವಘಡ: ಕಚೇರಿಗೆ ಕೆಲಸಕ್ಕೆ ಹೋಗಿದ್ದರಿಂದ ತಪ್ಪಿದ ದೊಡ್ಡ ದುರಂತ

Last Updated 22 ಸೆಪ್ಟೆಂಬರ್ 2021, 9:28 IST
ಅಕ್ಷರ ಗಾತ್ರ

ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ದೇವರ ಚಿಕ್ಕನಹಳ್ಳಿಯ ಆಶ್ರಿತ್ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಮಂಗಳವಾರ ಸಂಜೆ ಬೆಂಕಿ ಅವಘಡ ಸಂಭವಿಸಿದ್ದಾಗ ಹಲವರು ಕೆಲಸಕ್ಕಾಗಿ ಕಚೇರಿಗೆ ತೆರಳಿದ್ದರಿಂದ ಹೆಚ್ಚಿನ ಸಾವು–ನೋವು ಉಂಟಾಗುವುದು ತಪ್ಪಿದೆ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ. ದುರಂತದಲ್ಲಿ ತಾಯಿ–ಮಗಳು ಸಜೀವವಾಗಿ ದಹನವಾಗಿದ್ದರು.

ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗಳಲ್ಲಿ ವಾಸಿಸುವವರಲ್ಲಿ ಹೆಚ್ಚಿನವರು ಎಲೆಕ್ಟ್ರಾನಿಕ್ ಸಿಟಿ ಮತ್ತು ಪಕ್ಕದ ಪ್ರದೇಶಗಳಲ್ಲಿನ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳು. ಬಿಟ್ಟರೆ ಇನ್ನು ಕೆಲವು ಫ್ಲ್ಯಾಟ್‌ಗಳಲ್ಲಿ ಸರ್ಕಾರಿ ಅಧಿಕಾರಿಗಳು, ಖಾಸಗಿ ಕಂಪನಿಗಳ ಕಾರ್ಯನಿರ್ವಾಹಕರು ವಾಸಿಸುತ್ತಿದ್ದಾರೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ ಹೆಚ್ಚಿನವರು ಮನೆಯಿಂದಲೇ ಕಚೇರಿ ಕೆಲಸ (ವರ್ಕ್ ಫ್ರಂ ಹೋಂ) ನಿರ್ವಹಿಸುತ್ತಿದ್ದರು. ಕೆಲವರು ಇತ್ತೀಚೆಗೆ ಕಚೇರಿಗೆ ತೆರಳಲು ಆರಂಭಿಸಿದ್ದರು.

‘ಬೆಂಕಿ ಅವಘಡದಿಂದ ಇನ್ನಷ್ಟು ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಹಲವರು ಕೆಲಸಕ್ಕೆ ಕಚೇರಿಗೆ ತೆರಳಿದ್ದರಿಂದ ದೊಡ್ಡ ದುರಂತವಾಗುವುದು ತಪ್ಪಿದೆ’ ಎಂದು ಅಪಾರ್ಟ್‌ಮೆಂಟ್‌ನ ನಿವಾಸಿಯೊಬ್ಬರು ಹೇಳಿದ್ದಾರೆ.

ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬರು ಅಂಗಲಾಚುತ್ತಲೇ, ಹೊರಗೆ ನಿಂತ ಜನ ನೋಡ ನೋಡುತ್ತಿದ್ದಂತೆ ಅಗ್ನಿಯಲ್ಲಿ ಸುಟ್ಟುಹೋಗಿದ್ದರು. ಫ್ಲ್ಯಾಟ್‌ ನಂಬರ್ 210ರಲ್ಲಿ ವಾಸವಿದ್ದ ಲಕ್ಷ್ಮಿದೇವಿ (82) ಹಾಗೂ ಅವರ ಮಗಳು ಭಾಗ್ಯರೇಖಾ (59) ಮೃತರು.

ದುರಂತದ ವೇಳೆ ಕೆಲವರು ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದರು. ‘ಕಚೇರಿ ಕೆಲಸ ಮಾಡುತ್ತಿದ್ದೆ. ಜೋರು ಶಬ್ದ ಕೇಳಿತು. ಕೆಲಸ ಹೆಚ್ಚಿದ್ದರಿಂದ ಹೆಚ್ಚು ಗಮನ ಹರಿಸಲಿಲ್ಲ. ಕೆಲ ನಿಮಿಷಗಳಲ್ಲೇ ಕೊಠಡಿಗೆ ತಂದೆ ಓಡಿಬಂದರು. ಬೆಂಕಿ ಬಿದ್ದಿರುವುದಾಗಿ ಹೇಳಿ ಮನೆಯಲ್ಲಿದ್ದವರನ್ನೆಲ್ಲ ಹೊರಗೆ ಕರೆದುಕೊಂಡು ಬಂದರು’ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT