ಬೆಂಗಳೂರು: ಕೆಲಸದಿಂದ ವಜಾ ಮಾಡಿದರೆಂಬ ಕಾರಣಕ್ಕೆ ಮನನೊಂದು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡಿದ್ದ ನಂಜುಂಡಸ್ವಾಮಿ (26) ಎಂಬುವರು ಚಿಕಿತ್ಸೆಗೆ ಸ್ಪಂದಿಸದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಂದ್ರಹಳ್ಳಿ ಶ್ರೀಚಕ್ರ ನಗರದ ನಿವಾಸಿ ನಂಜುಂಡಸ್ವಾಮಿ, ಬೆಂಗಳೂರು ಗಾಲ್ಫ್ ಕ್ಲಬ್‌ನಲ್ಲಿ ಉದ್ಯಾನ ನಿರ್ವಹಣೆ ಕೆಲಸ ಮಾಡುತ್ತಿದ್ದರು. ಪ್ರಕರಣವೊಂದರ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಹೋಗಿ ಬಂದರೆಂಬ ಕಾರಣಕ್ಕೆ ಇವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದರಿಂದ ನೊಂದು ನಂಜುಂಡಸ್ವಾಮಿ ಡಿ. 14ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ
ದಾಖಲಿಸಲಾಗಿತ್ತು.
‘ನಂಜುಂಡಸ್ವಾಮಿ ಆತ್ಮಹತ್ಯೆ ಬಗ್ಗೆ ಸಹೋದರ ಮಹೇಶ್ ದೂರು ನೀಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬೆಂಗಳೂರು ಗಾಲ್ಫ್ ಕ್ಲಬ್‌ನ ಬೋಪಯ್ಯ, ಸುರೇಶ್ ಚಂದ್ರ ಹಾಗೂ ಉಲ್ಲಾಸ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಬಡತನದ ಕುಟುಂಬ, ಅರೆಕಾಲಿಕ ಕೆಲಸ: ‘ನಂಜುಂಡಸ್ವಾಮಿ ಅವರದ್ದು ಬಡತನದ ಕುಟುಂಬ. ಗಾಲ್ಫ್ ಕ್ಲಬ್ ಕೆಲಸದಿಂದ ಬರುತ್ತಿದ್ದ ಸಂಬಳ ಜೀವನ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಅರೆಕಾಲಿಕವಾಗಿ ರ‍್ಯಾಪಿಡೊ ಕಂಪನಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಜುಲೈನಲ್ಲಿ ವಸ್ತುವೊಂದರ ಪೂರೈಕೆ ವಿಚಾರವಾಗಿ ರ‍್ಯಾಪಿಡೊ ಕಂಪನಿ ವಿರುದ್ಧ ಗ್ರಾಹಕರೊಬ್ಬರು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು, ಎಲ್ಲ ಡೆಲಿವರಿ ಬಾಯ್‌ಗಳನ್ನು ವಿಚಾರಣೆಗೆ ಕರೆದಿದ್ದರು. ಅದರಂತೆ ನಂಜುಂಡಸ್ವಾಮಿ ಸಹ ವಿಚಾರಣೆಗೆ ಹೋಗಿದ್ದರು. ಅವರು ಅಮಾಯಕರಾಗಿದ್ದರಿಂದ ಪೊಲೀಸರು ವಾಪಸು ಕಳುಹಿಸಿದ್ದರು.’
‘ನಂಜುಂಡಸ್ವಾಮಿ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರು ಗಾಲ್ಫ್ ಕ್ಲಬ್‌ನ ಆಡಳಿತ ಮಂಡಳಿ, ಅವರನ್ನು ಕೆಲಸದಿಂದ ವಜಾ ಮಾಡಿತ್ತು. ಆಡಳಿತ ಮಂಡಳಿ ಎದುರು ಗೋಳಾಡಿದ್ದ ನಂಜುಂಡಸ್ವಾಮಿ, ‘ನಾನು ಬಡವ. ದಿಢೀರ್ ಕೆಲಸದಿಂದ ವಜಾ ಮಾಡಿದರೆ ಜೀವನ ನಡೆಸುವುದು ಕಷ್ಟವಾಗುತ್ತದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ಕರೆದಿದ್ದಕ್ಕೆ ಠಾಣೆಗೆ ಹೋಗಿ ಬಂದಿದ್ದೇನೆ. ಬೇಕಾದರೆ ನೀವೇ ಠಾಣೆಗೆ ಹೋಗಿ ನನ್ನ ಬಗ್ಗೆ ಕೇಳಿ’ ಎಂದಿದ್ದರು. ಅಷ್ಟಾದರೂ ಆಡಳಿತ ಮಂಡಳಿಯವರು ಕೆಲಸ ನೀಡಿರಲಿಲ್ಲ. ಮರಳಿ ಕೆಲಸ ಪಡೆಯಲು ನಂಜುಂಡಸ್ವಾಮಿ ಹಲವು ಬಾರಿ ಅಲೆದಾಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಡಿ. 14ರಂದು ಮಧ್ಯಾಹ್ನ ಪುನಃ ಗಾಲ್ಫ್ ಕ್ಲಬ್‌ಗೆ ಹೋಗಿದ್ದ ನಂಜುಂಡಸ್ವಾಮಿ, ಕೆಲಸ ನೀಡುವಂತೆ ಗೋಳಾಡಿದ್ದರು. ಅದಕ್ಕೆ ಸ್ಪಂದಿಸದ ಆಡಳಿತ ಮಂಡಳಿ, ‘ಕೆಲಸ ಕೊಡುವುದಿಲ್ಲ. ಏನು ಬೇಕಾದರೂ ಮಾಡಿಕೊ. ನೀನು ಸತ್ತರೂ ಸಾಯಿ’ ಎಂದಿತ್ತು. ಬೇಸತ್ತ ನಂಜುಂಡಸ್ವಾಮಿ, ಸ್ಥಳದಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ರಕ್ಷಣೆಗೆ ಹೋಗಿದ್ದ ಕೆಲಸಗಾರರು, ಬೆಂಕಿ ಆರಿಸಿ ನಂಜುಂಡಸ್ವಾಮಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಡಿ. 19ರಂದು ಅವರು ಮೃತಪಟ್ಟಿದ್ದಾರೆ’ ಎಂದೂ ಹೇಳಿವೆ.
ನಂಜುಂಡಸ್ವಾಮಿ ಆತ್ಮಹತ್ಯೆ ಸಂಬಂಧ ಪ್ರತಿಕ್ರಿಯೆ ಪಡೆಯಲು ಬೆಂಗಳೂರು ಗಾಲ್ಫ್ ಕ್ಲಬ್ ಆಡಳಿತ ಮಂಡಳಿಯವರು ಲಭ್ಯರಾಗಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.