ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಹಬ್ಬ: ಮೇಳೈಸಿದ ಸಂಭ್ರಮ

Last Updated 25 ಮಾರ್ಚ್ 2023, 19:49 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಶನಿವಾರ ಕಲಾಮೇಳಗಳ ಸಂಭ್ರಮ ಮೇಳೈಸಿದ್ದರೆ, ಚಿತ್ರಗಳ ಸಂತೆ ತೆರೆದುಕೊಂಡಿತ್ತು. ಒಂದೆಡೆ ಪುಸ್ತಕಗಳ ಓದು, ಮತ್ತೊಂದೆಡೆ ಹುಲಿವೇಷಧಾರಿಗಳ ಕುಣಿತ, ಇಡೀ ಉದ್ಯಾನದಲ್ಲಿ ಸುತ್ತಾಡಿದ ಮರಗಾಲು ಕಲಾವಿದರು...

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ನಮ್ಮ ಬೆಂಗಳೂರು ಹಬ್ಬ–2023’ ಅಂಗವಾಗಿ ಕಬ್ಬನ್ ಉದ್ಯಾನ ಕಳಗೆಟ್ಟಿತ್ತು. ಕಿಂಗ್ ಎಡ್ವರ್ಡ್ ಪ್ರತಿಮೆ ಬಳಿಯ ರಸ್ತೆಯಲ್ಲಿ ಚಿತ್ರ ಸಂತೆ, ವಿಶ್ವೇಶ್ವರಯ್ಯ ಮ್ಯೂಸಿಯಂ ಹಿಂಭಾಗದ ರಸ್ತೆಯಲ್ಲಿ ಆಹಾರ ಮೇಳ, ಹಾಗೇ ಮುಂದೆ ಸಾಗಿದರೆ ಕಾರಂಜಿ ಬಳಿ ಶಿಲ್ಪಕಲಾ ಸಂತೆ, ಗ್ರಂಥಾಲಯದ ಬಳಿ ಪುಸ್ತಕ ಸಂತೆ, ದ್ರಾಕ್ಷಿ ಮಂಡಳಿ ಎದುರು ಕರಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಹೀಗೆ ಇಡೀ ಕಬ್ಬನ್ ಉದ್ಯಾನದ ಸುತ್ತಲೂ ಒಂದೊಂದು ವಿಭಾಗ ತೆರೆಯಲಾಗಿತ್ತು. ಉದ್ಯಾನದ ಮಧ್ಯಭಾಗದಲ್ಲಿರುವ ವಾದ್ಯ ರಂಗದಲ್ಲಿ (ಬ್ಯಾಂಡ್ ಸ್ಟ್ಯಾಂಡ್‌) ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ನಾಡಿನ ಹಲವೆಡೆಯಿಂದ ಬಂದಿದ್ದ ಕಲಾವಿದರು ಮತ್ತು ಹೊರ ರಾಜ್ಯದ ತಂಡಗಳು ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಿದರು. ಮರಗಾಲು ತೊಟ್ಟ ಕಲಾವಿದರು ಉದ್ಯಾನದಲ್ಲಿ ನಡೆದಾಡುವ ಮೂಲಕ ಗಮನ ಸೆಳೆದರು. ಹುಲಿ ಕುಣಿತದ ಕಲಾವಿದರು ಅಲ್ಲಲ್ಲಿ ತಮ್ಮ ಕಲೆ ಪ್ರದರ್ಶಿಸಿದರು.

ಕಸ ನಿರ್ವಹಣೆ ಮತ್ತು ಪರಿಸರ ಜಾಗೃತಿ ಮೂಡಿಸುವ ಬೀದಿ ನಾಟಕಗಳು ಪ್ರದರ್ಶನಗೊಂಡವು. ರಂಗಶಂಕರ ಮತ್ತು ನೀನಾಸಂ ಕಲಾವಿದರಿಂದ ನಾಟಕ ಪ್ರದರ್ಶಗಳು ಕೂಡ ನಡೆದವು.

ಪುಸ್ತಕ ಸಂತೆಯಲ್ಲಿ ಸಾಹಿತಿಗಳು ದಿನವಿಡೀ ಕಥೆಗಳನ್ನು ಓದಿದರು. ಇಡೀ ಉದ್ಯಾನ ವೈವಿದ್ಯಮಯವಾಗಿ ಕಂಡಿತು. ಮಧ್ಯಾಹ್ನದ ತನಕ ಬಿಸಿಲು ಹೆಚ್ಚಾಗಿ ಇದ್ದುದರಿಂದ ಜನ ಕಡಿಮೆ ಸಂಖ್ಯೆಯಲ್ಲಿದ್ದರು. ಮಧ್ಯಾಹ್ನದ ನಂತರ ಸಾವಿರಾರು ಜನ ವೀಕ್ಷಣೆ ಮಾಡಿದರು.

‘ಬೆಂಗಳೂರು ಹಬ್ಬ ಎರಡು ದಿನ ನಡೆಯುತ್ತಿದ್ದು, ಕಬ್ಬನ್ ಉದ್ಯಾನದಲ್ಲಿ ಶನಿವಾರ ಮಾತ್ರ ಈ ಮೇಳಗಳು ಇರಲಿವೆ. ಭಾನುವಾರ ಸಂಜೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮಹೇಶ್ ಕರ್ಜಗಿ ತಿಳಿಸಿದರು.

ಬೆಂಗಳೂರಿನಲ್ಲಿ ಕಾಸ್ಮೊಪಾಲಿಟನ್ ಸಂಸ್ಕೃತಿ ಹೆಚ್ಚುತ್ತಿದ್ದು, ಅದನ್ನು ಮೆಟ್ಟಿ ಈ ನಾಡಿನ ಸಂಸ್ಕೃತಿಯನ್ನು ಪರಿಚಯಿಸಲು ಬೆಂಗಳೂರು ಹಬ್ಬ ಆಚರಿಸಲಾಗುತ್ತಿದೆ ಎಂದರು.

ಸಂಕ್ರಾಂತಿ ವೇಳೆ ಪ್ರತಿವರ್ಷ ಬೆಂಗಳೂರು ಹಬ್ಬ

ಬೆಂಗಳೂರು ಹಬ್ಬವನ್ನು ಮುಂದಿನ ವರ್ಷದಿಂದ ಸಂಕ್ರಾಂತಿ ಸಂದರ್ಭದ ಶನಿವಾರ ಮತ್ತು ಭಾನುವಾರ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕೆಂಪೇಗೌಡರು ಕಟ್ಟಿದ ಬೆಂಗಳೂರು ಈಗ ವಿಶ್ವವಿಖ್ಯಾತವಾಗಿ ಬೆಳೆದಿದೆ. ಬೇರೆ ದೇಶ ಮತ್ತು ರಾಜ್ಯಗಳ ಜನ ಇಲ್ಲಿದ್ದಾರೆ. ಅವರಿಗೂ ಇಲ್ಲಿನ ಕಲೆ, ಆಹಾರ ಸಂಸ್ಕೃತಿ, ಸಂಸ್ಕಾರ ಗೊತ್ತಾಗಬೇಕು. ಪರಿಚಯಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೇಳಿದರು.

ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ‘ಬೆಂಗಳೂರಿನ ಕೀರ್ತಿ ಜಗತ್ತಿನ ಎಲ್ಲೆಡೆ ಹರಡಿದೆ. ವಿಶೇಷವಾಗಿ ಬೆಂಗಳೂರು ಹಬ್ಬ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT