ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೆರೆಹೊರೆಯವರಿಗೆ ನೆರವು ಸವಾಲು– ಬೆಂಗಳೂರು ಆಯ್ಕೆ

ಚಿಣ್ಣರ ಬದುಕು ಹಸನಾಗಿಸಲು ದೇಶದ 25 ನಗರಗಳಲ್ಲಿ ಕಾರ್ಯಕ್ರಮ ಜಾರಿ
ಫಾಲೋ ಮಾಡಿ
Comments

ಬೆಂಗಳೂರು: ಚಿಣ್ಣರ ಬದುಕು ಹಸನಾಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ‘ನೆರೆಹೊರೆಯವರಿಗೆ ನೆರವು–ಸವಾಲು’ ಕಾರ್ಯಕ್ರಮದ ಅನುಷ್ಠಾನಕ್ಕೆ ಬೆಂಗಳೂರು ನಗರ ಆಯ್ಕೆಯಾಗಿದೆ.

ಈ ಸವಾಲಿನಲ್ಲಿ ಭಾಗವಹಿಸುವ ಪ್ರಸ್ತಾವನೆ ಸಲ್ಲಿಸಲು ಫೆ.7ರವರೆಗೆ ಕಾಲಾವಕಾಶ ನೀಡಲಾಗಿತ್ತು. ಒಟ್ಟು 60 ನಗರಗಳು ಪ್ರಸ್ತಾವನೆ ಸಲ್ಲಿಸಿದ್ದವು. ಪರಿಶೀಲನಾ ಸಮಿತಿಯು 25 ನಗರಗಳ ಒಕ್ಕೂಟವನ್ನು ಅಂತಿಮಗೊಳಿಸಿದೆ. ಅವುಗಳಲ್ಲಿ ರಾಜ್ಯದ ಬೆಂಗಳೂರು ಹಾಗೂ ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳು ಸೇರಿವೆ. ಈ ಕಾರ್ಯಕ್ರಮ ಅನುಷ್ಠಾನಕ್ಕೆ ಈಗಾಗಲೇ ಸಲ್ಲಿಕೆಯಾಗಿರುವ ಪ್ರಸ್ತಾವನೆಗೆ ಪೂರಕವಾಗಿ ಕೇಂದ್ರ ಸರ್ಕಾರ ಇನ್ನು ಆರು ತಿಂಗಳು ಬೆಂಬಲ ಹಾಗೂ ತಾಂತ್ರಿಕ ನೆರವನ್ನು ಒದಗಿಸಲಿದೆ.

ಸ್ಮಾರ್ಟ್‌ ಸಿಟಿ ಅಭಿಯಾನದ ಅಡಿ ರೂಪಿಸಲಾದ ಈ ಕಾರ್ಯಕ್ರಮವನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಬರ್ನಾರ್ಡ್‌ ವ್ಯಾನ್‌ ಲೀರ್‌ ಫೌಂಡೇಷನ್‌ ಸಹಯೋಗದಲ್ಲಿ ಜಾರಿಗೊಳಿಸಲಿದೆ. ವರ್ಲ್ಡ್‌ ರಿಸೋರ್ಸಸ್‌ ಇನ್‌ಸ್ಟಿಟ್ಯೂಟ್‌ (ಡಬ್ಲ್ಯುಆರ್‌ಐ) ಇಂಡಿಯಾ ಇದಕ್ಕೆ ತಾಂತ್ರಿಕ ನೆರವು ಒದಗಿಸಲಿದೆ. ಶಿಶುಗಳ, ಚಿಣ್ಣರ ಹಾಗೂ ಅವರ ಬಗ್ಗೆ ಕಾಳಜಿ ವಹಿಸುವವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಾರ್ವಜನಿಕ ಸುಧಾರಣೆಗಾಗಿ ಸಾರ್ವಜನಿಕ ಸ್ಥಳಗಳು, ಸಂಚಾರ, ಸೇವೆಗಳ ಲಭ್ಯತೆ ಹಾಗೂ ಸುಧಾರಣೆಗಾಗಿ ಹಮ್ಮಿಕೊಳ್ಳುವ ಪ್ರಾಯೋಗಿಕ ಕಾರ್ಯಕ್ರಮಗಳಿಗೆ ಇದರ ಅಡಿ ನೆರವು ನೀಡಲಾಗುತ್ತದೆ.

ಸುಗಮ ಪ್ರಯಾಣ ಒದಗಿಸುವಂತಹ ಚಿಣ್ಣರಸ್ನೇಹಿ ಸಂಚಾರ ಹಬ್‌ ರೂಪಿಸುವುದು, ಶಿಶುಗಳ ಆರೈಕೆ ಸೌಕರ್ಯಗಳನ್ನು ಅಳವಡಿಸುವುದು, ಮಕ್ಕಳು ಚಟುವಟಿಕಾ ತಾಣಗಳ ಅಭಿವೃದ್ಧಿ, ಈಗಿರುವ ಅಂಗನವಾಡಿಗಳ ಪುನರುಜ್ಜೀವನ, ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ಸೂಕ್ತ ಸೌಕರ್ಯ ಒದಗಿಸುವುದು ಈ ಕಾರ್ಯಕ್ರಮದಲ್ಲಿ ಸೇರಿವೆ.

ಈ ಒಕ್ಕೂಟಕ್ಕೆ ಆಯ್ಕೆಯಾದ ನಗರಗಳು ಚಿಣ್ಣರ ಸೌಕರ್ಯಗಳ ಸಾಮರ್ಥ್ಯವರ್ಧನೆಗೆ ತಾಂತ್ರಿಕ ಮುಂದಿನ ಆರು ತಿಂಗಳು ಕೇಂದ್ರದಿಂದ ನೆರವನ್ನು ಪಡೆಯಲಿವೆ. ಪ್ರಯೋಗಗಳ ಮೂಲಕ ಚಟುವಟಿಕೆ ರೂಪಿಸುವುದಕ್ಕೆ, ಸಲ್ಲಿಸಿರುವ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಆರಂಭಿಕ ಯಶಸ್ಸು ಗಳಿಸುವುದಕ್ಕೆ, ನಾಗರಿಕರ ಸಹಭಾಗಿತ್ವ ಪಡೆಯುವುದಕ್ಕೆ ಹಾಗೂ ಒಮ್ಮತ ಮೂಡಿಸುವುದಕ್ಕೆ ಕೂಡಾ ಕೇಂದ್ರವು ಅಗತ್ಯ ಸಹಾಯ ಒದಗಿಸಲಿದೆ.

ಏನಿದು ನೆರೆಹೊರೆಯವರ ಪೋಷಣೆ ಸವಾಲು?

ನಗರದ ಪ್ರದೇಶಗಳಲ್ಲಿ ವಿಶೇಷವಾಗಿ ಎಳೆಯರಿಗೆ ಅವಕಾಶಗಳನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರವು 2020ರ ನ. 4ರಂದು ಈ ಕಾರ್ಯಕ್ರಮ ಪ್ರಕಟಿಸಿತು. ಮೂರು ವರ್ಷಗಳ ಈ ಸವಾಲಿನ ಜಾರಿಗೆ ದೇಶದ ಎಲ್ಲ ಸ್ಮಾರ್ಟ್‌ ಸಿಟಿಗಳು, ರಾಜ್ಯದ ಹಾಗೂ ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು ಹಾಗೂ 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು ಅರ್ಹತೆ ಪಡೆದಿದ್ದವು.

ಎಳೆಯರ ಜೀವನ ಗುಣಮಟ್ಟ ಸುಧಾರಣೆಗೆ ಮಾಡಿಕೊಂಡಿರುವ ಸಿದ್ಧತೆ ಹಾಗೂ ಈ ನಗರಗಳ ಬದ್ಧತೆಗಳ ಆಧಾರದಲ್ಲಿ ಕೇಂದ್ರ ಸರ್ಕಾರವು ತಾಂತ್ರಿಕ ನೆರವನ್ನು ಒದಗಿಸಲಿದೆ. ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಈ ಕಾರ್ಯಕ್ರಮದ ಪ್ರಮುಖ ಧ್ಯೇಯ. ಪ್ರತಿಯೊಂದು ಮಗುವಿನ ಬಾಲ್ಯದ ಬೆಳವಣಿಗೆ ಕೇಂದ್ರೀಕರಿಸಿದೇಶದ ನಗರಗಳಲ್ಲಿ ಕಾಲಕ್ರಮೇಣ ಯೋಜನೆ ಹಾಗೂ ನಿರ್ವಹಣಾ ವ್ಯವಸ್ಥೆ ರೂಪಿಸುವುದಕ್ಕೆ ನಗರದ ಪ್ರಮುಖರು, ಆಡಳಿತಗಾರರು, ಸಿಬ್ಬಂದಿ, ಎಂಜಿನಿಯರ್‌ಗಳು, ನಗರ ಯೋಜಕರು ಹಾಗೂ ವಾಸ್ತುಶಿಲ್ಪಿಗಳು ಕೈಜೋಡಿಸಲಿದ್ದರೆ.

ಬೆಂಗಳೂರಿನ ಪ್ರಸ್ತಾವನೆಯಲ್ಲೇನಿದೆ?

ನಗರದಲ್ಲಿ ಮಕ್ಕಳ ವರ್ತನೆಯಲ್ಲಿ ಗಮನಾರ್ಹ ಬದಲಾವಣೆ ತರುವಂತಹ ಚಟುವಟಿಕೆ ಹಮ್ಮಿಕೊಳ್ಳುವುದು, ನಗರದ ಯೋಜನೆ ಮತ್ತು ಅಭಿವೃದ್ಧಿಯ ದೀರ್ಘಾವಧಿಯ ಕಾರ್ಯಕ್ರಮಗಳನ್ನು ಮತ್ತು ನೀತಿಗಳನ್ನು ರೂಪಿಸುವಾಗ ಅವುಗಳನ್ನು ಚಿಣ್ಣರ ಬಾಲ್ಯದ ದೃಷ್ಟಿಯಿಂದಲೂ ಪರಾಮರ್ಶಿಸುವ ಪ್ರಮುಖ ಅಂಶ ಬೆಂಗಳೂರು ಸ್ಮಾರ್ಟ್‌ ಸಿಟಿ ಸಂಸ್ಥೆಯ ಪ್ರಸ್ತಾವನೆಯಲ್ಲಿದೆ.

ಕಾರ್ಯಕ್ರಮದ ಪ್ರಮುಖ ಅಂಶಗಳೇನು?

ನಗದ ಬೀದಿಗಳನ್ನು ಸುರಕ್ಷಿತ ಹಾಗೂ ಚಿಣ್ಣರು ನಡೆದಾಡುವುದಕ್ಕೆ ಅನುಕೂಲಕರವಾಗಿ ರೂಪಿಸಲಾಗುತ್ತದೆ

ಚಿಣ್ಣರ ನಡುವೆ ಒಡನಾಟ ಹೆಚ್ಚಿಸುವುದಕ್ಕೆ ಹಾಗೂ ಅವರು ಆಡುವುದಕ್ಕೆ ಹೆಚ್ಚು ಮೈದಾನಗಳು ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತದೆ

ಬಾಲ್ಯದ ಆರಂಭಿಕ ಅವಧಿಯಲ್ಲಿ ಅಗತ್ಯವಿರುವ ಸೌಕರ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಲ್ಪಿಸಲಾಗುತ್ತದೆ

ಬಾಲ್ಯದ ಆರಂಭಿಕ ಅವಧಿಯಲ್ಲಿ ಅಗತ್ಯವಿರುವ ಸೇವೆಗಳ ಲಭ್ಯತೆಯನ್ನು ಹೆಚ್ಚಿಸಲಾಗುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT