ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲಹಳ್ಳಿ ಕ್ರಾಸ್‌: ಸಂಚಾರ ಕಿರಿಕಿರಿ – ಸವಾರರ ಮುನಿಸು

Last Updated 6 ಜನವರಿ 2022, 20:16 IST
ಅಕ್ಷರ ಗಾತ್ರ

ಬೆಂಗಳೂರು: ಸದಾ ಗಿಜಿಗುಡುವ ವಾಹನಗಳು, ಕಿವಿಮುಚ್ಚಿಕೊಂಡರೂ ಕೇಳುವ ವಾಹನಗಳ ಹಾರ್ನ್‌ ಶಬ್ದ, ಅಡ್ಡಾದಿಡ್ಡಿ ನಿಲ್ಲುವ ಬಿಎಂಟಿಸಿ ಬಸ್‌ಗಳು, ರಸ್ತೆ ದಾಟಲು ತಿಣುಕಾಡುವ ಪಾದಚಾರಿಗಳು...

ತುಮಕೂರು ರಸ್ತೆಯ ಜಾಲಹಳ್ಳಿ ಕ್ರಾಸ್‌ ಜಂಕ್ಷನ್‌ನಲ್ಲಿ ಪ್ರತಿನಿತ್ಯ ಕಂಡುಬರುವ ಸಾಮಾನ್ಯ ದೃಶ್ಯವಿದು. ಜಾಲಹಳ್ಳಿ ಕ್ರಾಸ್‌ನ ಸಂಚಾರ ದಟ್ಟಣೆಯ ‘ಜಾಲ’ದಿಂದ ಜನರನ್ನು ಪಾರು ಮಾಡಲು ಮೂರು ವರ್ಷಗಳ ಹಿಂದೆಯೇ ರೂಪಿಸಿರುವ ಗ್ರೇಡ್‌ ಸಪರೇಟರ್‌ (ಅಂಡರ್ ಪಾಸ್‌) ಯೋಜನೆ ಇನ್ನೂ ನನೆಗುದಿಗೆ ಬಿದ್ದಿದೆ. ವಾಹನ ಸವಾರರು ದಟ್ಟಣೆಯಲ್ಲಿ ಸಿಲುಕಿ ನಲುಗುವುದು ತಪ್ಪಿಲ್ಲ.

ಜಾಲಹಳ್ಳಿ ಕ್ರಾಸ್‌ ಜಂಕ್ಷನ್‌ ಎಂದಾಗ ಗಿಜಿಗುಡುವ ಟ್ರಾಫಿಕ್ ಕಣ್ಮುಂದೆ ಬರುತ್ತದೆ.ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 8ರಿಂದ 10.30 ಮತ್ತು ಸಂಜೆ 4.30ರ ನಂತರ ಇಲ್ಲಿ ವಾಹನ ದಟ್ಟಣೆ ವಿಪರೀತ. ಪ್ರತಿ ಸೋಮವಾರ ಬೆಳಿಗ್ಗೆ ಮತ್ತು ಹಬ್ಬದ ದಿನಗಳಲ್ಲಿ ಈ ಪ್ರದೇಶದ ಮೂಲಕ ಹಾದು ಹೋಗುವುದೆಂದರೆವಾಹನಗಳ ಸವಾರರಿಗೆ ನರಕಯಾತನೆ.

ಬಿಎಂಟಿಸಿ ಬಸ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದಲೂ ಸಮಸ್ಯೆ ಹೆಚ್ಚಾಗಿದೆ. 100 ಅಡಿ ರಸ್ತೆ ಮೂಲಕ ಟಿವಿಎಸ್‌ ಕ್ರಾಸ್ ಕಡೆಗೆ ಹೋಗುವ ಬಸ್‌ಗಳ ನಿಲುಗಡೆಗಾಗಿ ಜಂಕ್ಷನ್‌ದಿಂದ 200 ಅಡಿ ದೂರದಲ್ಲಿ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಯಾವ ಬಸ್‌ ಕೂಡ ಅಲ್ಲಿ ನಿಲ್ಲುವುದಿಲ್ಲ. ಯಶವಂತಪುರ, ಗೊರಗುಂಟೆಪಾಳ್ಯ ಕಡೆಯಿಂದ ಬರುವ ಬಸ್‌ಗಳು ಜಾಲಹಳ್ಳಿ ಕ್ರಾಸ್‌ ಸಿಗ್ನಲ್ ಬಳಿಯೇಅಡ್ಡಾದಿಡ್ಡಿ ನಿಲ್ಲುತ್ತವೆ. ಹೀಗಾಗಿ, ತುಮಕೂರು ಕಡೆಗೆ ಹೋಗುವ ವಾಹನಗಳಿಗೆ ಜಾಗವಿಲ್ಲದೆ ದಟ್ಟಣೆ ಹೆಚ್ಚಾಗುತ್ತಿದೆ. ಸಂಚಾರ ಪೊಲೀಸರು ಸ್ಥಳದಲ್ಲಿದ್ದರೂ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲುವುದು ತಪ್ಪಿಲ್ಲ. ಮೈಕ್‌ನಲ್ಲಿ ಪೊಲೀಸರು ಕಿರುಚುತ್ತಿದ್ದರೂ ಕೇಳಿಸದವರಂತೆ ಬಿಎಂಟಿಸಿ ಬಸ್ ಚಾಲಕರು ಜಾಣ ಕಿವುಡು ಪ್ರದರ್ಶಿಸುತ್ತಾರೆ.

ದುರಸ್ತಿ ಕಾರ್ಯಕ್ಕಾಗಿ ಮೇಲ್ಸೇತುವೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ವಾಹನಗಳ ದಟ್ಟಣೆ ಮೂರು ಪಟ್ಟು ಹೆಚ್ಚಾಗಿದೆ. ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ತಂಡಕ್ಕೆ ಸಂಚಾರ ದಟ್ಟಣೆಯ ನರಕದ ದರ್ಶನವಾಯಿತು.

‘ತುಮಕೂರು ಕಡೆಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ರಸ್ತೆಗೆ ಅಡ್ಡಲಾಗಿಯೇ ನಿಲ್ಲುತ್ತವೆ. ಸಿಗ್ನಲ್ ದಾಟಿದ ಕೂಡಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಚಾಲಕರು ಬಸ್ ನಿಲ್ಲಿಸುತ್ತಾರೆ. ಹಿಂದೆ ಬರುವ ಬಸ್‌ಗಳು ಜಾಗವಿಲ್ಲದೆ ಜಂಕ್ಷನ್‌ ಮಧ್ಯದಲ್ಲಿ ನಿಲ್ಲುತ್ತವೆ. ಅಯ್ಯಪ್ಪಸ್ವಾಮಿ ದೇಗುಲ ರಸ್ತೆ, ತುಮಕೂರು ಕಡೆಯಿಂದ ಬರುವ ಬಸ್‌ಗಳು ಪೀಣ್ಯ ಕಡೆಗೆ ಸಾಗಲು ದಾರಿಯೇ ಇಲ್ಲದಂತಾಗುತ್ತದೆ. ಸಂಚಾರ ಸಮಸ್ಯೆಗೆ ಮುಕ್ತಿಯೇ ಇಲ್ಲದಂತಾಗಿದೆ’ ಎಂದು ವಾಹನ ಸವಾರರು ಹೇಳುತ್ತಾರೆ.

ಕನಸಾಗಿಯೇ ಉಳಿದ ಗ್ರೇಡ್ ಸಪರೇಟರ್

ಈ ಸಂಚಾರ ದಟ್ಟಣೆಗೆ ಪರಿಹಾರವಾಗಿ ಸಿಗ್ನಲ್ ರಹಿತ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಗ್ರೇಡ್ ಸಪರೇಟರ್ ನಿರ್ಮಿಸಲು ಬಿಬಿಎಂಪಿ ಮೂರು ವರ್ಷಗಳ ಹಿಂದೆಯೇ ಯೋಜನೆ ರೂಪಿಸಿದೆ. ಆದರೆ, ಈವರೆಗೆ ಕಾಮಗಾರಿ ಆರಂಭವಾಗಿಲ್ಲ.

‘ಅನುದಾನವೂ ಲಭ್ಯವಿದ್ದು, ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಂದ ಕಾಮಗಾರಿಗೆ ಚಾಲನೆ ಕೊಡಿಸುವುದಾಗಿ ಸ್ಥಳೀಯ ಶಾಸಕ ಎನ್‌.ಮುನಿರತ್ನ ತಿಳಿಸಿದ್ದರು. ಬಳಿಕ ಅವರು ಬಿಜೆಪಿ ಸೇರ್ಪಡೆಯಾಗುವ ಸಂದರ್ಭದಲ್ಲಿ ನೀಡಿದ ಕಾರಣಗಳಲ್ಲಿ ಈ ಗ್ರೇಡ್‌ ಸಪರೇಟ್ ಕಾಮಗಾರಿ ಆರಂಭಕ್ಕೆ ವಿಳಂಬ ಆಗುತ್ತಿರುವುದನ್ನೂ ಉಲ್ಲೇಖಿಸಿದ್ದರು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಎರಡೂವರೆ ವರ್ಷಗಳು ಕಳೆದಿವೆ. ಈವರೆಗೆ ಕಾಮಗಾರಿ ಆರಂಭವಾಗಿಲ್ಲ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಭೂಸ್ವಾಧೀನ ಪ್ರಕ್ರಿಯೆ ಆರಂಭ

‘ಗ್ರೇಡ್‌ ಸಪರೇಟರ್‌ ನಿರ್ಮಿಸಲು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಿ 12 ತಿಂಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಮುಖ್ಯ ರಸ್ತೆ) ಬಿ.ಎಸ್. ಪ್ರಹ್ಲಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯೋಜನೆಗೆ ಅನುದಾನದ ಕೊರತೆ ಇಲ್ಲ. ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ₹10 ಕೋಟಿ ಬಿಡುಗಡೆಯಾಗಿದೆ. ₹20 ಕೋಟಿ ಶೀಘ್ರವೇ ಬಿಡುಗಡೆಯಾಗಲಿದ್ದು, ಭೂಸ್ವಾಧೀನ ಪ್ರಕ್ರಿಯೆ ಒಂದು ಹಂತಕ್ಕೆ ಬಂದರೆ ಕಾಮಗಾರಿ ಆರಂಭಿಸಲಾಗುವುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT