ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

5ಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟ: ಭಾರಿ ಶಬ್ದಕ್ಕೆ ಬೆಚ್ಚಿದ ಜನರು

Published : 19 ಅಕ್ಟೋಬರ್ 2023, 0:30 IST
Last Updated : 19 ಅಕ್ಟೋಬರ್ 2023, 0:30 IST
ಫಾಲೋ ಮಾಡಿ
Comments

ಬೆಂಗಳೂರು: ಕೋರಮಂಗಲದ ತಾವರೆಕೆರೆ ಜಂಕ್ಷನ್‌ನ ಹೊಸೂರು ರಸ್ತೆಯಲ್ಲಿರುವ ಮಡ್‌ಪೈಪ್‌ ಕೆಫೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ದುರಂತದ ವೇಳೆ ಐದಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಉಂಟಾದ ಭಾರಿ ಶಬ್ದವು ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿತು.

ಕೋರಮಂಗಲ ಪ್ರದೇಶದಲ್ಲಿ ಅತಿಹೆಚ್ಚು ಪಬ್‌ಗಳಿವೆ. ಬುಧವಾರ ಎಂದಿನಂತೆಯೇ ಜನರು ಕೆಲಸ ಕಾರ್ಯದಲ್ಲಿ ಮಗ್ನರಾಗಿದ್ದರು. ಆಗ ಮಡ್‌ಪೈಪ್‌ ಕೆಫೆಯಿರುವ ಮಹಡಿಯಿಂದ ಇದಕ್ಕಿದ್ದಂತೆ ಭಾರಿ ಶಬ್ದ ಕೇಳಿಸಿತು. ಬೆಂಕಿಯ ಕೆನ್ನಾಲಿಗೆ, ದಟ್ಟವಾದ ಹೊಗೆಯೂ ಕಾಣಿಸಿಕೊಂಡಿತು. ಈ ಎಲ್ಲ ದೃಶ್ಯಗಳೂ ಸುತ್ತಲಿದ್ದ ಜನರ ಆತಂಕ ಹೆಚ್ಚುವಂತೆ ಮಾಡಿತ್ತು. ಸ್ಫೋಟದ ರಭಸಕ್ಕೆ ಶೀಟ್‌ನಿಂದ ನಿರ್ಮಿಸಿದ್ದ ಚಾವಣಿ ಹಾರಿ ಹೋಗಿತ್ತು. ಶೀಟ್‌ಗಳು ಅಕ್ಕಪಕ್ಕದ ಕಟ್ಟಡಗಳು ಹಾಗೂ ರಸ್ತೆಯ ಮೇಲೂ ಬಿದ್ದಿದ್ದವು.

ಒಂದೊಂದು ಸಿಲಿಂಡರ್‌ಗಳು ಸ್ಪೋಟಗೊಳುತ್ತಿದ್ದಂತೆಯೇ ಭಾರಿ ಪ್ರಮಾಣದಲ್ಲಿ ಶಬ್ದ ಕೇಳಿಸುತ್ತಿತ್ತು. ಬೆಂಕಿ ಕಾಣಿಸಿಕೊಂಡ ತಕ್ಷಣ ಕೆಲವರು, ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿದರು.

ಪಾರಾದ ಪ್ರೇಮ್‌ ಸ್ನೇಹಿತರು:

ಹೊರಗೆ ಕೆಫೆ ಎಂದು ನಾಮಫಲಕ ಹಾಕಿದ್ದರೂ ಒಳಗೆ ರೆಸ್ಟೊರೆಂಟ್‌ ನಡೆಸಲಾಗುತ್ತಿತ್ತು. ಮಧ್ಯಾಹ್ನದ ವೇಳೆ ಘಟನೆ ನಡೆದಿದ್ದರಿಂದ ಗ್ರಾಹಕರು ಇರಲಿಲ್ಲ. ಬಾಣಸಿಗ ಪ್ರೇಮ್‌ ಸಿಂಗ್‌ಸೌದ ಅವರು ಅಡುಗೆಯ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆಗ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಎರಡು ಹಾಗೂ ಮೂರನೇ ಅಂತಸ್ತಿನ ಫಿಟ್ನೆಸ್‌ ಕ್ಲಬ್‌ನಲ್ಲಿ ಯಾರೂ ಇರಲಿಲ್ಲ. ಈ ಕ್ಲಬ್‌ನಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ, ಕೆಳಅಂತಸ್ತಿನದಲ್ಲಿದ್ದ ನೆಕ್ಸಾ ಕಾರು ಶೋರೂಂನಲ್ಲಿ ಒಂದು ಕಾರಿಗೆ ಹಾನಿಯಾಗಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ನಾಲ್ಕು ಬೈಕ್‌ಗಳು ಭಸ್ಮವಾಗಿವೆ. ಸ್ಥಳಕ್ಕೆ ಬಂದಿದ್ದ ಆಂಬುಲೆನ್ಸ್ ಸಿಬ್ಬಂದಿ ಹನುಮಂತಪ್ಪ ಸೇರಿದಂತೆ ಹಲವರು ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಜತೆಗೆ ಕೈಜೋಡಿಸಿದರು.

ಎಂಟು ವಾಹನಗಳ ಕಾರ್ಯಾಚರಣೆ:

ನಗರದ ವಿವಿಧೆಡೆಯ ಅಗ್ನಿಶಾಮಕ ದಳದ ಎಂಟು ವಾಹನಗಳಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ ಮೂರು ತಾಸು ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು ಹತೋಟಿಗೆ ತರಲು ಯಶಸ್ವಿಯಾದರು. ಮಧ್ಯಾಹ್ನ 3 ಗಂಟೆ ವೇಳೆಗೆ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂತು ಎಂದು ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಮಾಹಿತಿ ನೀಡಿದರು.

‘ರೆಸ್ಟೊರೆಂಟ್‌ನಲ್ಲಿ 15 ಮಂದಿ ಕೆಲಸ ಮಾಡುತ್ತಿದ್ದೆವು. ಎಲ್ಲರೂ ನೇಪಾಳದವರು. ಘಟನೆ ನಡೆದ ವೇಳೆ ಕೆಲವರು ಮಾತ್ರ ಆ ಅಂತಸ್ತಿನಲ್ಲಿದ್ದರು’ ಎಂದು ಗಾಯಾಳು ಪ್ರೇಮ್‌ ಸಹೋದರ ಹೇಳಿದರು.

ಕಟ್ಟಡದ ಒಳಗೇ ಸಿಲಿಂಡರ್‌

20 ದಿನಗಳ ಹಿಂದಷ್ಟೇ ಆರಂಭವಾಗಿದ್ದ ಕೆಫೆಯಲ್ಲಿ ಅಗ್ನಿನಂದಿಸುವ ಉಪಕರಣಗಳನ್ನು ಅಳವಡಿಸಿರಲಿಲ್ಲ. ಕಟ್ಟಡದ ಹೊರಭಾಗದಲ್ಲಿ ಸಿಲಿಂಡರ್‌ ದಾಸ್ತಾನು ಮಾಡುವ ಬದಲಿಗೆ ಅಡುಗೆ ಕೋಣೆಯಲ್ಲೇ ಎಲ್ಲ ಸಿಲಿಂಡರ್‌ಗಳನ್ನು ಇಡಲಾಗಿತ್ತು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದರು. ಮಾಲೀಕ ಕರಣ್‌ ಜೈನ್ ಅವರನ್ನು ಸುದ್ದಗುಂಟೆಪಾಳ್ಯ ಪೊಲೀಸರು ವಿಚಾರಣೆ ನಡೆಸಿದರು.

ಘಟನೆ ನಡೆದ ಅಂತಸ್ತಿನಲ್ಲಿ ಹುಕ್ಕಾ ಬಾರ್‌ ನಡೆಸಲಾಗುತ್ತಿತ್ತೇ ಅಥವಾ ರೆಸ್ಟೊರೆಂಟ್‌ ಇತ್ತೇ ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಎಡಿಜಿಪಿ ಪಿ.ಹರಿಶೇಖರನ್, ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್‌ ಗುಪ್ತಾ, ಸತೀಶ್ ಕುಮಾರ್, ಡಿಸಿಪಿ ಸಿ.ಕೆ.ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಕಿ ದುರಂತ ಸಂಭವಿಸಿದ ಕೋರಮಂಗಲದ ಮಡ್‌‌ ಪೈಪ್ ಕೆಫೆ ಕಟ್ಟಡ.
ಬೆಂಕಿ ದುರಂತ ಸಂಭವಿಸಿದ ಕೋರಮಂಗಲದ ಮಡ್‌‌ ಪೈಪ್ ಕೆಫೆ ಕಟ್ಟಡ.
ಬೆಂಕಿಗೆ ಆಹುತಿಯಾದ ಬೈಕ್‌ಗಳು.
ಬೆಂಕಿಗೆ ಆಹುತಿಯಾದ ಬೈಕ್‌ಗಳು.
ಸ್ಪೋಟಗೊಂಡ ಸಿಲಿಂಡರ್‌ಗಳು.
ಸ್ಪೋಟಗೊಂಡ ಸಿಲಿಂಡರ್‌ಗಳು.
ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕದ ದಳದ ಸಿಬ್ಬಂದಿ.
ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕದ ದಳದ ಸಿಬ್ಬಂದಿ.

ಪಬ್‌ಗಳಲ್ಲಿ ನಿಯಮ ಉಲ್ಲಂಘನೆ

‘ಕೋರಮಂಗಲದ ಭಾಗದಲ್ಲಿ ನೂರಾರು ಪಬ್‌ಗಳಿವೆ. ಹಲವು ಪಬ್‌ಗಳು ನಿಯಮ ಉಲ್ಲಂಘಿಸಿ ನಡೆಯುತ್ತಿವೆ. ಈ ಭಾಗದಲ್ಲಿ ಶಾಲಾ–ಕಾಲೇಜುಗಳಿದ್ದರೂ ಅನುಮತಿ ನೀಡಲಾಗಿದೆ. ರಾತ್ರಿ 2 ಗಂಟೆಯವರೆಗೂ ಅಬ್ಬರದ ಸಂಗೀತ ಇರುತ್ತದೆ. ಇದರಿಂದ ಸ್ಥಳೀಯರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ನಿಯಮ ಪಾಲಿಸದ ಪಬ್‌ಗಳನ್ನು ಬಂದ್‌ ಮಾಡಿಸಬೇಕು’ ಎಂದು ಕೋರಮಂಗಲದ ನಿವಾಸಿ ಸುರೇಶ್ ಹೇಳಿದರು. ಕೆಫೆಯಲ್ಲಿ ನಡೆದ ದುರಂತದಿಂದ ಮರಿಗೌಡ ರಸ್ತೆ ತಾವರೆಕೆರೆ ಜಂಕ್ಷನ್‌ ಸುತ್ತಮುತ್ತ ಭಾರಿ ಸಂಚಾರ ದಟ್ಟಣೆ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT