ಶನಿವಾರ, ನವೆಂಬರ್ 26, 2022
21 °C

ಲಾಲ್‌ಬಾಗ್‌.. ಸಮಸ್ಯೆಗಳ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹೂವೇ ಇಲ್ಲದ ಕಮಲದ ಕೊಳ’

ದಶಕಗಳ ಹಿಂದೆ ಲಾಲ್‌ಬಾಗ್‌ನಲ್ಲಿ ಕಮಲದ ಕೊಳ(ಲೋಟಸ್ ಪಾಂಡ್) ಇತ್ತು. ಇದು ಪ್ರಮುಖ ಆಕರ್ಷಣೆಯ ಕೇಂದ್ರವಾಗಿತ್ತು. ಈಗ ಕಮಲದ ಹೂವುಗಳಿಲ್ಲದೆ ಬರಿ ಕೊಳವಷ್ಟೇ ಉಳಿದಿದೆ. ಈ ಕೊಳದಲ್ಲಿ ಕಮಲದ ಹೂವುಗಳನ್ನು ಬೆಳೆಯಲು ಕ್ರಮ ಕೈಗೊಳ್ಳಬೇಕು. ಮತ್ಸ್ಯಾಗಾರ ಮತ್ತು ಮಿನಿ ಮೃಗಾಲಯ ಮಕ್ಕಳ ಅತ್ಯುತ್ತಮ ಆಕರ್ಷಕ ತಾಣವಾಗಿತ್ತು. ಈ ಕಟ್ಟಡ ಪಕ್ಷಿಗಳು ಮತ್ತು ಮೀನುಗಳಿಲ್ಲದ ಕೇವಲ ಮರುಭೂಮಿಯಾಗಿ ವಿನಾಶದ ಅಂಚಿನಲ್ಲಿದೆ. ಗತವೈಭವವನ್ನು ಮರುಸ್ಥಾಪಿಸಬೇಕಾಗಿದೆ. ಕತ್ತರಿಸುವ ಹುಲ್ಲಿನ ರಾಶಿಯನ್ನು ಅಲ್ಲಿಯೇ ಇರಿಸಿ ದುರ್ವಾಸನೆಗೆ ಕಾರಣವಾಗುತ್ತದೆ. ಹಾಳಾಗಿರುವ ರಸ್ತೆಗಳನ್ನು ಕೂಡಲೇ ಸರಿಪಡಿಸಬೇಕು. ಗಾಜಿನ ಮನೆಯೊಳಗೆ ಸಾಕಷ್ಟು ಹೊಂಡಗಳಿದ್ದು, ಇದರಿಂದ ನಡೆದಾಡಲು ಕಷ್ಟವಾಗುತ್ತಿದೆ. ಆದ್ದರಿಂದ ಗಾಜಿನ ಮನೆಯ ಸೂಕ್ತ ನಿರ್ವಹಣೆ ಅಗತ್ಯ. ಪ್ರವಾಸಿಗಳ ವಸ್ತುಗಳನ್ನು ಇಡಲು ಮುಖ್ಯ ಗೇಟ್‌ ಬಳಿ ಲಾಕರ್ ಸೌಲಭ್ಯ ಕಲ್ಪಿಸಬೇಕು. ವಿದ್ಯುತ್ ದೀಪಗಳ ಮತ್ತು ಸ್ವಿಚ್‌ಗಳ ನಿರ್ವಹಣೆ ಮಾಡಬೇಕು.  ವಸ್ತುಗಳನ್ನು ಹಿಡಿದು ತಿರುಗುವ ವ್ಯಾಪಾರಿಗಳ ಸಂಖ್ಯೆ ವಾರಾಂತ್ಯದಲ್ಲಿ ಹೆಚ್ಚುತ್ತಿದ್ದು, ಮುಜುಗರ ಹೆಚ್ಚುಸುತ್ತಿದೆ. ಇದಕ್ಕೆ ತಪ್ಪಿಸಬೇಕು. ಉದ್ಯಾನದಲ್ಲಿ ಇನ್ನಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮತ್ತು ಶುಚಿತ್ವಕ್ಕೆ ಗಮನ ಹರಿಸಬೇಕು.

ಪ್ರೊ.ಎಂ.ಆರ್.ದೊರೆಸ್ವಾಮಿ, ಶಿಕ್ಷಣ ಸುಧಾರಣೆಗಳ ಸಲಹೆಗಾರ

‘ಮಧುರ ಸಂಗೀತದ ವ್ಯವಸ್ಥೆ ಮಾಡಿ’

ಲಾಲ್‌ಬಾಗ್‌ನಲ್ಲಿ ಸುಮಧುರ ಸಂಗೀತ ಕೇಳುವ ವ್ಯವಸ್ಥೆ ಮಾಡಬೇಕು. ಎಲ್ಲ ದಿಕ್ಕಿನಲ್ಲಿ ನಡೆದಾಡುವ ದಾರಿಯಲ್ಲಿ ಸ್ಪೀಕರ್‌ಗಳನ್ನು ಅಳವಡಿಸಬೇಕು. ಎಲ್ಲರೂ ಸಂಗೀತ ಕೇಳುವಂತಾಗಬೇಕು. ನಡುನಡುವೆ ಆಕಾಶವಾಣಿಯಿಂದ ಪ್ರಸಾರವಾಗುವ ಕನ್ನಡ ವಾರ್ತೆಗಳನ್ನು ಕೇಳುವಂತಾಗಬೇಕು. ಇದರಿಂದ ಕನ್ನಡಕ್ಕೆ ಹೆಚ್ಚು ಆದ್ಯತೆ ಕೊಟ್ಟಂತೆ ಆಗಲಿದೆ. ಕನ್ನಡೇತರರು ಕನ್ನಡ ಕಲಿಯಲು ಪ್ರೇರಣೆ ದೊರಕಿದಂತೆ ಆಗಲಿದೆ. ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಇದನ್ನು ಅನುಷ್ಠಾನ ಮಾಡಬೇಕು.

ಡಾ. ಎಸ್.ಟಿ. ರಾಮಚಂದ್ರ, ಪ್ರೇಸ್ಟೀಜ್ ಫಾಲ್ಕಾನ್ ಸಿಟಿ, ಕೋಣನಕುಂಟೆ ಕ್ರಾಸ್

‘ಮಕ್ಕಳಿಂದಲೂ ಸಚಿವರಿಗೆ ಹಿಡಿಶಾಪ’

ಲಾಲ್‌ಬಾಗ್ ಸಮಸ್ಯೆಯನ್ನು ಜನತೆಯ ಮುಂದಿರಿಸಿ ಸರ್ಕಾರದ ಕಿವಿಹಿಂಡುವ ಕೆಲಸ ಮಾಡಿರುವ ‘ಪ್ರಜಾವಾಣಿ’ ಬಳಗಕ್ಕೆ ಅಭಿನಂದನೆಗಳು. ಲಾಲ್‌ಬಾಗ್ ಹೊರತುಪಡಿಸಿದರೆ ದೊಡ್ಡ ಪಾರ್ಕ್‌ ಎಂದರೆ ಮತ್ತಕೆರೆಯ ಜೆ.ಪಿ. ಪಾರ್ಕ್. ಎರಡು ದಶಕಗಳಿಂದಲೂ ನಾಗರಿಕರಿಗೆ ಉಪಯುಕ್ತವಾಗಿತ್ತು. ಮೂರು–ನಾಲ್ಕು ವರ್ಷಗಳಿಂದ ಮಕ್ಕಳ ಪಾರ್ಕ್ ಬಂದ್ ಮಾಡಲಾಗಿದೆ. ಮಕ್ಕಳೆಲ್ಲರೂ ಶಾಸಕ ಮುನಿರತ್ನ ಅವರಿಗೆ ಶಾಪ ಹಾಕುತ್ತಿದ್ದಾರೆ. ಮೆಟ್ರೊ ರೈಲು ಮಾರ್ಗಕ್ಕೆ ಹಾಕುವ ರೀತಿಯ ಕಂಬಗಳನ್ನು ಉದ್ಯಾನದೊಳಗೆ ನಿರ್ಮಿಸಲಾಗುತ್ತಿದೆ. ವಾಯುವಿಹಾರ ಈಗ ದುಸ್ತರವಾಗಿದೆ. ಜೆ.ಪಿ. ಪಾರ್ಕ್ ಕಡೆಗೂ ಸರ್ಕಾರದ ಗಮನ ಸೆಳೆಯಬೇಕು.

ಪಾಂಡುರಂಗ ಕೊಣ್ಣೂರ, ಮತ್ತಿಕೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು