ಬೆಂಗಳೂರು: ‘ನಮ್ಮ ಮೆಟ್ರೊ’ ಪ್ರಯಾಣದರವನ್ನು ಏರಿಸಿದ ನಂತರದಲ್ಲಿ ಮೆಟ್ರೊದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ‘ಮೆಟ್ರೊ’ ದಿಂದ ವಿಮುಖರಾದ ಜನರು ಬಿಎಂಟಿಸಿ ಬಸ್‌ಗಳು, ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಸಂಚಾರ ದಟ್ಟಣೆ ಹೆಚ್ಚುವ ಜೊತೆಗೆ ಪರಿಸರ ಮಾಲಿನ್ಯಕ್ಕೂ ಕಾರಣವಾಗಿದೆ. ಪ್ರಯಾಣದರ ಇಳಿಸುವ ಮೂಲಕ ಜನರು ಮೆಟ್ರೊಗೆ ಮರಳುವಂತೆ ಮಾಡಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಾರ್ವಜನಿಕರಿಗೆ ಪ್ರಯಾಣಿಸಲು ಅನುಕೂಲವಾಗಿದ್ದ 'ನಮ್ಮ ಮೆಟ್ರೊ’ ಪ್ರಯಾಣ ದರ ಏರಿಕೆ ಮಾಡಿರುವುದು ಖಂಡನೀಯ. ಇತರೆ ರಾಜ್ಯಗಳಲ್ಲಿ ‘ಮೆಟ್ರೊ’ಗಳ ಪ್ರಯಾಣ ದರ ಕಡಿಮೆ ಇದೆ ಮತ್ತು ಜನರಿಗೆ ಹತ್ತಿರವಾಗಿವೆ. ಬಿಎಂಆರ್‌ಸಿಎಲ್ ಪ್ರಯಾಣ ದರ ಹೆಚ್ಚಿಸಿರುವುದರಿಂದ ‘ಮೆಟ್ರೊ’ ಸಾರ್ವಜನಿಕರಿಂದ ದೂರವಾಗುತ್ತಿದೆ. ಇದು ಶ್ರೀಮಂತರು ಓಡಾಡುವ ಮೆಟ್ರೊವಾಗುವ ಸಾಧ್ಯತೆಗಳಿವೆ. ಕೂಡಲೇ ಪ್ರಯಾಣ ದರ ಕಡಿಮೆ ಮಾಡಬೇಕು.ಕಾವ್ಯ ಸಹ್ಯಾದ್ರಿ, ರಾಜಾಜಿನಗರ
ಮೆಟ್ರೊ ಪ್ರಯಾಣ ದರ ಏರಿಕೆ ಮಾಡಿರುವುದು ಸಮಂಜಸವಲ್ಲ. ಸಾರ್ವಜನಿಕರ ಅಭಿಪ್ರಾಯಗಳನ್ನೂ ಪಡೆದು ದರ ನಿರ್ಧಾರ ಮಾಡಬೇಕಿತ್ತು. ಏಕಾಏಕಿ ಪ್ರಯಾಣ ದರ ಹೆಚ್ಚಿಸುವ ಮೂಲಕ ಬಿಎಂಆರ್‌ಸಿಎಲ್ ಸಾರ್ವಜನಿಕರಿಗೆ ದ್ರೋಹ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಚರ್ಚಿಸಿ ಪ್ರಯಾಣ ದರ ಇಳಿಕೆ ಮಾಡಬೇಕು.ಕುಮಾರ ಆರ್., ಜೆ ಪಿ ನಗರ
ಜನಪ್ರತಿನಿಧಿಗಳು ಮೆಟ್ರೊ ಪ್ರಯಾಣ ದರ ಏರಿಕೆಯ ಬಗ್ಗೆ ಮಾತನಾಡದಿರುವುದು ವಿಪರ್ಯಾಸ. ಸಾರ್ವಜನಿಕರು ದುಬಾರಿ ಪ್ರಯಾಣ ದರ ನೀಡಿ ಮೆಟ್ರೊದಲ್ಲಿ ಸಂಚರಿಸುತ್ತಿದ್ದಾರೆ. ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಸಾರ್ವಜನಿಕರ ಆಕ್ರೋಶದ ಬಗ್ಗೆ ತಲೆಕಡೆಸಿಕೊಳ್ಳುತ್ತಿಲ್ಲ. ಪ್ರಯಾಣ ದರ ಏರಿಕೆ ಸಮಿತಿಯ ಸದಸ್ಯರು ಜನಸಾಮಾನ್ಯರ ಬಗ್ಗೆ ಚಿಂತಿಸದೇ, ದರ ನಿಗದಿಪಡಿಸಿರುವುದು ಖಂಡನೀಯ.ವಿ. ನಾಗರಾಜು ಕಾವಲಪಾಳ್ಯ, ರಾಜಾಜಿನಗರ
‘ನಮ್ಮ ಮೆಟ್ರೊ’ –ಒಂದು ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಇದರಲ್ಲಿ ಲಾಭ ಮತ್ತು ನಷ್ಟದ ಬಗ್ಗೆ ಚಿಂತನೆ ಮಾಡುತ್ತಿರುವುದು ಎಷ್ಟು ಸರಿ? ಮೆಟ್ರೊ ಉದ್ಯಮವಲ್ಲ ಅದೊಂದು ಸಾರ್ವಜನಿಕ ಸೇವಾ ಸಾರಿಗೆ. ಬಿಎಂಆರ್‌ಸಿಎಲ್ ಮೆಟ್ರೊ ಪ್ರಯಾಣ ದರ ಏರಿಕೆ ಮಾಡುವ ಮೂಲಕ ಜನರನ್ನು ಸುಲಿಗೆ ಮಾಡುತ್ತಿದೆ. ಇದರಿಂದ ಪ್ರಯಾಣಿಕರ ಸಂಖ್ಯೆ ಕುಗ್ಗಿದರೂ, ಬಿಎಂಆರ್‌ಸಿಎಲ್ ಪರಿಷ್ಕೃತ ದರ ಏರಿಕೆ ಆದೇಶ ಹಿಂಪಡೆಯುತ್ತಿಲ್ಲ.ಎನ್. ಪ್ರಭಾ ಬೆಳವಂಗಲ, ಮೆಟ್ರೊ ಪ್ರಯಾಣಿಕಿ
ಮೆಟ್ರೊ ಪ್ರಯಾಣ ದರದ ಅವೈಜ್ಞಾನಿಕವಾಗಿ ಹೆಚ್ಚಿಸಿರುವುದು ಖಂಡನೀಯ. ಮೊದಲು ಪರಿಷ್ಕೃತ ಮೆಟ್ರೊ ಪ್ರಯಾಣ ದರ ಏರಿಕೆ ಆದೇಶವನ್ನು ಹಿಂಪಡೆಯಬೇಕು. ಖರ್ಚು– ಆದಾಯಕ್ಕಾಗಿ ಜಾಹಿರಾತು ಮತ್ತಿತರ ಮೂಲಗಳನ್ನು ಬಳಸಿಕೊಳ್ಳಬೇಕು. ಅದನ್ನು ಬಿಟ್ಟು ಪ್ರಯಾಣ ದರ ಹೆಚ್ಚಿಸಿ ಸಾರ್ವಜನಿಕರನ್ನು ಸುಲಿಗೆ ಮಾಡುವುದು ಸರಿಯಾದ ಕ್ರಮವಲ್ಲ. ರೈಲುಗಳ ಕೊರತೆಯಿಂದಾಗಿ ಕೆಲವೊಮ್ಮೆ ಹತ್ತು ನಿಮಿಷದವರೆಗೆ ಕಾಯುವ ಪರಿಸ್ಥಿತಿ ಇದೆ. ಇದರಿಂದ ಫ್ಲಾಟ್‌ಫಾರ್ಮ್‌ನಲ್ಲಿ ದಟ್ಟಣೆ ಹೆಚ್ಚಾಗುತ್ತದೆ. ಇದರ ಬದಲಿಗೆ ಮೂರ್ನಾಲ್ಕು ನಿಮಿಷಗಳಿಗೊಂದು ರೈಲು ಸಂಚರಿವಂತಾಗಬೇಕು.ವಿ. ರಮೇಶ್ ಬಾಬು, ಶ್ರೀನಿವಾಸಪುರ
ಮೆಟ್ರೊ ಪ್ರಯಾಣ ದರ ಏರಿಕೆ ಮಾಡುವ ಮೂಲಕ ‘ನಮ್ಮ ಮೆಟ್ರೊ’ ತನ್ನತನ ಕಳೆದುಕೊಂಡಿದೆ. ಸಮಯದ ಉಳಿತಾಯ ಹಾಗೂ ಸಂಚಾರ ದಟ್ಟಣೆಯಿಂದ ಪಾರಾಗಲು ಮೆಟ್ರೊ ಅನುಕೂಲವಾಗಿತ್ತು. ಆದರೆ ಮೆಟ್ರೊ ರೈಲು ಈಗ ಹಳಿ ತಪ್ಪಿದಂತೆ ಭಾಸವಾಗುತ್ತಿದೆ. ಸಂಬಂಧಪಟ್ಟವರು ಮೆಟ್ರೊ ಪ್ರಯಾಣ ದರ ಇಳಿಕೆ ಮಾಡುವ ನಿರ್ಧಾರ ಕೈಗೊಳ್ಳಬೇಕು.ರಾಜೇಶ್ವರಿ ರಾವ್, ವಿಜಯನಗರ
ಸಂಚಾರ ದಟ್ಟಣೆ ಕಡಿಮೆ ಮಾಡಿ, ಸಮಯ ಉಳಿತಾಯ ಮಾಡುತ್ತಿದ್ದ ‘ನಮ್ಮ ಮೆಟ್ರೊ’ ಈಗ ಪ್ರಯಾಣ ದರ ಏರಿಸುವ ಮೂಲಕ ಪ್ರಯಾಣಿಕರಿಂದ ದೂರವಾಗುವಂತೆ ಮಾಡಲಾಗಿದೆ. ಸಾರ್ವಜನಿಕರು ‘ಮೆಟ್ರೊ’ ಬಿಟ್ಟು, ಸ್ವಂತ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ, ವಾಯು ಮಾಲಿನ್ಯವೂ ಅಧಿಕವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಮೆಟ್ರೊ ಪ್ರಯಾಣ ದರ ಏರಿಕೆ ಆದೇಶ ಹಿಂಪಡೆಯಬೇಕು.ಜೆ.ಎಸ್. ವಿಶ್ವನಾಥ್ ಎಸ್.ಆರ್. ನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.