ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಮ್ಮ ಹೆಮ್ಮೆ: ಐತಿಹಾಸಿಕ ವೈಭವದ ಪ್ರತಿಬಿಂಬ ಜಿಪಿಒ ಕಟ್ಟಡ ‌

ನಗರದ ಅಂಚೆ ಸೇವೆಗೆ 200 ವರ್ಷಗಳಿಗೂ ಅಧಿಕ ಇತಿಹಾಸ
Last Updated 26 ಫೆಬ್ರುವರಿ 2022, 21:44 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಅಂಚೆ ಸೇವೆಗೆ 200 ವರ್ಷಗಳಿಗೂ ಅಧಿಕ ಇತಿಹಾಸವಿದೆ. ಈ ಐತಿಹಾಸಿಕ ವೈಭವವನ್ನು ಪ್ರತಿಬಿಂಬಿಸುವಂತಿದೆ ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ (ಜಿಪಿಒ) ಕಟ್ಟಡ. 1980ರ ದಶಕದಲ್ಲಿ ಶಿಲೆಯಿಂದ ನಿರ್ಮಿಸಿರುವ ಈ ಭವ್ಯ
ವಾದ ಕಟ್ಟಡ ನಗರದ ಪಾರಂಪರಿಕ ಕಟ್ಟಡಗಳ ಸಾಲಿಗೆ ಇತ್ತೀಚಿನ ಸೇರ್ಪಡೆ.

‘ಮದ್ರಾಸ್‌ನಲ್ಲಿ 1776ರಲ್ಲೇ ಅಂಚೆ ಕಚೇರಿ ಅಸ್ತಿತ್ವಕ್ಕೆ ಬಂದಿತ್ತು. 1799ರಲ್ಲಿ ಟಿಪ್ಪು ಮರಣದ ನಂತರ ಬೆಂಗಳೂರು ನಗರ ಬ್ರಿಟಿಷರ ವಶವಾಯಿತು. ನಗರದ ಮೊದಲ ಇಂಪೀರಿಯಲ್‌ ಅಂಚೆ ಕಚೇರಿಯನ್ನು 1800ರ ವೇಳೆಗೆ ಸ್ಥಾಪಿಸಲಾಗಿತ್ತು. ಬ್ರಿಟಿಷರ ಸೇನೆ ಮತ್ತು ಕಂಟೋನ್ಮೆಂಟ್‌ ನಡುವಿನ ಪತ್ರ ವ್ಯವಹಾರಕ್ಕೆ ಇದು ಬಳಕೆಯಾಗುತ್ತಿತ್ತು. 1862ರಲ್ಲಿ ಅಂಚೆ ಕಚೇರಿ ಈಗಿನ ಜಿಪಿಒ ಜಾಗದಲ್ಲಿ ಮೊದಲಿದ್ದ ಕೆಂಬಣ್ಣದ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಐರೋಪ್ಯ ಶಾಸ್ತ್ರೀಯ ಶೈಲಿಯಲ್ಲಿದ್ದ ಆ ಕಟ್ಟಡಕ್ಕೂ 1868ರಲ್ಲಿ ನಿರ್ಮಾಣವಾಗಿದ್ದ ಅಠಾರ ಕಚೇರಿಗೂ (ಈಗಿನ ಹೈಕೋರ್ಟ್‌ ಕಚೇರಿ) ವಿನ್ಯಾಸದಲ್ಲಿ ಸಾಮ್ಯತೆಗಳಿದ್ದವು. ಜಿಪಿಒ ಕಚೇರಿಯ ಹಳೆ ಕಟ್ಟಡವನ್ನು 1979ರಲ್ಲಿ ನೆಲಸಮ ಮಾಡಿ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ’ ಎನ್ನುತ್ತಾರೆ ಇದೇ ಕಚೇರಿಯಲ್ಲಿ ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿರುವ, ಅಂಚೆ ಇಲಾಖೆಯ ನಿವೃತ್ತ ಅಧಿಕಾರಿ ಚಾರ್ಲ್ಸ್‌ ಲೋಬೊ.

‘ಈ ಐದು ಅಂತಸ್ತುಗಳ ಕಟ್ಟಡ 1.20 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಈ ಕಟ್ಟಡವನ್ನು ₹ 3.5 ಕೋಟಿ ವೆಚ್ಚದಲ್ಲಿ ನಿರ್ಮಿಸ
ಲಾಗಿದೆ ಎಂದು ಒಂದು ಮೂಲವು ತಿಳಿಸುತ್ತದೆ. ಇನ್ನೊಂದು ಮೂಲದ ಪ್ರಕಾರ ಇದಕ್ಕೆ ವೆಚ್ಚವಾಗಿದ್ದು ₹ 1.5 ಕೋಟಿ. ಇದರ ಪ್ರವೇಶ ದ್ವಾರದ ವಿನ್ಯಾಸ ಆಕರ್ಷಕವಾಗಿದ್ದು, ಇದು ಚಾಲುಕ್ಯರ ರಾಜಧಾನಿಯ ವಾಸ್ತುಶಿಲ್ಪ ಶೈಲಿಯನ್ನು ಹೋಲುತ್ತದೆ. ಇಲ್ಲಿರುವ 30 ಅಡಿ ಎತ್ತರದ ಬೃಹದಾಕಾರದ ಕಲ್ಲಿನ ಕಂಬಗಳು ಇಂಡೊ– ಸಾರ್ಸೆನಿಕ್‌ ಶೈಲಿಯಲ್ಲಿ ನಿರ್ಮಿಸಿರುವ ವಿಧಾನಸೌಧದ ಕಲ್ಲಿನ ಕಂಬಗಳನ್ನು ಹೋಲುತ್ತವೆ. ಜಿಪಿಒ ಕಟ್ಟಡವು ಮೂರು ಗುಮ್ಮಟಗಳನ್ನು ಹೊಂದಿದೆ. ಮಧ್ಯದ ಗುಮ್ಮಟವು 50 ಅಡಿ ಎತ್ತರವಿದೆ. ಇದರಡಿ ಮೇಘದೂತ ಸಭಾಂಗಣವನ್ನು ನಿರ್ಮಿಸಲಾಗಿದೆ. ಈ ಗುಮ್ಮಟದ ವ್ಯಾಸ 50 ಅಡಿಗಳಷ್ಟಿದೆ’ ಎಂದು ಅವರು ವಿವರಿಸಿದರು.

‘ವಿಧಾನಸೌಧ ಇರುವ ಅಂಬೇಡ್ಕರ್‌ ಬೀದಿಯಲ್ಲೇ ಈ ಕಟ್ಟಡ ಇರುವುದರಿಂದ ಇದರ ವಿನ್ಯಾಸವು ವಿಧಾನಸೌಧದ ವಿನ್ಯಾಸಕ್ಕೆ ಪೂರಕವಾಗಿರುವಂತೆ ನೋಡಿಕೊಳ್ಳಲಾಗಿತ್ತು. ಜಿಪಿಒ ಎದುರಿನ ರಸ್ತೆಗೆ ಅಂಬೇಡ್ಕರ್‌ ಬೀದಿ ಎಂದು ನಾಮಕರಣ ಮಾಡುವವರೆಗೂ ಅದನ್ನು ಪೋಸ್ಟ್‌ ಆಫೀಸ್‌ ರಸ್ತೆ ಎಂದೇ ಕರೆಯಲಾಗುತ್ತಿತ್ತು’ ಎಂದು ಅವರು ತಿಳಿಸಿದರು.

‘ಈಗಿನ ಜಿಪಿಒ ಕಟ್ಟಡವು ಈ ಹಿಂದೆ ಪೋಸ್ಟ್‌ ಮಾಸ್ಟರ್‌ ಜನರಲ್‌ ಆಗಿದ್ದ ಕೆ.ಕೆ.ಮೂರ್ತಿ ಅವರ ಕನಸಿನ ಕೂಸು. ಈ ಕಟ್ಟಡವನ್ನು 1985ರ ನ.15ರಂದು ಆಗಿನ ಪ್ರಧಾನಿ ರಾಜೀವ ಗಾಂಧಿ ಅವರು ಉದ್ಘಾಟಿಸಿದ್ದರು. ಆಗಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ಸಂಪರ್ಕ ಖಾತೆ ರಾಜ್ಯ ಸಚಿವರಾಗಿದ್ದ ರಾಮನಿವಾಸ್ ಮಿರ್ಧಾ ಅವರೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು’ ಎನ್ನುತ್ತಾರೆ ಮುಖ್ಯ ಅಂಚೆ ‍ಪಾಲಕರಾಗಿರುವ ಕೆ.ರಾಧಾಕೃಷ್ಣ.

‘ದೇಶದ ಬೇರೆ ಬೇರೆ ರಾಜ್ಯಗಳಲ್ಲಿರುವ ಜಿಪಿಒ ಕಟ್ಟಡಗಳಲ್ಲೇ ಬೆಂಗಳೂರಿನ ಜಿಪಿಒ ಕಟ್ಟಡ ಅತ್ಯಂತ ದೊಡ್ಡದು. ಇದರ ವಿನ್ಯಾಸವೂ ಅತ್ಯಂತ ಆಕರ್ಷಕವಾಗಿದೆ. ಸಂಪೂರ್ಣ ಕಲ್ಲಿನಿಂದ ನಿರ್ಮಿತವಾಗಿರುವ ಈ ಕಟ್ಟಡ ಕಬ್ಬನ್ ಉದ್ಯಾನದ ಪಕ್ಕದಲ್ಲೇ ಇರುವುದರಿಂದ ಬೇಸಿಗೆಯಲ್ಲೂ ತಂಪಗಿನ ವಾತಾವರಣವನ್ನು ಹೊಂದಿದೆ. ಇಲ್ಲಿ ಹವಾನಿಯಂತ್ರಣ ವ್ಯವಸ್ಥೆಯ ಅಗತ್ಯವೇ ಬೀಳುವುದಿಲ್ಲ. ಅಂಚೆ ಇಲಾಖೆಯ ಏಳಕ್ಕೂ ಅಧಿಕ ವಿಭಾಗಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. 2000ಕ್ಕೂ ಅಧಿಕ ಸಿಬ್ಬಂದಿ ಈ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಾರೆ’ ಎಂದು ಅವರು ತಿಳಿಸಿದರು.

‘ಪ್ರವೇಶ ದ್ವಾರದ ಬಳಿ ಇರುವ ಗುಲಾಬಿ ತೋಟ, ಕಟ್ಟಡದ ಎದುರಿನಲ್ಲಿ ಮುಗಿಲೆತ್ತರಕ್ಕೆ ಬೆಳೆದಿರುವ ತಾಳೆ ಮರಗಳು ಈ ಭವ್ಯ ಕಟ್ಟಡದ ಮೆರುಗನ್ನು ಹೆಚ್ಚುವಂತೆ ಮಾಡಿದೆ. ಪ್ರಾಂಗಣದಲ್ಲಿರುವ ಹಚ್ಚಹಸುರಿನ ವಾತಾವರಣ, ಸುತ್ತ ಹಳದಿ ಬಣ್ಣದ ಹೂಗೊಂಚಲುಗಳಿಂದ ಕಂಗೊಳಿಸುವ ಮರಗಳು,ಇಲ್ಲಿನ ಹಸಿರುವ ವಾತಾವರಣ ಆಹ್ಲಾದಕರವಾಗಿದೆ.

‘ಅತ್ಯಂತ ಹೆಚ್ಚು ಅಂಚೆ ಬಟವಾಡೆ’

‘ರಾಜ್ಯದಲ್ಲೇ ಅತ್ಯಂತ ಹೆಚ್ಚು ಅಂಚೆ ಬಟವಾಡೆ ಮಾಡುವ ಅಂಚೆ ಕಚೇರಿ ಇದು. ನಿತ್ಯವೂ 600ಕ್ಕೂ ಅಧಿಕ ಪಾರ್ಸೆಲ್‌ಗಳು, 5 ಸಾವಿರಕ್ಕೂ ಅಧಿಕ ಸ್ಪೀಡ್‌ಪೋಸ್ಟ್‌ಗಳು ಹಾಗೂ 30 ಸಾವಿರಕ್ಕೂ ಅಧಿಕ ಸಾಮಾನ್ಯ ಅಂಚೆ ಪತ್ರಗಳನ್ನು ಈ ಕಚೇರಿ ಮೂಲಕ ಬಟವಾಡೆ ಮಾಡಲಾಗುತ್ತದೆ. ಇತ್ತೀಚೆಗೆ ಅಂಚೆಯ ಬಡವಾಡೆ ಸೇವೆಗೆ ಬೇಡಿಕೆ ಕ್ಷೀಣಿಸುತ್ತಿದೆ. ದಶಕಗಳ ಹಿಂದೆ ಈ ಕಚೇರಿ ಮೂಲಕ ನಿತ್ಯ 50 ಸಾವಿರಕ್ಕೂ ಅಧಿಕ ಬಟವಾಡೆಗಳನ್ನು ನಿರ್ವಹಿಸಿದ ಉದಾಹರಣೆಗಳೂ ಇವೆ’ ಎಂದು ಕೆ.ರಾಧಾಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT