ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳಲ್ಲಿ 105 ಪ್ರಕರಣ ಪತ್ತೆ

₹ 4.50 ಕೋಟಿ ಮೌಲ್ಯದ ವಸ್ತು ವಶ: ಪೊಲೀಸ್‌ ಕಮಿಷನರ್‌ ಮಾಹಿತಿ
Last Updated 31 ಅಕ್ಟೋಬರ್ 2019, 4:18 IST
ಅಕ್ಷರ ಗಾತ್ರ

ಬೆಂಗಳೂರು: ‘ಮೂರು ತಿಂಗಳುಗಳಲ್ಲಿ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ 105 ಪ್ರಕರಣ ಪತ್ತೆ ಹಚ್ಚಿರುವ ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು, ₹ 4.50 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಪೊಲೀಸ್‌ ಕಮಿಷನರ್‌ ಭಾಸ್ಕರ್ ರಾವ್ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಒಂದು ತಿಂಗಳಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಹಳೆ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ₹ 35 ಲಕ್ಷ ಮೌಲ್ಯದ 1 ಕೆ.ಜಿ 250 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ’ ಎಂದೂ ಅವರು ಹೇಳಿದರು.

‘ಮನೆಗಳಲ್ಲಿ ಕಳ್ಳತನ ಮಾಡಿರುವ 14 ಪ್ರಕರಣಗಳೂ ಸೇರಿ ಒಟ್ಟು 16 ಪ್ರಕರಣಗಳು ಪತ್ತೆಯಾಗಿವೆ. ವಿಶೇಷ ವಿಚಾರಣೆ (ಎಸ್‍.ಐ) ದಳವು ಆಗಸ್ಟ್ ತಿಂಗಳಿನಿಂದ ಈವರೆಗೆ ಜೂಜಾಟದ 23 ಅಡ್ಡೆಗಳ ಮೇಲೆ ದಾಳಿ ನಡೆಸಿ ₹ 78 ಲಕ್ಷ ಜಪ್ತಿ ಮಾಡಿದೆ. ನಗರದ ಐದು ಸ್ಥಳಗಳಲ್ಲಿ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ರೀಫಿಲ್ಲಿಂಗ್ ಮಾಡುತ್ತಿದ್ದ ಸ್ಥಳಗಳಿಗೆ ದಾಳಿ ನಡೆಸಿ 900 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದರು.

ಮಾನವ ಕಳ್ಳ ಸಾಗಣೆ: ನೇಪಾಳದ ಪ್ರಜೆಗಳನ್ನು ಭಾರತೀಯ ಪ್ರಜೆಗಳೆಂದು ನಕಲಿ ದಾಖಲಾತಿ ಸೃಷ್ಟಿಸಿಕೊಂಡು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಲೇಷ್ಯಾ, ಕ್ವಾಲಾಲಂಪುರಕ್ಕೆ ಮಾನವ ಕಳ್ಳ ಸಾಗಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿ 9 ಮಂದಿಯನ್ನು ಬಂಧಿಸಲಾಗಿದೆ. ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 60 ಮಂದಿ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿದ್ದು, ಅವರನ್ನು ಸ್ವದೇಶಕ್ಕೆ ಕಳಿಸುವ ಕಾರ್ಯ ಪ್ರಗತಿಯಲ್ಲಿದೆ. ನಗರದಲ್ಲಿ ನಿಯಮ ಉಲ್ಲಂಘಿಸಿ ನಡೆಸುತ್ತಿದ್ದ ಡ್ಯಾನ್ಸ್ ಬಾರ್, ಡಿಸ್ಕೋಥೆಕ್, ವೇಶ್ಯಾವಾಟಿಕೆ ಅಡ್ಡೆಗಳ ಮೇಲೆಯೂ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 65 ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಕಮಿಷನರ್‌ ವಿವರಿಸಿದರು.

‘ಹಿರಿಯ ನಾಗರಿಕರಿಗೆ ರಕ್ಷಣೆ’

‘ಹಿರಿಯ ನಾಗರಿಕರು ನೆಲೆಸಿರುವ ಕಡೆಗಳಲ್ಲಿ ಹೆಚ್ಚಿನ ಸುರಕ್ಷತೆ ಒದಗಿಸಲಾಗುವುದು’ ಎಂದು ಭಾಸ್ಕರ್ ರಾವ್ ತಿಳಿಸಿದರು.

‘ಹಿರಿಯ ನಾಗರಿಕರನ್ನೇ ಗುರಿ ಮಾಡಿ ದೋಚುವುದು, ಹತ್ಯೆ ಮಾಡುವಂಥ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಹೀಗಾಗಿ ಜಾಗರೂಕತೆಯಿಂದ ಇರಬೇಕು. ಆಯಾ ಠಾಣೆಗಳಲ್ಲಿ ತಮ್ಮ ಬಗ್ಗೆ ಮಾಹಿತಿ ನೀಡಬೇಕು. ಇದರಿಂದ ನಮ್ಮ ಪೊಲೀಸರು ಸೂಕ್ತ ರಕ್ಷಣೆ ಕೊಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT