ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಹೊಂಡಮಯ ರಸ್ತೆಯಲ್ಲಿ ವಾಹನಗಳ ಈಜಾಟ

ಬಂಜಾರ ಲೇಔಟ್‌ ಮುಖ್ಯ ರಸ್ತೆಯಲ್ಲಿ ಸಂಚಾರ ಅಯೋಮಯ
Last Updated 25 ನವೆಂಬರ್ 2021, 20:30 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆಯಂತಾದ ರಸ್ತೆ, ಹೊಂಡಗಳ ನಡುವೆ ವಾಹನಗಳ ಈಜಾಟ, ದಿನವೂ ಬಿದ್ದು– ಎದ್ದು ಹೋಗುವ ಬೈಕ್ ಸವಾರರು...

ಇದು ಹೊರಮಾವು ವಾರ್ಡ್‌ನ ಬಂಜಾರ ಲೇಔಟ್‌ ಮುಖ್ಯರಸ್ತೆಯ ಸ್ಥಿತಿ ಇದು. ವಾಹನಗಳ ಸಂಚಾರಕ್ಕಷ್ಟೇ ಅಲ್ಲ, ಪಾದಚಾರಿಗಳ ಸಂಚಾರಕ್ಕೂ ಸಾಧ್ಯವಾಗದಷ್ಟು ಹದಗೆಟ್ಟಿರುವ ರಸ್ತೆ ಇದು.

ಕಲ್ಕೆರೆ–ಅಗರ ಮುಖ್ಯರಸ್ತೆಯಿಂದ ಹೊರಮಾವು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ. ಒಂದೂವರೆ ಕಿ. ಮೀ. ಉದ್ದದ ಇಡೀ ರಸ್ತೆಯೇ ಹೊಂಡವಾಗಿ ಮಾರ್ಪಟ್ಟಿದೆ. ಅಲ್ಲಲ್ಲಿ ದೊಡ್ಡ ಗುಂಡಿಗಳಿದ್ದರೆ, ಮ್ಯಾನ್‌ಹೋಲ್‌ಗಳು ಎದ್ದು ನಿಂತಿವೆ. ಇವುಗಳನ್ನು ತಪ್ಪಿಸಿ ವಾಹನ ಚಾಲನೆ ಮಾಡಲು ಸಾಧ್ಯವಾಗದೆ ಜನ ಪರದಾಡುತ್ತಿದ್ದಾರೆ.

‘ಹೊಂಡಗಳ ನಡುವೆ ಮೊಳಕಾಲುದ್ದಕ್ಕೆ ನೀರು ಇಡೀ ರಸ್ತೆಯಲ್ಲಿ ಅಲ್ಲಲ್ಲಿ ನಿಂತಿದೆ. ಇದರ ನಡುವೆ ವಾಹನ ಚಾಲನೆ ಮಾಡುವಾಗ ಕೆಸರು ಮತ್ತು ನೀರಿನೊಳಗೆ ದ್ವಿಚಕ್ರ ವಾಹನಗಳ ಸವಾರರು ಪ್ರತಿನಿತ್ಯ ಬೀಳುತ್ತಿದ್ದಾರೆ. ಬೆಳಿಗ್ಗೆ ಕಚೇರಿ ತಲುಪುವ ಕಾತುರದಲ್ಲಿ ಸ್ವಲ್ಪ ವೇಗವಾಗಿ ಚಾಲನೆ ಮಾಡಿದರೂ ಬೀಳುವ ಅಪಾಯ ಇದೆ. ಕೆಲಸಕ್ಕೆಂದು ಹೊರಟವರು ರಸ್ತೆಯಲ್ಲಿನ ಕೆಸರಿನಲ್ಲಿ ಬಿದ್ದು ವಾಪಸ್‌ ಹೋಗುವುದು ನಿತ್ಯ ಸಾಮಾನ್ಯವಾಗಿದೆ’ ಎನ್ನುತ್ತಾರೆ ಸ್ಥಳೀಯರು.

ಇದೇ ರಸ್ತೆಯಲ್ಲೇ ಹಾದು ಹೋಗುವ ಶಾಲಾ ಮಕ್ಕಳೂ ಬೈಸಿಕಲ್‌ನಲ್ಲಿ ಬಂದು ಗುಂಡಿಗಳಲ್ಲಿ ಬೀಳುತ್ತಿದ್ದಾರೆ. ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರುವುದು ನಿತ್ಯದ ಗೋಳಾಗಿದೆ ಎಂದು ಹೇಳಿದರು.

‘ನೀರಿನೊಳಗಿನ ಗುಂಡಿ ಮತ್ತು ಮ್ಯಾನ್‌ಹೋಲ್‌ಗಳಿಗೆ ಕಾರುಗಳು ಸಿಲುಕಿಕೊಳ್ಳುವುದು ನಿತ್ಯ ತಪ್ಪಿಲ್ಲ. ಎರಡು ವರ್ಷಗಳಿಂದಲೂ ರಸ್ತೆ ಹಾಳಾಗಿ ವಾಹನ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ದುರಸ್ತಿ ಮಾಡುವುದಾಗಿ ಹೇಳಿ ಎಲ್ಲವನ್ನೂ ಕಿತ್ತು ಬಿಸಾಡಲಾಗಿದೆ. ಬಳಿಕ ಮಳೆ ಶುರುವಾಗಿದ್ದು, ಕನಿಷ್ಠ ಸಂಚಾರ ಯೋಗ್ಯಗೊಳಿಸುವ ಗೋಜಿಗೂ ಬಿಬಿಎಂಪಿ ಅಧಿಕಾರಿಗಳು ಹೋಗಿಲ್ಲ’ ಎಂದು ದೂರಿದರು.

‘ಮೊದಲೇ ಪೆಟ್ರೋಲ್, ಡೀಸೆಲ್ ಮತ್ತು ಆಟೋಗ್ಯಾಸ್ ದರ ಹೆಚ್ಚಳವಾಗಿದೆ. ಈ ರಸ್ತೆಯಲ್ಲಿ ಮೊದಲ ಗೇರ್‌ನಲ್ಲೇ ಒಂದು ಕಿಲೋ ಮೀಟರ್‌ ತನಕ ಓಡಿಸಬೇಕು. ಗುಂಡಿಗೆ ಇಳಿದು ವಾಹನಗಳೂ ಹಾಳಾಗುತ್ತಿವೆ. ನಮ್ಮ ಕಷ್ಟ ಹೇಳ ತೀರದಾಗಿದೆ’ ಎಂದು ಆಟೋರಿಕ್ಷಾ ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು.

‘ಅನಾರೋಗ್ಯಕ್ಕೆ ತುತ್ತಾದವರನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೂ ಸಾಧ್ಯವಾಗುವುದಿಲ್ಲ. ಹೆರಿಗೆ ನೋವು ಕಾಣಿಸಿಕೊಂಡು ಮಹಿಳೆಯನ್ನು ಆಟೋರಿಕ್ಷಾದಲ್ಲಿ ಕೂರಿಸಿಕೊಂಡು ಈ ರಸ್ತೆಯಲ್ಲಿ ಹೋದರೆ ರಸ್ತೆ ಮಧ್ಯದಲ್ಲೇ ಹೆರಿಗೆಯಾಗುವ ಅಪಾಯ ಇದೆ’ ಎಂದರು.

ಕಲ್ಕೆರೆ– ಅಗರ ರಸ್ತೆಯೂ ಗುಂಡಿಮಯ

ಹೊರಮಾವು ಮುಖ್ಯರಸ್ತೆಯಿಂದ ಅಗರ ಮಾರ್ಗದಲ್ಲಿ ಹೆಣ್ಣೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಗುಂಡಿಗಳ ಮಯವಾಗಿದೆ.

ಹೊರಮಾವು ಮುಖ್ಯ ರಸ್ತೆಯಿಂದ ಹೊರಟರೆ ನಾಲ್ಕು ಪಥದ ರಸ್ತೆಯೊಂದು ಎದುರಾಗುತ್ತದೆ. ಅದು 200 ಮೀಟರ್‌ಗೆ ಮುಕ್ತಾಯವಾಗುತ್ತದೆ. ಅಲ್ಲಿಂದ ಮುಂದಕ್ಕೆ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರ ದುಸ್ತರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT