ಶನಿವಾರ, ಸೆಪ್ಟೆಂಬರ್ 26, 2020
22 °C

ಬೆಂಗಳೂರು ಗಲಭೆ | ತಾರಸಿ ಮೇಲಿಂದ ತಪ್ಪಿಸಿಕೊಂಡ ಶ್ರೀನಿವಾಸಮೂರ್ತಿ ಸಹೋದರಿ ಕುಟುಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Congress MLA's sister Jayanthi house

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಹೋದರಿ ಜಯಂತಿ ಮನೆ ಮೇಲೆಯೂ ಮಂಗಳವಾರ ರಾತ್ರಿ ಉದ್ರಿಕ್ತರ ಗುಂಪು ಏಕಾಏಕಿ ದಾಳಿ ನಡೆಸಿತ್ತು. ಆ ಸಂದರ್ಭ ಜಯಂತಿ ಹಾಗೂ ಕುಟುಂಬದವರು ಮನೆಯ ತಾರಸಿ ಮೇಲಿನಿಂದ ಪಕ್ಕದ ಕಟ್ಟಡಕ್ಕೆ ಹಾರಿ ಓಡಿ ತಪ್ಪಿಸಿಕೊಂಡಿದ್ದರು ಎಂಬುದು ತಿಳಿದುಬಂದಿದೆ.

ಉದ್ರಿಕ್ತರ ಗುಂಪೊಂದು ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸುತ್ತಿರುವಾಗ, ಅದರಲ್ಲಿದ್ದ ಕೆಲವರು ಜಯಂತಿ ಅವರ ಮನೆಯನ್ನು ಗುರಿಯಾಗಿಸಿ ದಾಳಿ ಆರಂಭಿಸಿದ್ದರು.

ಜಯಂತಿ ಅವರ ನಾದಿನಿ ಕಲಾವತಿ ಘಟನೆಯನ್ನು ನೆನಪಿಸಿಕೊಂಡಿದ್ದು, ‘ರಾತ್ರಿ ಸುಮಾರು 8.30ರ ಸುಮಾರಿಗೆ ಮನೆ ಎದುರು ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಲು ಆರಂಭಿಸಿದರು. ಅದಾಗಿ ಕೆಲವೇ ನಿಮಿಷಗಳಲ್ಲಿ ರಸ್ತೆ ಬದಿಯಲ್ಲಿದ್ದ ಕಾರುಗಳು ಮತ್ತು ಬೈಕ್‌ಗಳಿಗೆ ಹಾನಿ ಎಸಗಿ ನಮ್ಮ ಮನೆಯನ್ನು ಸುತ್ತುವರಿದರು. ನಾವೆಲ್ಲ ಒಳಗಿನ ಮೆಟ್ಟಿಲುಗಳ ಮೂಲಕ ಮೊದಲ ಮಹಡಿ ಏರಿದೆವು. ಅಲ್ಲಿಂದ ತಾರಸಿಗೆ ತೆರಳಿ ಪಕ್ಕದ ಕಟ್ಟಡಕ್ಕೆ ಹಾರಿ ತಪ್ಪಿಸಿಕೊಂಡೆವು. ಉದ್ರಿಕ್ತರ ಗುಂಪು ಎಲ್ಲವನ್ನೂ ನಾಶ ಮಾಡಿತು. ಕಪಾಟುಗಳಲ್ಲಿದ್ದ ಬಟ್ಟೆಗಳನ್ನೂ ಹೊರ ತೆಗೆದು ಬೆಂಕಿಹಚ್ಚಿದರು. ಹಾಸಿಗೆಗಳು, ವಿದ್ಯುತ್ ಉಪಕರಣಗಳು ಯಾವುದನ್ನೂ ಬಿಡಲಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: 

‘ಘಟನೆ ವೇಳೆ ಇಬ್ಬರು ಮಕ್ಕಳು ಸೇರಿದಂತೆ ನಾವು 7 ಮಂದಿ ಮನೆಯಲ್ಲಿದ್ದೆವು. ಸಮಯಕ್ಕೆ ಸರಿಯಾಗಿ ತಪ್ಪಿಸಿಕೊಳ್ಳುವುದು ಸಾಧ್ಯವಾಗದೇ ಹೋಗಿದ್ದಿದ್ದರೆ ಅವರು ನಮ್ಮನ್ನು ಬೆಂಕಿಹಚ್ಚಿ ಕೊಲ್ಲುತ್ತಿದ್ದರು’ ಎಂದು ಅವರು ಹೇಳಿದ್ದಾರೆ.

ಶಾಸಕರ ಸಹೋದರಿ ಮನೆಗೆ ಬೆಂಕಿ ಹಚ್ಚಿದ ಗುಂಪು ನಂತರ ಕಾವಲ್‌ ಭೈರಸಂದ್ರ ಮುಖ್ಯ ರಸ್ತೆಯಲ್ಲಿರುವ ‘ಬಾರ್ ಆ್ಯಂಡ್ ವೈನ್‌ಶಾಪ್‌’ಗೂ ಬೆಂಕಿ ಹಚ್ಚಿತ್ತು. ‘20 ವರ್ಷಗಳಿಂದ ಉದ್ಯಮ ನಡೆಸುತ್ತಿದ್ದು, ಈ ರೀತಿಯ ಹಿಂಸಾತ್ಮಕ ಗುಂಪನ್ನು ಈವರೆಗೆ ನೋಡಿರಲಿಲ್ಲ’ ಎಂದು ಬಾರ್ ಮಾಲೀಕ ಕೃಷ್ಣಪ್ಪ ಹೇಳಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿರುವ ಅವರು, ‘ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ 40 ಜನರ ಗುಂಪು ಬಾರ್ ಸಮೀಪ ಹಾದುಹೋಯಿತು. ಅದೇ ವೇಳೆ ಜಯಂತಿ ಅವರ ಮನೆಯಿಂದ ಕಿರುಚಾಟ ಕೇಳಿಸಿತು. ತಕ್ಷಣವೇ ಗ್ರಾಹಕರನ್ನು ತೆರಳುವಂತೆ ಸೂಚಿಸಿ, ಬಾರ್ ಬಂದ್ ಮಾಡಿ, ಬೀಗ ಜಡಿದೆ. ಅದಾಗಿ ಸುಮಾರು 1 ಗಂಟೆ ಆಗಿರಬಹುದು. ಬಾರ್ ಬಳಿಗೆ ಬಂದ ಉದ್ರಿಕ್ತರು ಶಟರ್‌ ಎಳೆದು ಬಾಗಿಲು ತೆರೆಯಲು ಯತ್ನಿಸಿದರು. ಸಾಧ್ಯವಾಗದಿದ್ದಾಗ ಕಿಟಕಿಯ ಗ್ರಿಲ್‌ಗಳನ್ನು ಮುರಿದು ಬೆಂಕಿ ಹಚ್ಚಿದರು’ ಎಂದು ಹೇಳಿದ್ದಾರೆ.

ಇನ್ನಷ್ಟು...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು