ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Tech Summit | ವೈದ್ಯಕೀಯದಲ್ಲೂ ಮಹಿಳಾ ಪ್ರಾತಿನಿಧ್ಯದ ಕೊರತೆ

‘ಆರೋಗ್ಯ ಕ್ಷೇತ್ರದಲ್ಲಿ ಮಹಿಳಾ ನಾಯಕತ್ವ’ ಗೋಷ್ಠಿಯಲ್ಲಿ ಕಚಿನಾ ಚಾವ್ಲಾ
Published 30 ನವೆಂಬರ್ 2023, 19:02 IST
Last Updated 30 ನವೆಂಬರ್ 2023, 19:02 IST
ಅಕ್ಷರ ಗಾತ್ರ

ಬೆಂಗಳೂರು: ಅಭಿವೃದ್ಧಿ ಹೊಂದಿದ ರಾಷ್ಟ್ರದ ಕನಸು ಸಾಕಾರಗೊಳ್ಳಲು ವೈದ್ಯಕೀಯ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಹೆಚ್ಚಿನ ಅವಕಾಶ ದೊರಕಬೇಕು ಎಂದು ಯುಎಸ್‌ಎಐಡಿ ಸಂಸ್ಥೆಯ ಭಾರತ ಆರೋಗ್ಯ ವ್ಯವಸ್ಥೆ ಬಲವರ್ಧನೆ ವಿಭಾಗದ ಮುಖ್ಯಸ್ಥೆ ಕಚಿನಾ ಚಾವ್ಲಾ ಹೇಳಿದರು.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಆಯೋಜಿಸಿದ್ದ ‘ಆರೋಗ್ಯ ಕ್ಷೇತ್ರದಲ್ಲಿ ಮಹಿಳಾ ನಾಯಕತ್ವ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಭಾರತದಲ್ಲಿ ಮಹಿಳೆಯರ ಅನುಪಾತಕ್ಕೆ ಅನುಗುಣವಾಗಿ ಯಾವ ಕ್ಷೇತ್ರಗಳಲ್ಲೂ ಸಮಾನ ಅವಕಾಶಗಳು ದೊರೆಯುತ್ತಿಲ್ಲ. ಶುಶ್ರೂಷೆ ಸೇರಿದಂತೆ ಕೆಳ ಹಂತದ ಸೇವಾ ವಿಭಾಗಗಳನ್ನು ಹೊರತುಪಡಿಸಿದರೆ ಆರೋಗ್ಯ ಕ್ಷೇತ್ರದಲ್ಲೂ ಮಹಿಳೆಯರ ಪ್ರಾತಿನಿಧ್ಯ ಅತ್ಯಂತ ಕಡಿಮೆ. ಶೇ 11ರಷ್ಟು ಮಹಿಳೆಯರಷ್ಟೇ ನಿರ್ಣಾಯಕ ಹುದ್ದೆಗಳಲ್ಲಿ ಅವಕಾಶ ಪಡೆದಿದ್ದಾರೆ. ಬಾಣಂತಿ, ಹೆರಿಗೆ, ಕುಟುಂಬದ ಆರೋಗ್ಯ, ಪೌಷ್ಟಿಕ ಆಹಾರ ಹಂಚಿಕೆ, ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗೆ ಆರೋಗ್ಯ ಕ್ಷೇತ್ರದಲ್ಲಿ ಸೂಕ್ತ ಪ್ರಾತಿನಿಧ್ಯ ದೊರಕದಿರುವುದು ಇತರೆ ವ್ಯವಸ್ಥೆಗಳ ಮೇಲೂ ಪರಿಣಾಮ ಬೀರುತ್ತದೆ ಎಂದರು.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗಳಂತಹ ವೇದಿಕೆಗಳ ಮೂಲಕ ಮಹಿಳೆಯರನ್ನು ವಿಜ್ಞಾನ ತಂತ್ರಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ತೊಡಗಿಸಲು ಸರ್ಕಾರ ಗಂಭೀರ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಯುಎಸ್‌ ವ್ಯಾಪಾರ ಅಭಿವೃದ್ಧಿ ಏಜೆನ್ಸಿಯ ಏಷಿಯಾ ಹಾಗೂ ಇಂಡೊ– ಪೆಸಿಫಿಕ್‌ ಪ್ರಾದೇಶಿಕ ಪ್ರತಿನಿಧಿ ಮೆಹನಾಜ್‌ ಅನ್ಸಾರಿ ಮಾತನಾಡಿ, ಮಾರಾಟ, ಉತ್ಪಾದನೆಯಂತಹ ಪುರುಷ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನ ಪಡೆಯುವುದು ಮಹಿಳೆಯರಿಗೆ ಸವಾಲಾಗಿದೆ. ಈ ಅಡೆತಡೆಗಳನ್ನು ತೊಡೆದುಹಾಕಲು ತಳಮಟ್ಟದಲ್ಲಿ ಗಂಭೀರ ಪ್ರಯತ್ನಗಳು ನಡೆಯಬೇಕು ಎಂದರು. 

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿಯ ನಿರ್ದೇಶಕಿ ಶೋಭಾ ಮಿಶ್ರಾ ಘೋಷ್‌, ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ ಜತೆಗೆ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವ ಮಹಿಳೆಯರ ಸಾಧನೆಗೆ ಕುಟುಂಬ ಹಾಗೂ ಸಮಾಜ ಸಂಪೂರ್ಣ ಬೆಂಬಲ ನೀಡಬೇಕು ಎಂದು ಹೇಳಿದರು.

ಜೆ ಆ್ಯಂಡ್‌ ಜೆ ಕಂಪನಿಯ ಯೋಜನಾ ವಿಭಾಗದ ಮುಖ್ಯಸ್ಥೆ ಜ್ಯೋತ್ಸ್ನಾ ಘೋಶಲ್‌, ಜೆ ಸಾಗರ್‌ ಅಸೋಸಿಯೇಟ್ಸ್‌ ಪಾಲುದಾರರಾದ ಆಯಿಷಾ ಮನ್ಸೂರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT