ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿ.ವಿ: ಎಲ್ಲ ಹೊರಗುತ್ತಿಗೆ ನೌಕರರ ವಜಾ

ಕೆಲಸ ಕಳೆದುಕೊಂಡ 500ಕ್ಕೂ ಹೆಚ್ಚು ನೌಕರರು * ಸರ್ಕಾರದ ಸೂಚನೆಯಂತೆ ಕ್ರಮ– ಕುಲಸಚಿವೆ
Last Updated 10 ಅಕ್ಟೋಬರ್ 2021, 7:16 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ವಿಶ್ವವಿದ್ಯಾಲಯದ ಕುಲಸಚಿವರಾದ (ಆಡಳಿತ) ಕೆ. ಜ್ಯೋತಿ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಇದರಿಂದ ಸುಮಾರು 500 ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ.

‘ನಿಯಮಬಾಹಿರವಾಗಿ, ಅರ್ಹತೆಯ ಮಾನದಂಡಗಳನ್ನು ಮೀರಿ ಮಂಜೂರಾದ ಹುದ್ದೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬೋಧಕ, ಬೋಧಕೇತರ ಹುದ್ದೆಗಳಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ತಾತ್ಕಾಲಿಕ, ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಸಿಬ್ಬಂದಿ ತಮ್ಮ ಸೇವೆಯನ್ನು ಕಾಯಂಗೊಳಿಸುವುದು ಮತ್ತು ಇತರ ಸೌಲಭ್ಯಗಳಿಗಾಗಿ ಪದೇ ಪದೇ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಅಂಥ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೆ. 2ರಂದು ನಿರ್ದೇಶಿಸಿದ್ದಾರೆ. ಅದರಂತೆ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಆದೇಶದಲ್ಲಿ ಅವರು ತಿಳಿಸಿದ್ದಾರೆ.

‘ವಿಶ್ವವಿದ್ಯಾಲಯದಲ್ಲಿ ಮಂಜೂರಾದ ಖಾಲಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಂಡಿಲ್ಲ. ಅಲ್ಲದೇ, ಅರ್ಹತೆಯ ಮಾನದಂಡವನ್ನೂ ಪಾಲಿಸಿಲ್ಲ. ಮಾರ್ಚ್‌ 24ರಂದು ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯಲ್ಲಿ ಈ ವಿಷಯದ ಬಗ್ಗೆ ಸ್ಪಷ್ಟವಾಗಿ ಹಾಗೂ ಈ ಹಿಂದಿನ ಸಿಂಡಿಕೇಟ್‌ ಸಭೆಗಳಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪಿಸಲಾಗಿದೆ. ಸದ್ಯ ಹೊರ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲು ವಿಶ್ವವಿದ್ಯಾಲಯ ಅನುಸರಿಸುತ್ತಿರುವ ಕ್ರಮ ಸರ್ಕಾರ ನೀತಿ, ಮಾರ್ಗಸೂಚಿಗಳಿಗೆ ಅನುಸಾರವಾಗಿ ಇಲ್ಲ. ಹೊರಗುತ್ತಿಗೆ ನೌಕರರನ್ನು ಹೊರಗುತ್ತಿಗೆದಾರ ಸಂಸ್ಥೆಯಿಂದ ಪಡೆದುಕೊಳ್ಳಬೇಕಿದೆ. ಅಲ್ಲದೇ, ಮಂಜೂರಾದ ಹುದ್ದೆಗಳಿಗೆ ಅರ್ಹತೆಯ ಮಾನದಂಡ ಅನುಸರಿಸಿ ಮಾತ್ರ ಪಡೆಯಬೇಕು ಎಂದು ಸಿಂಡಿಕೇಟ್‌ ಸಭೆಯ ಗಮನಕ್ಕೆ ತರಲಾಗಿದೆ. ಆದರೂ ಪ್ರಸ್ತುತ ಇರುವ ಹೊರಗುತ್ತಿಗೆ ನೌಕರರನ್ನು ಮುಂದಿನ 6 ತಿಂಗಳ ಅವಧಿಗೆ ಮುಂದುವರಿಸಲು ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಏಪ್ರಿಲ್‌ 9ರಿಂದ ಅ. 8ರವರೆಗೆ ಮುಂದುವರಿಸಲಾಗಿದ್ದು, ಇದೀಗ ಅವಧಿ ಕೊನೆಗೊಂಡಿರುವುದರಿಂದ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ’ ಎಂದೂ ಆದೇಶದಲ್ಲಿ ಅವರು ವಿವರಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕುಲಸಚಿವರು, ‘ಸರ್ಕಾರದ ಸೂಚನೆಯಂತೆ ಎಲ್ಲ ಹೊರಗುತ್ತಿಗೆ ನೌಕರರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಮಾನದಂಡ ಪ್ರಕಾರ ನೇಮಕಾತಿ ಪ್ರಕ್ರಿಯೆಗಳನ್ನು ಅನುಸರಿಸದೇ ಮತ್ತು ಸರ್ಕಾರದಿಂದ ಅನುಮೋದನೆ ಪಡೆಯದೇ ನೇಮಕಗೊಂಡವರನ್ನು ಬಿಡುಗಡೆ ಮಾಡುವಂತೆ ಸರ್ಕಾರದಿಂದ ಸೂಚನೆ ಬಂದಿತ್ತು. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 494 ಮಂದಿ ಜೊತೆಗೆ ಇನ್ನೂ ಕೆಲವರಿದ್ದು, ಸುಮಾರು 500 ನೌಕರರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ’ ಎಂದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್‌. ವೇಣುಗೋಪಾಲ್‌ ಅವರಿಗೆ ಕರೆ ಮಾಡಲಾಯಿತಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT