ಬುಧವಾರ, ಜೂನ್ 16, 2021
21 °C
ಹೆಚ್ಚಿದ ದೂರು ನೀಡುವವರ ಸಂಖ್ಯೆ *ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯೂ ಪ್ರಕರಣ

ಬೆಂಗಳೂರು: ಗಲಭೆಕೋರರ ವಿರುದ್ಧ 42 ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ), ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಹಾಗೂ ಕಾವಲ್ ಭೈರಸಂದ್ರದಲ್ಲಿ ಮಂಗಳವಾರ ರಾತ್ರಿ (ಆ. 11) ಗಲಭೆ ಸೃಷ್ಟಿಸಿದ್ದ ಗಲಭೆಕೋರರ ವಿರುದ್ಧ ಇದುವರೆಗೂ 42 ಎಫ್‌ಐಆರ್ ದಾಖಲಾಗಿವೆ.

ಪೊಲೀಸ್ ಠಾಣೆಗೆ ನುಗ್ಗಿದ್ದ ಗಲಭೆಕೋರರು, ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟಿದ್ದರು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ, ಇತರ ಸಾರ್ವಜನಿಕರ ಮನೆಗೂ ಗಲಭೆಕೋರರು ಬೆಂಕಿ ಇಟ್ಟಿದ್ದರು. ವಾಹನಗಳನ್ನೂ ಸುಟ್ಟು ಹಾಕಿದ್ದರು. ಈ ಸಂಬಂಧ ಪೊಲೀಸರು, ಸಾರ್ವಜನಿಕರು ಪ್ರತ್ಯೇಕವಾಗಿ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಾರೆ.

ಘಟನೆ ನಡೆದ ಮರುದಿನದಿಂದ ದೂರು ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಶನಿವಾರವೂ ಪೊಲೀಸರು ಹಾಗೂ ಸಾರ್ವಜನಿಕರು, ತಮಗಾದ ಗಾಯ ಹಾಗೂ ಹಾನಿ ಮೌಲ್ಯದ ಸಮೇತ ಠಾಣೆಗೆ ದೂರು ನೀಡಿದ್ದಾರೆ. 

‘ಗುರುತು ಸಿಗದ ರೀತಿಯಲ್ಲಿ ವಾಹನಗಳು ಸುಟ್ಟಿವೆ. ಅದರಲ್ಲಿ ಪೊಲೀಸರ ಹಾಗೂ ಸಾರ್ವಜನಿಕರ ವಾಹನಗಳೂ ಇದ್ದವು. ವಿವಿಧ ಪ್ರಕರಣದಲ್ಲಿ ಜಪ್ತಿ ಮಾಡಲಾದ ವಾಹನಗಳೂ ಇದ್ದವು. ವಾಹನಗಳ ಮಾಲೀಕರು ಒಬ್ಬೊಬ್ಬರಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಎರಡೂ ಠಾಣೆಯಲ್ಲಿ ಇದುವರೆಗೂ 42 ಎಫ್‌ಐಆರ್‌ಗಳು ದಾಖಲಾಗಿವೆ. ಇವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎಂದೂ ತಿಳಿಸಿದರು.

ಎಸ್‌ಸಿ-ಎಸ್‌ಟಿ ಕಾಯ್ದೆ ಅಡಿ ಪ್ರಕರಣ: ‘ಕಾವಲ್‌ ಭೈರಸಂದ್ರದ ನಾಗಮ್ಮ ಲೇಔಟ್ ನಿವಾಸಿ ಟಿ. ಪವನ್‌ಕುಮಾರ್ ಎಂಬುವರ ಮನೆಗೆ ನುಗ್ಗಿದ್ದ 300 ಗಲಭೆಕೋರರು, ಪೀಠೋಪಕರಣ ಧ್ವಂಸ ಮಾಡಿ ಬೆಂಕಿ ಹಚ್ಚಿದ್ದಾರೆ. ಚಿನ್ನಾಭರಣ ದೋಚಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿಗೂ ಬೆಂಕಿ ಹಚ್ಚಿ ಸುಟ್ಟಿದ್ದಾರೆ’ ಎಂದು ಅಧಿಕಾರಿ ಹೇಳಿದರು.

‘ಗಲಭೆಕೋರರ ಕೃತ್ಯದಿಂದ ₹60 ಲಕ್ಷದಷ್ಟು ಹಾನಿಯಾಗಿರುವುದಾಗಿ ಹೇಳಿ ಪವನ್‌ ಕುಮಾರ್ ದೂರು ನೀಡಿದ್ದಾರೆ. ‘ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989’ ಅಡಿ ಗಲಭೆಕೋರರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿದರು.

ಕೆಎಸ್‌ಆರ್‌ಪಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯಿಂದಲೂ ದೂರು: ‘ಗಲಭೆ ದಿನದಂದು ಭದ್ರತಾ ಕೆಲಸಕ್ಕಾಗಿ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರು. ಅವರ ಮೇಲೂ ಹಲ್ಲೆ ನಡೆದಿದೆ. ವಾಹನಗಳನ್ನೂ ಸುಟ್ಟು ಹಾಕಲಾಗಿದೆ. ಈ ಸಂಬಂಧ ಪ್ರತ್ಯೇಕವಾಗಿ ದೂರು ನೀಡಿದ್ದಾರೆ’ ಎಂದು ಅಧಿಕಾರಿ ವಿವರಿಸಿದರು.

‘ಕೆಎಸ್‌ಆರ್‌ಪಿ ವಾಹನಗಳು ಸುಟ್ಟಿರುವುದರಿಂದ ಲಕ್ಷಾಂತರ ರೂಪಾಯಿ ಹಾನಿ ಆಗಿದೆ. ಅಗ್ನಿಶಾಮಕ ವಾಹನಗಳನ್ನೂ ತಡೆದು ಗಲಭೆಕೋರರು, ಕಲ್ಲು ತೂರಾಟ ನಡೆಸಿದ್ದರು. ಗಾಜುಗಳನ್ನು ಒಡೆದಿದ್ದರು. ಇದೇ ಸಂದರ್ಭದಲ್ಲಿ ಸಿಬ್ಬಂದಿ ಮೇಲೂ ಹಲ್ಲೆ ಮಾಡಿದ್ದರು. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು, ನಂತರ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಹೇಳಿದರು.

ಗಲಭೆ: ಬಂಧಿತ ಆರೋಪಿ ಸಾವು
ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಹಾಗೂ ಕಾವಲ್‌ ಭೈರಸಂದ್ರದಲ್ಲಿ ನಡೆದಿದ್ದ ಗಲಭೆ ಸಂಬಂಧ ಬಂಧಿಸಲಾಗಿದ್ದ ಆರೋಪಿ ಸೈಯದ್ ನದೀಂ (24) ಎಂಬಾತ ಶನಿವಾರ ಮೃತಪಟ್ಟಿದ್ದು, ಆತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಕೆ.ಜಿ. ಹಳ್ಳಿ ನಿವಾಸಿಯಾಗಿದ್ದ ಸೈಯದ್ ನದೀಂ, ಹವಾನಿಯಂತ್ರಿತ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ. ಈತನಿಗೆ ಪತ್ನಿ, ಮೂವರು ಮಕ್ಕಳು ಹಾಗೂ ತಂದೆ, ತಾಯಿ ಇದ್ದಾರೆ. ಸ್ಥಳೀಯ ಯುವಕರ ಗುಂಪಿನ ಜೊತೆ ಆತ ಮಂಗಳವಾರ ರಾತ್ರಿ (ಅ.11) ಡಿ.ಜೆ.ಹಳ್ಳಿ ಠಾಣೆ ಎದುರು ಬಂದಿದ್ದ. ಅಲ್ಲಿಯೇ ಗಲಭೆ ಹೆಚ್ಚಾಗಿತ್ತು. ಠಾಣೆಗೆ ಬೆಂಕಿ ಹಚ್ಚಿ ವಾಹನಗಳನ್ನು ಸುಡಲಾಗಿತ್ತು.

‘ಆ. 12ರಂದು ಬೆಳಿಗ್ಗೆ ನದೀಂನನ್ನು ಬಂಧಿಸಲಾಗಿತ್ತು. ನಂತರ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು’ ಎಂದು ನಗರ ಹೆಚ್ಚುವರಿ ಕಮಿಷನರ್ (ಆಡಳಿತ) ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.

'ಆತನಿಗೆ ಯಾವುದೇ ಗುಂಡಿನ ಗಾಯಗಳು ಇರಲಿಲ್ಲ. ನಿನ್ನೆಯಷ್ಟೇ ಆರೋಪಿಗೆ ಹೊಟ್ಟೆ, ಭುಜದಲ್ಲಿ ನೋವು ಕಾಣಿಸಿಕೊಂಡಿತ್ತು. ಉಸಿರಾಟ ಸಮಸ್ಯೆಯೂ ಇತ್ತು. ಹೀಗಾಗಿ, ಆತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಆತ ಶನಿವಾರ ಸಾವನ್ನಪ್ಪಿದ್ದಾನೆ. ಗಂಟಲಿನ ದ್ರವದ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ’ ಎಂದೂ ಹೇಳಿದ್ದಾರೆ.

297 ಆರೋಪಿಗಳ ಬಂಧನ: ಗಲಭೆಕೋರರ ಬಂಧನಕ್ಕಾಗಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಶುಕ್ರವಾರ ತಡರಾತ್ರಿ 84 ಆರೋಪಿಗಳನ್ನು ಬಂಧಿಸಲಾಗಿದ್ದು, ಇದುವರೆಗೂ 297 ಆರೋಪಿಗಳನ್ನು ಬಂಧಿಸಿದಂತಾಗಿದೆ.

ಎಸಿಪಿ ನೇತೃತ್ವದ ತಂಡಗಳು ಬಂಧನ ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ. ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಮನೆ–ಅಂಗಡಿಗಳ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸುತ್ತಿವೆ.

ಬಳ್ಳಾರಿ ಜೈಲಿಗೆ ಆರೋಪಿಗಳು: ‘ಬಂಧಿತ ಆರೋಪಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ನೆಗಟಿವ್ ಬಂದ ನಂತರವೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನಂತರ, ಕೆಲ ಆರೋಪಿಗಳನ್ನು ಬಳ್ಳಾರಿ ಜೈಲಿಗೂ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು