ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್‌ರಾಜ್‌ ಬಂಧನ ತನಿಖೆಗೆ ತಿರುವು

Last Updated 17 ನವೆಂಬರ್ 2020, 20:40 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಮೇಯರ್‌ ಸಂಪತ್‌ರಾಜ್‌ ಬಂಧನದಿಂದ ಡಿ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಗಲಿದೆ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ.

‘ಆರೋಪಿ ಸಂಪತ್‌ರಾಜ್ ನಗರದಲ್ಲಿ ಅಡಗಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ಸೋಮವಾರ ತಡರಾತ್ರಿ ಬಂಧಿಸಲಾಯಿತು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಸಂಪತ್‌ರಾಜ್‌ ಪಾತ್ರದ ಕುರಿತು ಸಿಸಿಬಿ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ತನಿಖೆಯಿಂದ ಇನ್ನಷ್ಟು ಮಾಹಿತಿ ಸಿಗಲಿದೆ. ಕೃತ್ಯದ ಹಿಂದಿನ ಉದ್ದೇಶವೇನು ಎಂಬುದು ಬಹಿರಂಗವಾಗಲಿದೆ’ ಎಂದರು.

‘ಪೊಲೀಸರ ಮೇಲೆ ಯಾವುದೇ ಒತ್ತಡವಿಲ್ಲ. ನಿಷ್ಪಕ್ಷವಾಗಿ ತನಿಖೆ ನಡೆಸುತ್ತಿದ್ದಾರೆ. ವಾಸ್ತವಾಂಶ ಜನರಿಗೆ ತಿಳಿಯ
ಬೇಕು. ಸಂಪತ್‌ರಾಜ್ ಇರಲಿ, ಯಾರೇಇರಲಿ ಅವರು ಕಾನೂನಿಗಿಂತ ದೊಡ್ಡವರಲ್ಲ’ ಎಂದು ಸಚಿವರು ತಿಳಿಸಿದರು.

ಕಾಂಗ್ರೆಸ್‌ ದಲಿತ ವಿರೋಧಿ ನಿಲುವು: ‘ಸಂಪತ್‌ರಾಜ್‌ ಬಂಧನದಿಂದ ಕಾಂಗ್ರೆಸ್‌ ಈಗ ಗೊಂದಲಕ್ಕೆ ಸಿಲುಕಿದೆ. ಸಂಪತ್‌ ಪರ ನಿಲ್ಲಬೇಕೋ ಅಥವಾ ಅಖಂಡ ಶ್ರೀನಿವಾಸ್‌ ಪರ ನಿಲ್ಲಬೇಕೋ ಎಂಬ ಬಗ್ಗೆ ಇಕ್ಕಟಿಗೆ ಸಿಲುಕಿದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ಟೀಕಿಸಿದರು.

‘ದಲಿತ ಶಾಸಕನ ಮೇಲೆ ದಾಳಿ ನಡೆಸಿ, ಕೊಲೆ ಯತ್ನ ನಡೆಸಿದರೂ ಸಿದ್ದರಾಮಯ್ಯ ಸೇರಿ ಯಾವುದೇ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸಲಿಲ್ಲ. ಆರೋಪಿ ಸಂಪತ್‌ರಾಜ್‌ ಅವರನ್ನು ರಕ್ಷಿಸುವುದರಲ್ಲೇ ನಿರತರಾಗಿದ್ದರು. ನ್ಯಾಯಕ್ಕಾಗಿ ಅಖಂಡ ಶ್ರೀನಿವಾಸ್ ಮೊರೆ ಮಾಡಿದರೂ ಇವರ ಮನಸ್ಸು ಕರಗಲಿಲ್ಲ’ ಎಂದು’ ಎಂದು ಕಿಡಿಕಾರಿದರು.

ಅಖಂಡ ಪರವಾಗಿಯೇ ಇದ್ದೇನೆ

‘ಸಂಪತ್‌ರಾಜ್‌ ಆಗಲಿ ಯಾರೇ ಆಗಲಿ, ಎಲ್ಲರೂ ಕಾನೂನನ್ನು ಗೌರವಿಸಬೇಕು.ನಾನು ಆರಂಭದಿಂದಲೂ ಶಾಸಕ ಅಖಂಡ ಶ್ರೀನಿವಾಸ್‌ ಅವರ ಪರವಾಗಿಯೇ ಇದ್ದೇನೆ. ಬೇರೆಯವರ ವೈಯಕ್ತಿಕ ಅಭಿಪ್ರಾಯಗಳ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ‘ನಾನು ನ್ಯಾಯಬದ್ಧವಾಗಿ, ಕಾನೂನಿನ ಚೌಕಟ್ಟಿನಲ್ಲಿ ನಡೆದುಕೊಳ್ಳುವ ಎಲ್ಲರ ಪರವಾಗಿದ್ದೇನೆ. ನಾನು ಅಖಂಡ ಅವರ ಪರ ಇಲ್ಲ ಎಂದು ಹೇಳಿದ್ದು ಯಾರು? ನಾವೆಲ್ಲ ಅವರ ಮನೆಗೆ ಹೋಗಿದ್ದೆವು. ಪ್ರಕರಣ ನಡೆದ ಕ್ಷಣದಿಂದಲೂ ಅವರ ಜತೆಯೇ ಇದ್ದೇವೆ’ ಎಂದು ತಿಳಿಸಿದರು.

‘ಅಖಂಡ ಶ್ರೀನಿವಾಸಮೂರ್ತಿ ಅವರು ಈವರೆಗೂ ನನ್ನ ಬಳಿ ಬಂದು ಮಾತನಾಡಿಲ್ಲ. ಪೊಲೀಸ್‌ ತನಿಖೆ ನಡೆಯುತ್ತಿದ್ದು, ಅದರದೇ ಆದ ಪ್ರಕ್ರಿಯೆ ನಡೆಯುತ್ತದೆ. ಕೇವಲ ಒಬ್ಬರ ಅಭಿಪ್ರಾಯದ ಮೇಲೆ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ’ ಎಂದರು.

‘ಡಿ.ಕೆ ನನ್ನನ್ನು ಬೆಂಬಲಿಸಬೇಕು’

‘ಸಂಪತ್‌ರಾಜ್ ಅವರ ಬಂಧನವಾಗಿದ್ದು, ಇನ್ನಾದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನನ್ನನ್ನು ಬೆಂಬಲಿಸಬೇಕು’ ಎಂದು ಪುಲಿಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದರು.

‘ಕಾಂಗ್ರೆಸ್ ಪಕ್ಷ ನನ್ನ ರಕ್ಷಣೆಗೆ ಬರುತ್ತದೆ ಎಂಬ ವಿಶ್ವಾಸವಿದೆ. ನಾಯಕರಾದ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್‌ ಅಹಮದ್‌ ಅವರು ನನಗೆ ಬೆಂಬಲ ನೀಡಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಂತೆ ಮನವಿ ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT