ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಕಾರ್ಮಿಕರಿಗೆ ವೇತನ, ಕೂಲಿ ವಂಚನೆ

Last Updated 25 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಕಾಣಿಸಿಕೊಂಡ ಬಳಿಕ ನಗರದಲ್ಲಿ ಕಾರ್ಮಿಕರಿಗೆ ವೇತನ,ಕೂಲಿ ವಂಚನೆ ಪ್ರಕರಣಗಳು ಹೆಚ್ಚಾಗಿದ್ದು, ಕಳೆದ 15 ತಿಂಗಳಲ್ಲಿ 1,250 ಪ್ರಕರಣಗಳು ‘ಇಂಡಿಯಾ ಲೇಬರ್ ಲೈನ್’ ಸಹಾಯವಾಣಿ ಮೂಲಕ ದಾಖಲಾಗಿದೆ.

ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ವರ್ಕಿಂಗ್ ಪೀಪಲ್ಸ್ ಚಾರ್ಟರ್ (ಡಬ್ಲ್ಯುಪಿಸಿ) ಮತ್ತು ಆಜೀವಿಕಬ್ಯೂರೊ ಸಂಸ್ಥೆ ಜಂಟಿಯಾಗಿ ಸಹಾಯವಾಣಿ ಪ್ರಾರಂಭಿಸಿವೆ. ಈ ಸಹಾಯವಾಣಿಗೆ ಕರೆ ಮಾಡಿದವರಲ್ಲಿ ಹೆಚ್ಚಿನವರು ಮಾಲೀಕರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ವೇತನ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 2020ರ ಮಾರ್ಚ್‌ನಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ತಮ್ಮ ಊರುಗಳಿಗೆ ಮರಳಿದ್ದ ಕಾರ್ಮಿಕರು, ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಹಾಗೂ ನಿರ್ಬಂಧಗಳ ತೆರವಿನಿಂದಾಗಿ ಪುನಃ ಕೆಲಸವನ್ನು ಅರಸಿ ಬೆಂಗಳೂರಿಗೆ ಬರುತ್ತಿದ್ದಾರೆ.

ಡಬ್ಲ್ಯುಪಿಸಿ 2021ರ ಜುಲೈನಲ್ಲಿ ಈ ಸಹಾಯವಾಣಿ ಪ್ರಾರಂಭಿಸಿದೆ. ಇದನ್ನು ಸಂಸ್ಥೆಯು ಪ್ರಾಜೆಕ್ಟ್ ರೂಪದಲ್ಲಿ ಕಾರ್ಯಗತ ಮಾಡಿದ್ದು, ಮುಂದಿನ ದಿನಗಳಲ್ಲಿ ಮಹಾನಗರಗಳಿಗೂ ವಿಸ್ತರಿಸಲು ಕಾರ್ಯಯೋಜನೆ ರೂಪಿಸಿದೆ.

‘ಚಾಮರಾಜನಗರದ 32 ವರ್ಷದ ಕಾರ್ಮಿಕರೊಬ್ಬರು ಕಳೆದ ಮಾರ್ಚ್‌ನಲ್ಲಿ ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡದ ಮೇಲಿಂದ ಬಿದ್ದು, ಮೃತಪಟ್ಟಿದ್ದರು. ಕಟ್ಟಡವು ರಾಜಕಾರಣಿಯ ಮೊಮ್ಮಗನಿಗೆ ಸೇರಿತ್ತು. ಇದರಿಂದಾಗಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನಗಳು ನಡೆದಿದ್ದವು. ಸಹ ಕಾರ್ಮಿಕರೊಬ್ಬರು ಇಂಡಿಯಾ ಲೇಬರ್ ಲೈನ್ ಸಹಾಯವಾಣಿಗೆ ದೂರು ನೀಡಿದ್ದರಿಂದ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಲಾಯಿತು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕುಟುಂಬಕ್ಕೆ ಪರಿಹಾರ ಒದಗಿಸಲು ಆಗ್ರಹಿಸಲಾಯಿತು. ಅಂತಿಮವಾಗಿ ₹ 14.50 ಲಕ್ಷ ಪರಿಹಾರ ಅವರ ಕುಟುಂಬಕ್ಕೆ ದೊರೆಯಿತು. ಇದೇ ರೀತಿ ಹಲವು ಪ್ರಕರಣಗಳಲ್ಲಿನ್ಯಾಯ ಒದಗಿಸಿದ್ದೇವೆ’ ಎಂದು ಸಹಾಯವಾಣಿಯ ರಾಜ್ಯ ಸಂಯೋಜಕ ಮುನಿರಾಜು ಟಿ. ತಿಳಿಸಿದರು.

ಪ್ರಕರಣ ಹೆಚ್ಚಳ: ಭವಿಷ್ಯ ನಿಧಿ (ಪಿಎಫ್‌) ಮತ್ತು ಗ್ರಾಚ್ಯುಟಿ ಸಮಸ್ಯೆ, ವೇತನ ತಾರತಮ್ಯ, ಕೆಲಸದ ಸ್ಥಳದಲ್ಲಿ ಹಿಂಸೆ, ಅಧಿಕ ಅವಧಿ ದುಡಿಮೆ, ಅಪಘಾತ ಪರಿಹಾರ ನಿರಾಕರಣೆ ಹಾಗೂ ವೇತನ ವಿಳಂಬದ ಬಗ್ಗೆ ಹೆಚ್ಚಿನ ಕಾರ್ಮಿಕರು ಸಹಾಯವಾಣಿ ಸಂಪರ್ಕಿಸಿದ್ದಾರೆ. ಪ್ರತಿನಿತ್ಯ 15ರಿಂದ 20 ಮಂದಿ ಸಹಾಯವಾಣಿಗೆ ದೂರು ಸಲ್ಲಿಸುತ್ತಿದ್ದಾರೆ.

‘ಸಹಾಯವಾಣಿಗೆ ಬರುವ ಕರೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕಾನೂನು ಸೇರಿ ಎಲ್ಲ ರೀತಿಯ ನೆರವನ್ನು ಒದಗಿಸಿ, ಕಾರ್ಮಿಕರಿಗೆ ನ್ಯಾಯ ಒದಗಿಸಲು ನಾವು ಶ್ರಮಿಸುತ್ತಿದ್ದೇವೆ. ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನೂ ಒದಗಿಸಲಾಗುತ್ತದೆ’ ಎಂದು ಮುನಿರಾಜು ಹೇಳಿದರು.

400 ಪ್ರಕರಣಗಳು ಇತ್ಯರ್ಥ

ನಗರದಲ್ಲಿ ನೆಲೆಸಿರುವ ಕಾರ್ಮಿಕರಲ್ಲಿ ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕ ಭಾಗದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಹಾಯವಾಣಿಗೆ ಕರೆ ಮಾಡಿ, ಸಮಸ್ಯೆ ಹೇಳಿಕೊಂಡಿದ್ದಾರೆ. ದಾಖಲಾಗಿದ್ದ ದೂರುಗಳಲ್ಲಿ 400 ಪ್ರಕರಣಗಳನ್ನು ಈಗಾಗಲೇ ಇತ್ಯರ್ಥಗೊಳಿಸಲಾಗಿದೆ. ಇದರಿಂದಾಗಿ ಸುಮಾರು ₹ 92 ಲಕ್ಷದಷ್ಟು ವಂಚನೆ ಮೊತ್ತವನ್ನು ‌ಕಾರ್ಮಿಕರಿಗೆ ಹಿಂದಿರುಗಿಸಲಾಗಿದೆ.

ಯಾರೆಲ್ಲ ಕರೆ ಮಾಡಬಹುದು?

‘ಅಸಂಘಂಟಿತ ವಲಯಗಳಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರ, ಮನೆ ಕೆಲಸ, ಸ್ವಚ್ಛತೆ, ಗಾರ್ಮೆಂಟ್ಸ್‌, ಸಣ್ಣ ಕೈಗಾರಿಕೆಗಳು, ಕಾರ್ಖಾನೆಗಳು, ಭದ್ರತೆ, ಸೇವಾ ವಲಯಗಳಾದ ನರ್ಸಿಂಗ್, ಹೋಮ್ ನರ್ಸಿಂಗ್ ಹಾಗೂ ಇನ್ನಿತರೆ ಅಸಂಘಟಿತ ಕ್ಷೇತ್ರಗಳಲ್ಲಿ ಕಾರ್ಯನಿರ್ವಸುತ್ತಿರುವವರು ಈ ಸಹಾಯವಾಣಿಗೆ ಕರೆ ಮಾಡಬಹುದು. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಸಹಾಯವಾಣಿ ಸಕ್ರಿಯವಾಗಿ ಇರಲಿದೆ. ಬೇರೆ ಅವಧಿಯಲ್ಲಿ ಕರೆ ಮಾಡಿದರೂ, ಕಾರ್ಯಾವಧಿಯಲ್ಲಿ ಸಂಪರ್ಕಿಸಲಾಗುತ್ತದೆ’ ಎಂದು ಮುನಿರಾಜು ಟಿ. ತಿಳಿಸಿದರು.

ಉಚಿತ ಸಹಾಯವಾಣಿ ಸಂಖ್ಯೆ: 18008339020

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT