ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌ಕಾಯಿನ್‌ ಹಗರಣ: ಸುಳಿವಿಗೆ ‘ಐ.ಪಿ ವಿಳಾಸ’ದ ಮೊರೆ

ವಿದೇಶ ಹಾಗೂ ಕೇಂದ್ರ ತನಿಖಾ ತಂಡಗಳ ತನಿಖೆ
Last Updated 8 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಟ್ ಕಾಯಿನ್ (ಬಿಟಿಸಿ)’ ಹಗರಣದ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ವಿದೇಶದ ಹಾಗೂ ಕೇಂದ್ರ ಸರ್ಕಾರದ ತನಿಖಾ ತಂಡಗಳು, ಕಂಪ್ಯೂಟರ್ ಮೂಲಕ ನಡೆದಿದೆ ಎನ್ನಲಾದ ಬಿಟಿಸಿ ಅಕ್ರಮ ವರ್ಗಾವಣೆ ಪತ್ತೆಗಾಗಿ ಐ.ಪಿ (ಇಂಟರ್‌ನೆಟ್ ಪ್ರೋಟೋಕಾಲ್ ಅಡ್ರೆಸ್) ವಿಳಾಸಗಳನ್ನು ಪರಿಶೀಲಿಸುತ್ತಿವೆ.

ಬಿಟಿಸಿ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದರ ಮಧ್ಯೆಯೇ ವಿದೇಶದ ಹಾಗೂ ಕೇಂದ್ರದ ತನಿಖಾ ತಂಡಗಳು ಸದ್ದಿಲ್ಲದೇ ತನಿಖೆ ಚುರುಕುಗೊಳಿಸಿದ್ದು, ಈಗಾಗಲೇ ಸಾಕಷ್ಟು ಪುರಾವೆಗಳನ್ನು ಕಲೆಹಾಕಿರುವ ಬಗ್ಗೆ ಮಾಹಿತಿ ಇದೆ.

‘ಹಗರಣದ ಮೂಲ ಸೂತ್ರಧಾರ ಎನ್ನಲಾದ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು (26) ವಿಚಾರಣೆ ನಡೆಸಿದ್ದ ರಾಜ್ಯದ ಎರಡು ತನಿಖಾ ಸಂಸ್ಥೆಗಳ ಮೇಲೆಯೇ ಹೆಚ್ಚು ಅನುಮಾನವಿದೆ. ಅದೇ ಆಯಾಮದಲ್ಲಿ ತನಿಖೆ ನಡೆದಿದೆ. ರಾಜ್ಯದ ಕೆಲ ಪೊಲೀಸರೂ ಈ ತನಿಖೆಗೆ ಸಹಕಾರ ನೀಡುತ್ತಿದ್ದಾರೆ’ ಎಂದೂ ಮೂಲಗಳು ಹೇಳಿವೆ.

‘ಬಿಟಿಸಿ ವರ್ಗಾವಣೆಗೆ ಕೆಲವೆಡೆ ಲ್ಯಾಪ್‌ಟಾಪ್ ಹಾಗೂ ಕಂಪ್ಯೂಟರ್ ಬಳಸಿರುವ ಮಾಹಿತಿ ತನಿಖಾ ತಂಡಗಳಿಗೆ ಲಭಿಸಿದೆ. ಅಕ್ರಮಕ್ಕೆ ಬಳಸಿದ್ದ ಅಂತರ್ಜಾಲದ ಐ.ಪಿ ವಿಳಾಸಗಳನ್ನು (ಇಂಟರ್‌ನೆಟ್ ಪ್ರೋಟೋಕಾಲ್ ಅಡ್ರೆಸ್) ಕಲೆ ಹಾಕುತ್ತಿರುವ ತನಿಖಾ ತಂಡಗಳು, ಅವುಗಳನ್ನೇ ಪ್ರಾಥಮಿಕ ಸುಳಿವಾಗಿ ಪರಿಗಣಿಸಿ ತನಿಖೆ ಮುಂದುವರಿಸಿವೆ’ ಎಂದೂ ತಿಳಿಸಿವೆ.

ಶ್ರೀಕೃಷ್ಣನ ಮೂಲಕವೇ ವರ್ಗಾವಣೆ ?:
‘ಹಣ ವಿನಿಮಯ ಏಜೆನ್ಸಿಗಳ ಸರ್ವರ್ ಹಾಗೂ ಆನ್‌ಲೈನ್‌ ಗೇಮಿಂಗ್ ಜಾಲತಾಣಗಳನ್ನು ಹ್ಯಾಕ್ ಮಾಡಿ ಶ್ರೀಕೃಷ್ಣ, ಬಿಟ್‌ ಕಾಯಿನ್ ರೂಪದಲ್ಲಿ ಹಣ ದೋಚುತ್ತಿದ್ದ. ಆತನ ಮೂಲಕವೇ ಬಿಟ್‌ ಕಾಯಿನ್‌ಗಳನ್ನು ಬೇರೊಬ್ಬರು ಅಕ್ರಮವಾಗಿ ವರ್ಗಾಯಿಸಿಕೊಂಡಿರುವ ಆರೋಪಗಳು ಸದ್ಯಕ್ಕಿವೆ’ ಎಂದೂ ಪೊಲೀಸ್ ಮೂಲಗಳು ವಿವರಿಸಿವೆ.

‘ರಾಜ್ಯದ ಎರಡು ತನಿಖಾ ಸಂಸ್ಥೆಗಳ ಐ.ಪಿ ಅಡ್ರೆಸ್‌ಗಳು, ಅಕ್ರಮ ವರ್ಗಾವಣೆಗೆ ಬಳಕೆಯಾಗಿರುವ ಪ್ರಾಥಮಿಕ ಮಾಹಿತಿ ತನಿಖಾ ತಂಡಗಳಿಗೆ ಗೊತ್ತಾಗಿದೆ. ಆದರೆ, ಐ.ಪಿ ಅಡ್ರೆಸ್‌ಗಳನ್ನು ಬದಲಾಯಿಸಿ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿರುವ ಅನುಮಾನವಿದೆ. ಹೀಗಾಗಿ, ತನಿಖಾ ತಂಡಗಳು ಐ.ಪಿ ಅಡ್ರೆಸ್ ವಿಷಯದಲ್ಲಿ ಇದುವರೆಗೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಮತ್ತಷ್ಟು ಮಾಹಿತಿ ಕಲೆಹಾಕುವತ್ತ ಗಮನ ಹರಿಸಿವೆ.’

ಹೊರದೇಶಕ್ಕೆ ವರ್ಗಾವಣೆ?: ‘ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಅಂಕಿಗಳ ರೂಪದಲ್ಲಷ್ಟೇ ನೋಡಲು ಸಿಗುವ ಬಿಟ್ ಕಾಯಿನ್‌ ವ್ಯವಹಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ. ಬ್ಯಾಂಕ್ ಹಾಗೂ ಯಾವುದೇ ಮಧ್ಯವರ್ತಿಗಳಿಲ್ಲದೆ ಕಡಿಮೆ ವರ್ಗಾವಣೆ ಶುಲ್ಕದಲ್ಲಿ ವಹಿವಾಟು ನಡೆಸಬಹುದಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಶ್ರೀಕೃಷ್ಣನ ಮೂಲಕ ಬಿಟಿಸಿ ಮಾಹಿತಿ ತಿಳಿದುಕೊಂಡು, ಆತನ ಮೂಲಕವೇ ಹೊರದೇಶಗಳ ಮಧ್ಯವರ್ತಿಗಳಿಗೆ ಬಿಟಿಸಿ ವರ್ಗಾವಣೆ ಮಾಡಿರುವ ಆರೋಪವಿದೆ. ಆದರೆ, ಈ ವರ್ಗಾವಣೆಗೆ ನಿಖರ ಪುರಾವೆ ಸದ್ಯಕ್ಕೆ ಲಭ್ಯವಾಗಿಲ್ಲ. ಕರ್ನಾಟಕದ ಸೈಬರ್ ಲ್ಯಾಬ್‌ ಒಂದರ ನೆರವು ಪಡೆದಿರುವ ತನಿಖಾ ತಂಡಗಳು, ಐ.ಪಿ ಅಡ್ರೆಸ್ ಮೂಲಕವೇ ಪ್ರಕರಣದ ಜಾಡು ಭೇದಿಸಲು ಯತ್ನಿಸುತ್ತಿವೆ’ ಎಂದೂ ಹೇಳಿವೆ.

‘ಮೊದಲ ಪ್ರಕರಣದಲ್ಲೇ ಜಾಮೀನು’

‘ನೆದರ್ಲೆಂಡ್ಸ್‌ನಲ್ಲಿ ಬಿ.ಎಸ್ಸಿ ಮುಗಿಸಿ ಬೆಂಗಳೂರಿಗೆ ಬಂದಿದ್ದ ಶ್ರೀಕೃಷ್ಣ, ಇಲ್ಲಿಯ ಸ್ನೇಹಿತರ ಜೊತೆ ಹೆಚ್ಚು ಓಡಾಡುತ್ತಿದ್ದ. 2017ರಲ್ಲಿ ಮೊದಲ ಬಾರಿಗೆ ಪೋಕರ್‌ ಬಾಜಿ ಆನ್‌ಲೈನ್ ಗೇಮಿಂಗ್ ಜಾಲತಾಣ ಹ್ಯಾಕ್ ಮಾಡಿ, ₹ 50 ಲಕ್ಷ ದೋಚಿದ್ದ. ಜಾಲತಾಣದ ಸಿಇಒ ಅವರು ಬೆಂಗಳೂರು ನಗರ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪ್ರಕರಣದಲ್ಲಿ ಶ್ರೀಕೃಷ್ಣನ ಮೂವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದರು. ಶ್ರೀಕೃಷ್ಣ ಮಾತ್ರ ತಲೆಮರೆಸಿಕೊಂಡಿದ್ದ. ಆದರೆ, ಆತ ಅಂತರರಾಷ್ಟ್ರೀಯ ಹ್ಯಾಕರ್ ಎಂಬ ಮಾಹಿತಿ ಯಾರಿಗೂ ಗೊತ್ತಿರಲಿಲ್ಲ.’

‘ನ್ಯಾಯಾಲಯದಿಂದ ಜಾಮೀನು ‍ಪಡೆದಿದ್ದ ಆರೋಪಿ ಶ್ರೀಕೃಷ್ಣ, ವಕೀಲರ ಜೊತೆ ಠಾಣೆಗೆ ಹಾಜರಾಗಿದ್ದ. ಕಾನೂನು ಪ್ರಕ್ರಿಯೆ ಮುಗಿಸಿ ಆತನನ್ನು ವಾಪಸು ಕಳುಹಿಸಲಾಗಿತ್ತು. ಈ ಪ್ರಕರಣ ರಾಜಿಯಲ್ಲಿ ಇತ್ಯರ್ಥವಾಗಿತ್ತು. ಅದಾದ ನಂತರ, ಶ್ರೀಕೃಷ್ಣ ಸಾಕಷ್ಟು ಸೈಬರ್ ಅಪರಾಧಗಳನ್ನು ಎಸಗಿದ್ದಾನೆ’ ಎಂದೂ ತಿಳಿಸಿವೆ.

‘ಐ.ಪಿ ಅಡ್ರೆಸ್ ಅಂತಿಮವಲ್ಲ’

‘ಐ.ಪಿ ಅಡ್ರೆಸ್ ಹೊಂದಾಣಿಕೆಯಾದ ಮಾತ್ರಕ್ಕೆ ಪ್ರಕರಣದ ಪುರಾವೆ ಸಿಕ್ಕಿತು ಎಂದು ಹೇಳಲಾಗದು. ಪ್ರತಿಯೊಂದು ಅಂತರ್ಜಾಲ ವ್ಯವಸ್ಥೆಯ ಐ.ಪಿ ಅಡ್ರೆಸ್ ಬದಲಾಯಿಸುವ ಆಧುನಿಕ ತಂತ್ರಜ್ಞಾನ ನಮ್ಮಲ್ಲಿದೆ. ಆ್ಯಪ್‌ಗಳ ಮೂಲಕವೂ ಐ.ಪಿ ಅಡ್ರೆಸ್ ಬದಲಾವಣೆ ಮಾಡಬಹುದು. ಆದರೆ, ಸದ್ಯ ಸಿಕ್ಕಿರುವ ಐ.ಪಿ ಅಡ್ರೆಸ್‌ಗಳ ಖಚಿತತೆ ತಿಳಿಯಲು ತಾಂತ್ರಿಕ ತಜ್ಞರ ಮೂಲಕ ತನಿಖಾ ತಂಡಗಳು ತನಿಖೆ ಮುಂದುವರಿಸಿವೆ’ ಎಂದು ಗುಪ್ತದಳದ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT