ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಟ್ ಕಾಯಿನ್ ಹಗರಣ: ಪೊಲೀಸ್ ಅಧಿಕಾರಿ ಶ್ರೀಧರ್ ಪೂಜಾರ್‌ಗೆ ಜಾಮೀನು

Published 27 ಜೂನ್ 2024, 23:30 IST
Last Updated 27 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್ ವರ್ಡ್ ಬದಲಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿದ್ದ ರಾಜ್ಯ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಶ್ರೀಧರ್ ಕೆ. ಪೂಜಾರ್‌ ಅವರಿಗೆ ಹೈಕೋರ್ಟ್‌ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.

ಈ ಸಂಬಂಧ ಶ್ರೀಧರ್‌ ಕೆ. ಪೂಜಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ತನಿಖಾಧಿಕಾರಿ ಕರೆದಾಗ ವಿಚಾರಣೆಗೆ ಹಾಜರಾಗಬೇಕು. ತನಿಖೆಗೆ ಸಹಕರಿಸಬೇಕು’ ಎಂದು ಅರ್ಜಿದಾರರಿಗೆ ತಾಕೀತು ಮಾಡಿದೆ.

ಇದೇ ವೇಳೆ ನ್ಯಾಯಪೀಠವು, ಅರ್ಜಿದಾರರ ವಿರುದ್ಧ ಎರಡು ಬಾರಿ ಎಫ್‌ಐಆರ್‌ ದಾಖಲಿಸಿರುವ ಪೊಲೀಸರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿತು.

ಜಾಮೀನು ಅರ್ಜಿಗೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದ ರಾಜ್ಯ ಪ್ರಾಸಿಕ್ಯೂಷನ್, ‘ಬಿಟ್‌ ಕಾಯಿನ್‌ ಹಗರಣದ ರೂವಾರಿ ಶ್ರೀಕಾಂತ್‌ ಅಲಿಯಾಸ್‌ ಶ್ರೀಕಿ ಭಾಗಿಯಾಗಿರುವ ಈ ಪ್ರಕರಣದಲ್ಲಿ ಶ್ರೀಕಿಯನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡು ಕೆಲವು ಲೈವ್‌ ಸರ್ವರ್‌ಗಳನ್ನು ಹ್ಯಾಕ್ ಮಾಡಿ ಅಲ್ಲಿಂದ ಬಿಟ್‌ ಕಾಯಿನ್‌ ಕದಿಯಲಾಗಿದೆ. ಇದು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಹಗರಣ. ಶ್ರೀಕಿ ಹಾಗೂ ಇನ್ನುಳಿದ ಆರೋಪಿಗಳ ವಿಚಾರದಲ್ಲಿ ಅರ್ಜಿದಾರ ಪೂಜಾರಿ ಸಮರ್ಪಕ ತನಿಖೆ ನಡೆಸಿಲ್ಲ. ಅವರೊಂದಿಗೆ ಶಾಮೀಲಾಗಿದ್ದಾರೆ. ಸದ್ಯ ಎಸ್‌ಐಟಿ ಸಮರ್ಪಕ ತನಿಖೆ ನಡೆಸುತ್ತಿದೆ. ಅಂತೆಯೇ, ಅರ್ಜಿದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಆದ್ದರಿಂದ, ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು’ ಎಂದು ಮನವಿ ಮಾಡಿತ್ತು. ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ವಾದ ಮಂಡಿಸಿದರು.

ಪ್ರಕರಣವೇನು?:

ಡಾರ್ಕ್‌ ನೆಟ್‌ ಮೂಲಕ ಮಾದಕ ವಸ್ತು ಖರೀದಿಸಿದ ಆರೋಪದಡಿ 2020ರ ನವೆಂಬರ್‌ನಲ್ಲಿ ಶ್ರೀಕಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆಗ ಸಿಸಿಬಿಯಲ್ಲಿ ಪೂಜಾರ್ ತನಿಖಾಧಿಕಾರಿ ಆಗಿದ್ದರು. ಇದೇ ಸಂದರ್ಭದಲ್ಲಿ; 2019ರ ಜುಲೈ-ಆಗಸ್ಟ್ ಅವಧಿಯಲ್ಲಿ ಕರ್ನಾಟಕ ಸರ್ಕಾರದ ಇ-ಆಡಳಿತ ಘಟಕದ ₹11.5 ಕೋಟಿ ದೋಚಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ 10ನೇ ಆರೋಪಿಯಾದ ಶ್ರೀಕಿಯನ್ನು 2020ರ ಏಪ್ರಿಲ್ 14ರಿಂದ 17ರವರೆಗೆ ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಬಿಟ್ ಕಾಯಿನ್ ವರ್ಗಾವಣೆ, ಪಾಸ್ ವರ್ಡ್ ಬದಲಾವಣೆಯಂತಹ ಕೃತ್ಯಗಳಿಗೆ ಬಳಕೆ ಮಾಡಿದ ಆರೋಪಗಳನ್ನು ಪೂಜಾರ್ ಎದುರಿಸುತ್ತಿದ್ದಾರೆ.

ಈ ಆರೋಪಗಳ ಅನ್ವಯ ಪೊಲೀಸರು 2024ರ ಜನವರಿ 24ರಂದು ದಾಖಲಿಸಿದ್ದ ದೂರಿನಡಿ ಪೂಜಾರ್ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT