ಭಾನುವಾರ, ಮಾರ್ಚ್ 7, 2021
32 °C

ಜಿಲ್ಲಾ ಉಸ್ತುವಾರಿಗೆ ಸಚಿವರ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಚಿವ ಸಂಪುಟಕ್ಕೆ ಸೇರಲು, ಬಳಿಕ ಉತ್ತಮ ಖಾತೆಗೆ ಹಟ ಮಾಡಿ ಅತೃಪ್ತಿ ಹೊರಹಾಕಿದ್ದ ಸಚಿವರ ಪೈಕಿ ಕೆಲವರು ಈಗ ತಮಗೆ ಇಂತಹದೇ ಜಿಲ್ಲೆಯ ಉಸ್ತುವಾರಿ ಬೇಕು ಎಂದು ಹೊಸ ಪಟ್ಟು ಹಾಕಲಾರಂಭಿಸಿದ್ದಾರೆ.

ತಾವು ಪ್ರತಿನಿಧಿಸುವ ಜಿಲ್ಲೆ ಹಾಗೂ ಪ್ರತಿಷ್ಠೆಯ ಜಿಲ್ಲೆಯ ಮೇಲೆ ಸಚಿವರು ಕಣ್ಣಿಟ್ಟಿರುವುದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಮತ್ತೊಂದು ಸುತ್ತಿನ ಸಮಸ್ಯೆ ತಂದಿಟ್ಟಿದೆ.

ಉಸ್ತುವಾರಿಯನ್ನು ಹಂಚಿಕೆ ಮಾಡದೇ ಇದ್ದರೂ ಗಣರಾಜ್ಯೋತ್ಸವ ಆಚರಣೆ ವೇಳೆ ಧ್ವಜಾರೋಹಣದ ಜವಾಬ್ದಾರಿಯನ್ನು ಹಂಚಿಕೆ ಮಾಡಿ ಸುತ್ತೋಲೆ ಹೊರಡಿಸಲಾಗಿತ್ತು. ತಾವು ಪ್ರತಿನಿಧಿಸುವ ಜಿಲ್ಲೆಯನ್ನು ನೀಡಿಲ್ಲ ಎಂಬ ಸಿಟ್ಟನ್ನು ಹೊರಹಾಕಿರುವ ಕೆಲವರು, ಇದನ್ನು ಯಡಿಯೂರಪ್ಪನವರ ಗಮನಕ್ಕೂ ತಂದಿದ್ದಾರೆ ಎಂದು ಗೊತ್ತಾಗಿದೆ.

ಬಿಜೆಪಿ ಸೇರುವ ಮುನ್ನ ಜಲಸಂಪನ್ಮೂಲ ಖಾತೆ ಜತೆಗೆ ಬೆಳಗಾವಿ ಜಿಲ್ಲೆಯ ಉಸ್ತುವಾರಿ ತಮಗೆ ನೀಡಬೇಕು ಎಂಬ ಷರತ್ತನ್ನು ರಮೇಶ ಜಾರಕಿಹೊಳಿ ಇಟ್ಟಿದ್ದರು. ಹೀಗಾಗಿ, ಆ ಜಿಲ್ಲೆಯ ಉಸ್ತುವಾರಿ ಜಾರಕಿಹೊಳಿ ಬಳಿ ಇದೆ. ಈ ಜಿಲ್ಲೆ ಪ್ರತಿನಿಧಿಸುವ ಅತ್ಯಂತ ಹಿರಿಯ ಶಾಸಕ ಉಮೇಶ ಕತ್ತಿ ಈಗ ಸಚಿವರಾಗಿದ್ದು, ಉಸ್ತುವಾರಿ ತಮಗೆ ನೀಡುವಂತೆ ಬೇಡಿಕೆ ಮಂಡಿಸಿದ್ದಾರೆ.

ಹಾವೇರಿ ಜಿಲ್ಲೆಯಿಂದ ಬಸವರಾಜ ಬೊಮ್ಮಾಯಿ, ಬಿ.ಸಿ. ಪಾಟೀಲ ಹಾಗೂ ಆರ್. ಶಂಕರ್‌ ಹೀಗೆ ಮೂವರು ಸಚಿವ
ರಿದ್ದಾರೆ. ಸದ್ಯ ಉಸ್ತುವಾರಿ ಬೊಮ್ಮಾಯಿ ಅವರ ಹೆಗಲಿಗೆ ಇದೆ. ಖಾತೆ ಬಗ್ಗೆ ಅಸಮಾಧಾನಗೊಂಡಿರುವ ಶಂಕರ್ ಅವರನ್ನು ಶುಕ್ರವಾರ ಕರೆಸಿಕೊಂಡಿದ್ದ ಮುಖ್ಯಮಂತ್ರಿ ಅವರನ್ನು ಸಮಾಧಾನ ಪಡಿಸುವ ಯತ್ನ ಮಾಡಿದ್ದಾರೆ. ‘ಕೇಳಿದ ಖಾತೆ ಕೊಟ್ಟಿಲ್ಲ ಉಸ್ತುವಾರಿ
ಯನ್ನಾದರೂ ಕೊಡಿ’ ಎಂದು ಶಂಕರ್ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ, ಮುಖ್ಯಮಂತ್ರಿ
ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಬೊಮ್ಮಾಯಿ ಅವರನ್ನು ಬಿಟ್ಟು ಪಾಟೀಲ ಅಥವಾ ಶಂಕರ್ ಅವರಿಗೆ ಜಿಲ್ಲಾ ಉಸ್ತುವಾರಿ ವಹಿಸಲು ಯಡಿಯೂರಪ್ಪ ತಯಾರಿಲ್ಲ ಎಂದೂ ಹೇಳಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಆರ್.ಅಶೋಕ ಅವರಿಗೆ ಇದೆ. ಈ ಜಿಲ್ಲೆಯನ್ನು ಪ್ರತಿನಿಧಿಸುವ ತಮಗೆ ಹೊಣೆ ನೀಡಬೇಕು ಎಂದು ಎಂ.ಟಿ.ಬಿ. ನಾಗರಾಜ್ ಬೇಡಿಕೆ ಇಟ್ಟಿದ್ದಾರೆ.

ರಾಮನಗರ ಉಸ್ತುವಾರಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರಿಗೆ ವಹಿಸಲಾಗಿದೆ. ಈ ಜಿಲ್ಲೆ ಪ್ರತಿನಿಧಿಸುವ ಸಿ.ಪಿ. ಯೋಗೇಶ್ವರ್ ಸಚಿವರಾದ ಬಳಿಕ, ಜಿಲ್ಲಾ ಉಸ್ತುವಾರಿ ನೀಡಿ ಎಂಬ ಪಟ್ಟು ಹಾಕಿದ್ದಾರೆ. ಜಿಲ್ಲೆಯಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಅವರ ಪ್ರಭಾವ ತಗ್ಗಿಸಬೇಕಾದರೆ ತಮಗೆ ಉಸ್ತುವಾರಿ ನೀಡಬೇಕು ಎಂಬ ವಾದವನ್ನೂ ಯೋಗೇಶ್ವರ್‌ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು