ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಪೆಕ್ಟರ್ ಆದ ಅಂಧ ಯುವತಿ: ಪೊಲೀಸರ ನಡೆಗೆ ಮೆಚ್ಚುಗೆ

ಬಾಣಸವಾಡಿ ಠಾಣೆ
Last Updated 8 ಮಾರ್ಚ್ 2020, 20:44 IST
ಅಕ್ಷರ ಗಾತ್ರ

ಬೆಂಗಳೂರು: ‘ತ್ರಿಬಲ್ ಸ್ಟಾರ್’ ಪೊಲೀಸ್ ಸಮವಸ್ತ್ರ ಧರಿಸಿ ಯುವತಿಯೊಬ್ಬರು ಜೀಪಿನಿಂದ ಇಳಿಯುತ್ತಿದ್ದಂತೆ, ಠಾಣೆಯ ಸಿಬ್ಬಂದಿಯೆಲ್ಲ ಸಾಲಾಗಿ ನಿಂತು ಸೆಲ್ಯೂಟ್ ಹೊಡೆದರು. ಇನ್‌ಸ್ಪೆಕ್ಟರ್‌ ಸಹ ಉತ್ಸಾಹದಿಂದಲೇ ಯುವತಿಯನ್ನು ಠಾಣೆಯೊಳಗೆ ಬರಮಾಡಿಕೊಂಡರು. ತಮ್ಮ ‘ಠಾಣಾಧಿಕಾರಿ’ ಕುರ್ಚಿಯನ್ನು ಬಿಟ್ಟುಕೊಟ್ಟು ಯುವತಿಗೆ ಹೂಗುಚ್ಛ ನೀಡಿ ಬ್ಯಾಟನ್ ಹಸ್ತಾಂತರಿಸಿದರು.

ಇದು ಬಾಣಸವಾಡಿ ಠಾಣೆಯಲ್ಲಿ ಭಾನುವಾರ ಕಂಡುಬಂದ ದೃಶ್ಯ. ಸೇಂಟ್ ಜೋಸೆಫ್ಸ್‌ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಅಂಧ ಯುವತಿ ಟಿ.ಎಂ. ಸಫ್ನಾ ಅವರ ಇನ್‌ಸ್ಪೆಕ್ಟರ್ ಆಗಬೇಕೆಂಬ ಆಸೆಯನ್ನು ಬಾಣಸವಾಡಿ ಪೊಲೀಸರು ಅಂತರರಾಷ್ಟ್ರೀಯ ಮಹಿಳಾ ದಿನದಂದು ಈಡೇರಿಸಿದರು.

ಕೇರಳದ ಮೊಹಮ್ಮದ್ ಬಷೀರ್ ಹಾಗೂ ಮುಮ್ತಾಜ್ ದಂಪತಿಯ ಇಬ್ಬರು ಹೆಣ್ಣು ಮಕ್ಕಳಲ್ಲಿ ಸಫ್ನಾ ಹಿರಿಯವರು. ಸಫ್ನಾ ಅವರು ನಾಗಾವರದ ಸತ್ಯಸೇವಾ ಶಾಲೆಯಲ್ಲಿ ಶೇ 91ರಷ್ಟು ಅಂಕಗಳೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಜ್ಯೋತಿ ಪಿ.ಯು ಕಾಲೇಜಿನ ವಿದ್ಯಾರ್ಥಿಯಾಗಿದ್ದ ಆಕೆ ಪಿಯು ಪರೀಕ್ಷೆಯಲ್ಲಿ ಶೇ 89ರಷ್ಟು ಅಂಕ ಗಳಿಸಿದ್ದಾರೆ. ಸದ್ಯ ರಿಚ್ಮಂಡ್ ರಸ್ತೆಯಸೇಂಟ್ ಜೋಸೆಫ್ಸ್‌ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿದ್ದಾರೆ.

ಬೆಳಿಗ್ಗೆ ಠಾಣೆಗೆ ಬಂದ ಸಫ್ನಾ ಅವರನ್ನು ಸ್ವಾಗತಿಸಿದ ಇನ್‌ಸ್ಪೆಕ್ಟರ್‌ ಎಚ್‌. ಜಯರಾಜ್‌, ತಮ್ಮ ಬ್ಯಾಟನ್‌ ನೀಡಿದರು. ಪಿಎಸ್‌ಐಗಳಾದ ಎನ್‌. ಮುರುಳಿ, ಬಿ.ಎಸ್. ರಮಾದೇವಿ, ಸಂಗೀತಾ ಹಾಗೂ ಧನಂಜಯ್ ಅವರೂ ಹಾಜರಿದ್ದರು.

ಇನ್‌ಸ್ಪೆಕ್ಟರ್ ಕುರ್ಚಿಯಲ್ಲಿ ಕುಳಿತ ಯುವತಿ, ಠಾಣೆ ಸಿಬ್ಬಂದಿಯನ್ನು ಮಾತನಾಡಿಸಿದರು. ಠಾಣೆ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ತನ್ನ ಆಸೆ ಈಡೇರಿಸಿದ ಪೊಲೀಸರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಜಯರಾಜ್, ‘ಮೊಹಮ್ಮದ್ ಬಷೀರ್ ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಂಪೂರ್ಣ ಅಂಧೆಯಾದ ಸಫ್ನಾ, ಬಡತನವನ್ನು ಮೆಟ್ಟಿ ಸಾಧನೆ ಮಾಡಿದ್ದಾರೆ. ಡಿಸಿಪಿ ಎಸ್.ಡಿ. ಶರಣಪ್ಪ ಮಾರ್ಗದರ್ಶನದಲ್ಲಿ ಯುವತಿಯ ಕನಸು ಈಡೇರಿಸುವ ಅವಕಾಶ ಸಿಕ್ಕಿತ್ತು. ಇದು ಖುಷಿ ಸಂಗತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT