ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾದ ಪ್ರತೀಕ್ಷಾಗೆ ಒಂಬತ್ತು ಚಿನ್ನ

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಘಟಿಕೋತ್ಸವ
Last Updated 29 ಏಪ್ರಿಲ್ 2022, 16:56 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರಕನ್ನಡ ಜಿಲ್ಲೆ ಕುಮಟದ ಪ್ರತೀಕ್ಷಾ ಜೆ.ಪೈ,ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ 2022ನೇ ಸಾಲಿನ ಘಟಿಕೋತ್ಸವದಲ್ಲಿ ಒಟ್ಟು 9 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಫಿಸಿಯಾಲಜಿ, ಬಯೋಕೆಮಿಸ್ಟ್ರಿ, ಮೈಕ್ರೋಬಯಾಲಜಿ, ಪೆಥಾಲಜಿ, ಫೋರೆನ್ಸಿಕ್‌ ಮೆಡಿಸಿನ್‌, ಕಮ್ಯುನಿಟಿ ಮೆಡಿಸಿನ್‌, ಜನರಲ್‌ ಮೆಡಿಸಿನ್‌, ಜನರಲ್‌ ಸರ್ಜರಿ ಮತ್ತು ಪೀಡಿಯಾಟ್ರಿಕ್ಸ್‌ ವಿಷಯಗಳಲ್ಲಿ ಈಸಾಧನೆ ಮಾಡಿದ್ದಾರೆ.

ಮೊದಲನೇ, ಎರಡನೇ ಹಾಗೂ ಅಂತಿಮ ವರ್ಷದ ಎಂಬಿಬಿಎಸ್‌ನಲ್ಲಿ ಸಮಗ್ರ ಪ್ರಶಸ್ತಿ ಪಡೆದಿರುವ ಅವರಿಗೆ ಪೆಥಾಲಜಿ ಹಾಗೂ ಮೈಕ್ರೋಬಯಾಲಜಿ ವಿಭಾಗದಿಂದ ನೀಡಲಾಗುವ ನಗದು ಪುರಸ್ಕಾರ, ಎನ್‌.ವೀರಯ್ಯ, ಡಾ.ಎಚ್‌.ಗೀತಾ, ಡಾ.ಬಿ.ಎನ್‌.ಲಿಂಗರಾಜು, ಡಾ.ಎಲ್‌.ಜಿ.ಹಾವನೂರು ಮತ್ತು ಸುಶೀಲಮ್ಮ ಹಾವನೂರು ಅವರ ಹೆಸರಿನಲ್ಲಿ ನೀಡುವ ವಿಶೇಷ ಪ್ರಶಸ್ತಿಗಳೂ ಲಭಿಸಿವೆ.

‘ಐದೂವರೆ ವರ್ಷಗಳ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಮೊದಲನೇ ವರ್ಷದಿಂದಲೂ ಓದಿನಲ್ಲಿ ಸ್ಥಿರತೆ ಕಾಪಾಡಿಕೊಂಡು ಬಂದಿದ್ದೆ. ಅಂತಿಮ ವರ್ಷದಲ್ಲಿ ಪಠ್ಯದ ಜೊತೆಗೆ ಪ್ರಾಯೋಗಿಕ ಪರೀಕ್ಷೆಯೂ ಇತ್ತು. ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಒತ್ತಡ ಮುಕ್ತಳಾಗುತ್ತಿದ್ದೆ’ ಎಂದು ಪ್ರತೀಕ್ಷಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಸಮಯದಲ್ಲಿ ಪಿಪಿಇ ಕಿಟ್‌ಗಳನ್ನು ಧರಿಸಿಕೊಂಡೇ ಕೆಲಸ ಮಾಡುವುದು ಸವಾಲೆನಿಸಿತ್ತು. ಇದು ನಮಗೆ ಹೊಸ ಅನುಭವವನ್ನೂ ನೀಡಿತು’ ಎಂದು ಹೇಳಿದರು.

‘ಮಗಳು ಏನೇ ಕೆಲಸ ಮಾಡಿದರೂ ಅದರಲ್ಲಿ ಪರಿಪೂರ್ಣತೆ ಇರುತ್ತಿತ್ತು. ಆಕೆಯ ಸಾಧನೆಯಿಂದ ಹೆಮ್ಮೆಯಾಗಿದೆ’ ಎಂದು ಪ್ರತೀಕ್ಷಾ ಅವರ ತಾಯಿ ಭಾರತಿ ಸಂತಸ ವ್ಯಕ್ತಪಡಿಸಿದರು.

ಭಾಗ್ಯಶ್ರೀ (ಇಎನ್‌ಟಿ), ಅವಂತಿಕ ಸೂದ್‌ (ಅಪ್ತಮಾಲಜಿ), ಎಸ್‌.ಬಿ.ರವೀಶ್‌ (ಫಾರ್ಮಕಾಲಜಿ ಮತ್ತು ಓಬಿಜಿ), ವರ್ಷಾ ರಾವ್‌ (ಫೋರೆನ್ಸಿಕ್‌ ಮೆಡಿಸಿನ್‌), ಕೆ.ಎಂ.ಕಾರ್ತಿಕ್‌ (ಜನರಲ್‌ ಮೆಡಿಸಿನ್‌), ಜಿ.ಅನಂತ್‌ ಹಾಗೂ ಯು.ಎಂ.ಶ್ರೀರಾಘವಿ (ಅನಾಟಮಿ) ಅವರೂ ಚಿನ್ನದ ಪದಕಗಳನ್ನು ಪಡೆದರು.

ಎಸ್‌.ಎಂ.ತೇಜಸ್‌ ಹಾಗೂ ಎನ್‌.ಎಂ.ಶ್ರದ್ಧಾ (ಉತ್ತಮ ಕ್ರೀಡಾಪಟು), ಸಂಜಯ್‌ ಎಂ.ಗೌಡರ್‌ ಮತ್ತು ಶರಣ್ಯಾ ಕೌಶಿಕ್‌ (ಬೆಸ್ಟ್‌ ಔಟ್‌ಗೋಯಿಂಗ್‌ ಆಲ್‌ರೌಂಡರ್‌) ಪ್ರಶಸ್ತಿಗಳನ್ನು ಸ್ವೀಕರಿಸಿದರು. ಒಟ್ಟು 238 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ವಿಜ್ಞಾನಿ ಡಾ.ವಿ.ಕೆ.ಅತ್ರೆ ಹಾಗೂಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್.ದೊರೆಸ್ವಾಮಿ ಇದ್ದರು.

‘ವೈದ್ಯ ಶಿಕ್ಷಣ ವೆಚ್ಚ ಕಡಿಮೆ ಮಾಡಲು ಕ್ರಮ’

‘ವೈದ್ಯಕೀಯ ಶಿಕ್ಷಣವು ದುಬಾರಿಯಾಗಿದೆ. ಇದರ ವೆಚ್ಚ ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

‘ರಾಜ್ಯದಲ್ಲಿ ಒಟ್ಟು 65 ವೈದ್ಯಕೀಯ ಕಾಲೇಜುಗಳಿವೆ. 4 ಸರ್ಕಾರಿ ಕಾಲೇಜುಗಳು ಶೀಘ್ರವೇ ಆರಂಭವಾಗಲಿವೆ. ಖಾಸಗಿ ವಲಯದಲ್ಲಿ 3 ಹೆಚ್ಚುವರಿ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. 9 ಜಿಲ್ಲೆಗಳಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT