ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ ಕಾಮಗಾರಿ | ವಿಚಾರಣೆಗೆ ಮುನ್ನವೇ ಮರಗಳಿಗೆ ಕೊಡಲಿಯೇಟು

ಬನ್ನೇರುಘಟ್ಟ ರಸ್ತೆಯಲ್ಲಿ 30 ಮರ ಕತ್ತರಿಸುವ ಕಾರ್ಯ ಆರಂಭ
Last Updated 8 ಜೂನ್ 2020, 19:35 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಮಾರ್ಗ ನಿರ್ಮಾಣಕ್ಕಾಗಿ ಬನ್ನೇರುಘಟ್ಟ ರಸ್ತೆಯಲ್ಲಿ 30 ಮರಗಳನ್ನು ಕತ್ತರಿಸುವ ಕಾರ್ಯವನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಕೈಗೆತ್ತಿಕೊಂಡಿದೆ.

ಬನ್ನೇರುಘಟ್ಟ ರಸ್ತೆಯಲ್ಲಿ ಜಯನಗರ ಅಗ್ನಿಶಾಮಕ ದಳದ ಕಚೇರಿ ಮತ್ತು ಕಾರ್ಮಿಕ ಭವನದ ಬಳಿ ಇರುವ ಮರಗಳು ‘ಅಭಿವೃದ್ಧಿ’ಗೆ ಬಲಿಯಾಗುತ್ತಿವೆ. ನಗರದಲ್ಲಿ ಮೆಟ್ರೊ ಮಾರ್ಗ ನಿರ್ಮಾಣದ ನೆಪದಲ್ಲಿ ಅನಗತ್ಯವಾಗಿ ಮರಗಳನ್ನು ಕಡಿಯಲಾಗುತ್ತಿದೆ ಎಂದು ಆರೋಪಿಸಿ, ಪರಿಸರಪ್ರೇಮಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಈ ಅರ್ಜಿಯನ್ನು ಜೂನ್‌ 10ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ವಿಚಾರಣೆಗೆ ಮುನ್ನವೇ (ಜೂನ್‌ 7ರಿಂದ) ಮರ ಕಡಿಯುವ ಕೆಲಸವನ್ನು ನಿಗಮ ಆರಂಭಿಸಿದೆ.

ಕಾಮಗಾರಿಗಾಗಿ ಮರಗಳನ್ನು ಕಡಿಯುವುದು ತೀರಾ ಅಗತ್ಯವಿದೆಯೇ, ಸ್ಥಳೀಯವಾಗಿ ಆಕ್ಷೇಪ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಯಾವ ಪ್ರದೇಶದಲ್ಲಿ, ಎಷ್ಟು ಮರಗಳನ್ನು ಕಡಿಯಲಾಗುತ್ತಿದೆ ಎಂಬ ಬಗ್ಗೆ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಮಾಹಿತಿ ಹಾಕಬೇಕು ಎಂದು ಹೈಕೋರ್ಟ್‌ ಸೂಚಿಸಿತ್ತು. ಈ ಕುರಿತು ವರದಿ ನೀಡಲು ಬಿಬಿಎಂಪಿಯ ಉಪಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ. ಚೋಳರಾಜಪ್ಪ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿತ್ತು.

‘ಮೇ 21ಕ್ಕೆ ಮಾಹಿತಿಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಹಾಕಲಾಗಿತ್ತು. ಜೂನ್‌ 6ರವರೆಗೆ ಯಾವುದೇ ಆಕ್ಷೇಪಣೆ ಬರಲಿಲ್ಲ. ಹೀಗಾಗಿ, ಬಿಬಿಎಂಪಿ ವೃಕ್ಷ ಸಮಿತಿ ಮರಗಳನ್ನು ಕಡಿಯಲು ಬಿಎಂಆರ್‌ಸಿಎಲ್‌ಗೆ ಒಪ್ಪಿಗೆ ನೀಡಿದೆ’ ಎಂದು ಚೋಳರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲು ಮನಸ್ಸಿಗೆ ಬಂದಂತೆ ಮರಗಳನ್ನು ಕಡಿಯಲಾಗುತ್ತಿತ್ತು. ಆದರೆ, ನಾವು ನ್ಯಾಯಾಲಯದ ಮೊರೆ ಹೋದ ನಂತರ ಈಗ ಯಾವ ಪ್ರದೇಶದಲ್ಲಿ, ಎಷ್ಟು ಮರಗಳನ್ನು ಕಡಿಯಲಾಗುತ್ತಿದೆ ಮತ್ತು ಎಷ್ಟು ಮರಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂಬ ಮಾಹಿತಿಯನ್ನು ವೆಬ್‌ಸೈಟ್‌ಗೆ ಹಾಕಲಾಗುತ್ತಿದೆ. ಅಷ್ಟರಮಟ್ಟಿಗೆ ನಾವು ಯಶಸ್ವಿಯಾಗಿದ್ದೇವೆ’ ಎಂದು ಅರ್ಜಿದಾರರಲ್ಲಿ ಒಬ್ಬರಾದ ವಿಜಯ್‌ ನಿಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮರ ಕಡಿಯಲು ಆರಂಭಿಸಿದ ನಂತರ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿದಾಗ ಅಹವಾಲು ಸಲ್ಲಿಸಿದ್ದರೆ ಹೋರಾಟ ಮುಂದುವರಿಸಬಹುದಿತ್ತು. ಈಗಲೂ ಅನವಶ್ಯಕವಾಗಿ ಮರ ಕಡಿಯಲಾಗುತ್ತಿದೆ ಎನಿಸಿದರೆ, ದೂರು ನೀಡಲು ಮುಂದೆ ಬಂದರೆ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ’ ಎಂದು ಅವರು ಹೇಳಿದರು.

ರೀಚ್‌ 6 ಕಾಮಗಾರಿ:ಮೆಟ್ರೊ ಎರಡನೇ ಹಂತದ ಗೊಟ್ಟಿಗೆರೆ–ನಾಗವಾರದ ರೀಚ್‌–6 ಮಾರ್ಗದ ನಿರ್ಮಾಣ ಕಾರ್ಯ ಈ ಪ್ರದೇಶದಲ್ಲಿ ನಡೆಯುತ್ತಿದೆ. ಜಯನಗರ ಅಗ್ನಿಶಾಮಕ ದಳದ ಕಚೇರಿ ಮುಂಭಾಗದಿಂದ ಡೇರಿ ವೃತ್ತದ ನೆಲದಡಿ ನಿಲ್ದಾಣವನ್ನು ಸಂಪರ್ಕಿಸುವ ಮಾರ್ಗ ಇದಾಗಿದೆ.

**

ಹೈಕೋರ್ಟ್‌ನ ನಿರ್ದೇಶನದಂತೆ ಎಲ್ಲ ಒಪ್ಪಿಗೆ ಪಡೆದ ನಂತರವೇ ಮರ ಕಡಿಯುವ ಕಾರ್ಯ ಆರಂಭಿಸಿದ್ದೇವೆ. ಅರ್ಜಿದಾರರು ಈ ಕುರಿತು ಯಾವುದೇ ತಡೆಯಾಜ್ಞೆ ತಂದಿಲ್ಲ.
-ಅಜಯ್‌ ಸೇಠ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT