ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಜಿ ರಸ್ತೆ–ಬೈಯಪ್ಪನಹಳ್ಳಿ ಮಧ್ಯೆ ಮೆಟ್ರೊ ವ್ಯತ್ಯಯ: ಬಸ್‌ನಲ್ಲಿ ದಟ್ಟಣೆ

ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಬಿಎಂಆರ್‌ಸಿಎಲ್‌
Last Updated 3 ಆಗಸ್ಟ್ 2019, 19:53 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ವಹಣಾ ಕಾರ್ಯದ ನಿಮಿತ್ತ ಎಂ.ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಶನಿವಾರ ರಾತ್ರಿ 9.30ರಿಂದ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ಮಾರ್ಗದತ್ತ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್‌ ಸೌಲಭ್ಯ ಕಲ್ಪಿಸುವುದು ಸ್ವಲ್ಪ ವಿಳಂಬವಾಗಿದ್ದರಿಂದ ಜನದಟ್ಟಣೆ ಉಂಟಾಯಿತು.

‘ಮೆಟ್ರೊ ಸಂಚಾರ ಸ್ಥಗಿತಗೊಳಿಸುವುದು ಮೊದಲೇ ತಿಳಿದಿದ್ದರೂ, ಸಾಕಷ್ಟು ಸಂಖ್ಯೆಯಲ್ಲಿ ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಕಲ್ಪಿಸಿಲ್ಲ. ಒಮ್ಮೆ ರೈಲು ಬಂದರೆ ಎರಡು ಬಸ್‌ ಹಿಡಿಯುವಷ್ಟು ಪ್ರಯಾಣಿಕರು ಬರುತ್ತಾರೆ. ಹೆಚ್ಚುವರಿಯಾಗಿ ನಾಲ್ಕೈದು ಬಸ್ಸುಗಳನ್ನು ನಿಯೋಜಿಸಿದ್ದರೆ ಅನುಕೂಲವಾಗುತ್ತಿತ್ತು’ ಎಂದು ಕೆ.ಆರ್. ಪುರಕ್ಕೆ ತೆರಳಬೇಕಿದ್ದ ವಿಜಯ್‌ ಹೇಳಿದರು.

‘ಚಿಕ್ಕಮಕ್ಕಳು ಮತ್ತು ಲಗೇಜ್‌ ಕೈಯಲ್ಲಿವೆ. ಬಸ್ಸುಗಳು ಭರ್ತಿಯಾಗಿರುವುದರಿಂದ ಹೋಗಲು ಸಾಧ್ಯವಾಗುತ್ತಿಲ್ಲ. ಕ್ಯಾಬ್‌ಗೆ ಹೋಗುವುದು ಅನಿವಾರ್ಯವಾಗಿದೆ’ ಎಂದು ಬೈಯಪ್ಪನಹಳ್ಳಿಯ ವಿಜಯಲಕ್ಷ್ಮಿ ಹೇಳಿದರು.

‘9.30ರಿಂದಲೇ ಬಸ್ಸುಗಳನ್ನು ಕಲ್ಪಿಸಲಾಗಿದೆ. ಜನ ಹೆಚ್ಚಾದಂತೆ ಸಂಖ್ಯೆಯನ್ನೂ ಹೆಚ್ಚು ಮಾಡುತ್ತಿದ್ದೇವೆ. ಒಂದೇ ಬಾರಿಗೆ ಹೆಚ್ಚು ಬಸ್ಸುಗಳನ್ನು ತಂದು ರಸ್ತೆಯಲ್ಲಿ ನಿಲ್ಲಿಸಿದರೆ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಜನ ಬಂದಂತೆ ಬಸ್ಸುಗಳನ್ನು ತರಿಸಲಾಗುತ್ತಿದೆ’ ಎಂದು ಬಿಎಂಟಿಸಿಯ ಸಹಾಯಕ ಸಾರಿಗೆ ನಿರೀಕ್ಷಕ ದೇವರಾಜ್‌ ತಿಳಿಸಿದರು.

ಎಂ.ಜಿ. ರಸ್ತೆ ನಿಲ್ದಾಣದ ಎದುರು ಜನದಟ್ಟಣೆ ಉಂಟಾಗಿತ್ತು. ವಾಹನ ಸಂಚಾರಕ್ಕೂ ತೊಂದರೆಯಾಯಿತು.10.45ರ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳ ವ್ಯವಸ್ಥೆ ಕಲ್ಪಿಸಿದ ನಂತರ, ಸಂಚಾರ ಸುಗಮವಾಯಿತು.

ಭಾನುವಾರ ಬೆಳಿಗ್ಗೆ 11ರವರೆಗೂ ಎಂ.ಜಿ. ರಸ್ತೆ ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣಗಳ ನಡುವೆ ಬಸ್ಸುಗಳ ಸೇವೆ ಲಭ್ಯವಿರುತ್ತದೆ ಎಂದು ದೇವರಾಜ್‌ ಹೇಳೀದರು.

ಉಚಿತ ಸೇವೆ ಗೊಂದಲ!
ಕಳೆದ ಬಾರಿ ಮೆಟ್ರೊ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದಾಗ, ಬಿಎಂಟಿಸಿಯಿಂದ ಬಸ್ಸುಗಳನ್ನು ಬಾಡಿಗೆ ಪಡೆದು ಬಿಎಂಆರ್‌ಸಿಎಲ್‌ ಉಚಿತ ಸೇವೆ ಒದಗಿಸಿತ್ತು. ಆದರೆ, ಶನಿವಾರ ಉಚಿತ ಸೇವೆ ಇರಲಿಲ್ಲ.

ಮೆಟ್ರೊದಿಂದ ಇಳಿದು ಬಂದ ಪ್ರಯಾಣಿಕರು ಬಸ್ಸು ಹತ್ತಿದ ನಂತರ, ‘ಪ್ರಯಾಣ ಉಚಿತವಲ್ಲವೇ, ಟಿಕೆಟ್‌ ಪಡೆದುಕೊಳ್ಳಲೇಬೇಕೆ’ ಎಂದು ಪ್ರಶ್ನಿಸುವುದು ಸಾಮಾನ್ಯವಾಗಿತ್ತು. ಈ ಬಗ್ಗೆ ಬಿಎಂಟಿಸಿ ಸಿಬ್ಬಂದಿಗೂ ಸರಿಯಾದ ಮಾಹಿತಿ ಇರಲಿಲ್ಲ. ಮೇಲಧಿಕಾರಿಗಳಿಗೆ ಕರೆ ಮಾಡಿ ಸ್ಪಷ್ಟನೆ ಪಡೆದುಕೊಂಡ ಬಿಎಂಟಿಸಿ ನಿರ್ವಾಹಕರು, ಟಿಕೆಟ್‌ ಪಡೆದುಕೊಳ್ಳಬೇಕು ಎಂದು ಪ್ರಯಾಣಿಕರಿಗೆ ಹೇಳಿದರು.

‘ಉಚಿತ ಸೇವೆ ನೀಡುವ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಬಿಎಂಆರ್‌ಸಿಎಲ್‌ನ ಎಂ.ಜಿ. ರಸ್ತೆ ನಿಲ್ದಾಣ ಉಸ್ತುವಾರಿ ಅರುಣ್‌ ತಿಳಿಸಿದರು.

ಎಂ.ಜಿ. ರಸ್ತೆ ನಿಲ್ದಾಣದ ಎದುರು ಪರ್ಯಾಯ ವ್ಯವಸ್ಥೆಗೆ ಕಾದು ಕುಳಿತಿದ್ದ ಪ್ರಯಾಣಿಕರು
ಎಂ.ಜಿ. ರಸ್ತೆ ನಿಲ್ದಾಣದ ಎದುರು ಪರ್ಯಾಯ ವ್ಯವಸ್ಥೆಗೆ ಕಾದು ಕುಳಿತಿದ್ದ ಪ್ರಯಾಣಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT