ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರ ಸಮಸ್ಯೆಗೆ ಸ್ಪಂದನೆ ಇಲ್ಲವೇ? ಮೆಟ್ರೊ ಸಮಯ ವಿಸ್ತರಣೆಗೆ ಜನರ ಆಗ್ರಹ

ಮೆಟ್ರೊ ರೈಲು ಸಂಚಾರ ಸಮಯ ವಿಸ್ತರಣೆಗೆ ಸಾರ್ವಜನಿಕರ ಆಗ್ರಹ
Last Updated 13 ಸೆಪ್ಟೆಂಬರ್ 2021, 21:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮೆಟ್ರೊ ರೈಲು ಸಂಚಾರ ಸಮಯವನ್ನು ವಿಸ್ತರಿಸಬೇಕು ಎಂಬ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮನವಿಗೆ ಸ್ಪಂದಿಸದ ಬೆಂಗಳೂರು ಮೆಟ್ರೊ ರೈಲು ನಿಗಮ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸದ್ಯ, ನಿತ್ಯ ಎರಡು ಲಕ್ಷಕ್ಕೂ ಹೆಚ್ಚು ಜನ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ನಿಂತುಕೊಂಡು ಹೋಗುವಷ್ಟು ದಟ್ಟಣೆ ಉಂಟಾಗುತ್ತಿದೆ. ಆದರೂ, ಕರ್ಫ್ಯೂ ನೆಪದಲ್ಲಿ 8 ಗಂಟೆಗೇ ಮೆಟ್ರೊ ಸೇವೆ ಸ್ಥಗಿತಗೊಳಿಸುತ್ತಿರುವುದು ಸರಿಯಲ್ಲ ಎಂಬುದು ಬಳಕೆದಾರರ ದೂರು.

‘ಶಾಲಾ–ಕಾಲೇಜು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಸೇರಿದಂತೆ ಎಲ್ಲವೂ ಕಾರ್ಯಾರಂಭ ಮಾಡಿವೆ. ಆರ್ಥಿಕ ಚಟುವಟಿಕೆಗಳೂ ಸರಾಗವಾಗಿಯೇ ನಡೆಯುತ್ತಿವೆ. ರೈಲು, ಬಸ್‌ಗಳು ಎಂದಿನಂತೆ ಸಂಚರಿಸುತ್ತಿರುವಾಗ ಮೆಟ್ರೊ ರೈಲು ಸಂಚಾರ ಸಮಯ ಮಾತ್ರ ಕಡಿತಗೊಳಿಸಿರುವುದಕ್ಕೆ ಅರ್ಥವಿದೆಯೇ’ ಎಂದು ಪ್ರಯಾಣಿಕ ಡಾ. ಎ. ಭಾನು ಪ್ರಶ್ನಿಸಿದರು.

ಹಾಗೇ ಇವೆ ಸ್ಟಿಕ್ಕರ್‌

ಬಹುತೇಕ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದರೂ, ಕೆಲವೊಂದು ನಿಯಮಗಳನ್ನು ಬಿಎಂಆರ್‌ಸಿಎಲ್ ಇನ್ನೂ ಸಡಿಲಿಸಿಲ್ಲ. ಶೇ 100ರಷ್ಟು ಆಸನ ಸಾಮರ್ಥ್ಯದೊಂದಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಆದರೂ, ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ರೈಲಿನ ಸೀಟುಗಳ ಮೇಲೆ ಅಂಟಿಸಿದ್ದ ‘ಕುಳಿತುಕೊಳ್ಳುವಂತಿಲ್ಲ’ (ಡು ನಾಟ್ ಸಿಟ್‌) ಸ್ಟಿಕ್ಕರ್‌ಗಳನ್ನೂ ಇನ್ನೂ ತೆಗೆದು ಹಾಕಿಲ್ಲ.

‘ಯಾವುದೇ ಆಸನದಲ್ಲಿ ಕುಳಿತುಕೊಳ್ಳಲು ಅವಕಾಶವಿದೆ ಎಂದು ಮೆಟ್ರೊ ರೈಲಿನೊಳಗೆ ಉದ್ಘೋಷಣೆ ಮಾಡಲಾಗುತ್ತದೆ. ಆದರೆ, ಸೀಟುಗಳ ಮೇಲೆ ಈ ರೀತಿ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ. ಇದರಿಂದ ಗೊಂದಲ ಉಂಟಾಗುತ್ತಿದೆ’ ಎಂದು ಪ್ರಯಾಣಿಕರಾದ ಕೆ.ಪಿ. ನಾಗವೇಣಿ ಹೇಳಿದರು.

‘ಒಂದು ಆಸನ ಬಿಟ್ಟು ಮತ್ತೊಂದು ಆಸನದಲ್ಲಿ ಈ ರೀತಿಯ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ. ಹೀಗೆ ಸ್ಟಿಕ್ಕರ್‌ ಅಂಟಿಸಲಾಗಿರುವ ಸೀಟುಗಳ ಮೇಲೆ ಕೆಲವರು ಬ್ಯಾಗ್‌ಗಳನ್ನು ಇಟ್ಟಿರುತ್ತಾರೆ. ಅಂತಹ ಸೀಟುಗಳಲ್ಲಿ ಕುಳಿತುಕೊಳ್ಳಬಹುದೇ, ಇಲ್ಲವೇ ಎಂಬ ಗೊಂದಲ ಉಂಟಾಗುತ್ತಿದೆ. ಪರಿಸ್ಥಿತಿಗೆ ತಕ್ಕಂತೆ ಅಥವಾ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಯೋಚನೆಯನ್ನೇ ನಿಗಮದ ಅಧಿಕಾರಿಗಳು ಮಾಡುವುದಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪರಿಸ್ಥಿತಿಗೆ ತಕ್ಕಂತೆ ಬದಲಾಗಿ !

ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದಾಗ ಸರ್ಕಾರ ಕೆಲವೊಂದು ನಿರ್ಬಂಧಗಳನ್ನು ಹೇರಿತ್ತು. ಈಗ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ಈಗಲೂ ಮೆಟ್ರೊ ರೈಲು ಸಂಚಾರ ಸಮಯವನ್ನು ವಿಸ್ತರಿಸದೇ ಇರುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಪರಿಸ್ಥಿತಿಗೆ ತಕ್ಕಂತೆ ನಿಯಮಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಸಾರ್ವಜನಿಕರಿಗೆ ಸೇವೆ ನೀಡಲೆಂದೇ ನಿಗಮ ಇರುವುದು. ಅಗತ್ಯವಿರುವ ಸಂದರ್ಭದಲ್ಲಿಯೇ ಸೇವೆ ಸಿಗದಿದ್ದರೆ ಹೇಗೆ ?

ಶ್ರೀಲಕ್ಷ್ಮಿ, ಸಿವಿಲ್‌ ಎಂಜಿನಿಯರ್‌

***

ರೈಲು, ಬಸ್‌ಗಳ ಸಂಚಾರಕ್ಕೆ ಕೋವಿಡ್ ಅಡ್ಡಿ ಇಲ್ಲವೇ ?

ಮೆಟ್ರೊ ರೈಲು ಸಂಚಾರದ ಸಮಯವನ್ನು ಕಡಿತಗೊಳಿಸಿರುವ ನಿಗಮದ ತರ್ಕವೇ ಅರ್ಥವಾಗುತ್ತಿಲ್ಲ. ಬಸ್‌ ಮತ್ತು ರೈಲುಗಳಿಗಿಂತ ಮೆಟ್ರೊ ರೈಲುಗಳಲ್ಲಿ ಪ್ರಯಾಣಿಕರು ಹೆಚ್ಚು ಅಂತರ ಕಾಪಾಡಿಕೊಳ್ಳಲು ಸಾಧ್ಯವಿದೆ. ಆದರೆ, ಆ ಎರಡು ಸಾರಿಗೆಗಳಲ್ಲಿ ರಾತ್ರಿ ವೇಳೆ ಪ್ರಯಾಣಕ್ಕೆ ಅವಕಾಶ ನೀಡಿ, ಮೆಟ್ರೊ ರೈಲಿನಲ್ಲಿ ಸಂಚಾರ ಕಡಿತಗೊಳಿಸಿರುವುದು ಮೂರ್ಖತನದ ನಿರ್ಧಾರ.

ಸುಪ್ರಜಾ, ಖಾಸಗಿ ಕಂಪನಿ ಉದ್ಯೋಗಿ

***

ಪ್ರಯಾಣಿಕರ ಕೂಗಿಗೆ ಸ್ಪಂದನೆ ಇಲ್ಲ

ಬಿಎಂಆರ್‌ಸಿಎಲ್‌ನವರಿಗೆ ಎಲ್ಲವನ್ನೂ ಹತ್ತು–ಹನ್ನೊಂದು ಸಲ ಹೇಳಿದರೆ ಮಾತ್ರ ಅರ್ಥವಾಗುತ್ತದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬುದು ಗೊತ್ತಿದ್ದರೂ ಸಂಚಾರ ಸಮಯವನ್ನು ವಿಸ್ತರಿಸದಿರುವುದು ನೋಡಿದರೆ ಪ್ರಯಾಣಿಕರ ಬಗ್ಗೆ ಅವರ ಕಾಳಜಿ ಎಂಥದ್ದು ಎಂಬುದು ಅರ್ಥವಾಗುತ್ತದೆ.

ಆರ್. ಎಸ್. ವರುಣ್‌ಕುಮಾರ್, ಟೆಕ್ಕಿ

***

ಹಣ, ಸಮಯ ವ್ಯರ್ಥ

ನಾನು ರಾಜಾಜಿನಗರದಿಂದ ಬನಶಂಕರಿ ಪ್ರಯಾಣಿಸುತ್ತಿರುತ್ತೇನೆ. ಎಂಟು ಗಂಟೆಯೊಳಗೆ ಕಚೇರಿ ಕೆಲಸ ಮುಗಿಯುವುದಿಲ್ಲ. ಮೆಟ್ರೊ ರೈಲು ಸಂಚಾರ ಇರದ ಕಾರಣ ಈ ಮಾರ್ಗದಲ್ಲಿ ರಾತ್ರಿ 8ರ ನಂತರ ಸಂಚಾರ ದಟ್ಟಣೆಯೂ ಹೆಚ್ಚಾಗಿರುತ್ತದೆ. ಪರಿಸ್ಥಿತಿಯ ಲಾಭ ಪಡೆಯುವ ಆಟೊ ಮತ್ತು ಟ್ಯಾಕ್ಸಿ ಚಾಲಕರು ದುಪ್ಪಟ್ಟು ಹಣ ಕೇಳುತ್ತಾರೆ. ಮೆಟ್ರೊ ರೈಲು ಸೇವೆ ಇಲ್ಲದೆ ಹಣ ಮತ್ತು ಸಮಯ ವ್ಯರ್ಥವಾಗುತ್ತಿದೆ.

ಎಸ್. ವಿನಯ್‌ಕುಮಾರ್, ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT