ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ: ಆತ್ಮಹತ್ಯೆ ಯತ್ನ ತಪ್ಪಿಸಲಿದೆ ಪಿಎಸ್‌ಡಿ

ಎರಡನೇ ಹಂತದ ಸುರಂಗ ಮಾರ್ಗದ 12 ನಿಲ್ದಾಣಗಳಲ್ಲಿ ಅಳವಡಿಕೆ
Last Updated 15 ಜನವರಿ 2019, 4:46 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಸುರಂಗ ಮಾರ್ಗದ ನಿಲ್ದಾಣಗಳಲ್ಲಿ ಪ್ಲ್ಯಾಟ್‌ಫಾರಂ ಸ್ಕ್ರೀನ್‌ಡೋರ್‌ (ಪಿಎಸ್‌ಡಿ) ವ್ಯವಸ್ಥೆ ಕಲ್ಪಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ಮುಂದಾಗಿದೆ. ಈ ವ್ಯವಸ್ಥೆ ಪ್ಲ್ಯಾಟ್‌ಫಾರಂಗಳ ಸುರಕ್ಷತೆಯನ್ನು ಹೆಚ್ಚಿಸುವುದೂ ಅಲ್ಲದೇ, ಪ್ರಯಾಣಿಕರು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುವುದನ್ನು ತಪ್ಪಿಸಲಿದೆ.

ನ್ಯಾಷನಲ್‌ ಕಾಲೇಜು ಮೆಟ್ರೊ ನಿಲ್ದಾಣದಲ್ಲಿ ಇದೇ 11ರಂದು ಯುವಕನೊಬ್ಬ ಮೆಟ್ರೊ ರೈಲು ನಿಲ್ದಾಣವನ್ನು ತಲುಪುತ್ತಿದ್ದಂತೆಯೇ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಅದೃಷ್ಟವಶಾತ್‌ ಹಳಿಗಳ ನಡುವೆ ಬಿದ್ದಿದ್ದರಿಂದ ಆತ ಬದುಕುಳಿದಿದ್ದ. ಈ ಘಟನೆ ಬಳಿಕ ಪಿಎಸ್‌ಡಿ ಅಳವಡಿಕೆ ಬಗ್ಗೆ ನಿಗಮವು ಗಂಭೀರ ಚಿಂತನೆ
ನಡೆಸಿದೆ.

‘ಎರಡನೇ ಹಂತದಲ್ಲಿ ಡೇರಿ ವೃತ್ತದಿಂದ ನಾಗವಾರವರೆಗೆ ನಿರ್ಮಾಣವಾಗುವ ಸುರಂಗ ಮಾರ್ಗದ 12 ನಿಲ್ದಾಣಗಳಲ್ಲಿ ಪಿಎಸ್‌ಡಿ ವ್ಯವಸ್ಥೆ ಅಳವಡಿಸಲಿದ್ದೇವೆ. ಈ ವ್ಯವಸ್ಥೆ ಅಳವಡಿಸಿದರೆ ಪ್ರಯಾಣಿಕರು ಹಳಿಗೆ ಬೀಳುವುದಕ್ಕೆ ಅವಕಾಶವೇ ಇರುವುದಿಲ್ಲ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದು ಹೊಸ ವ್ಯವಸ್ಥೆ ಏನಲ್ಲ. ಈಗಾಗಲೇ ಅನೇಕ ದೇಶಗಳಲ್ಲಿ ಇದು ಬಳಕೆಯಲ್ಲಿದೆ. ಸುರಂಗ ಮಾರ್ಗದ ನಿಲ್ದಾಣದಲ್ಲಿ ಪಿಎಸ್‌ಡಿ ಅಳವಡಿಸುವುದಕ್ಕೆ ಹೆಚ್ಚು ವೆಚ್ಚವಾಗುವುದೇನೋ ನಿಜ. ಆದರೆ, ಈ ವ್ಯವಸ್ಥೆ ಅಳವಡಿಕೆಯಿಂದ ಈ ನಿಲ್ದಾಣಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಗೆ ಬಳಕೆಯಾಗುವ ವಿದ್ಯುತ್‌ ಉಳಿತಾಯವೂ ಆಗುತ್ತದೆ. ಜತೆಗೆ ಸುರಕ್ಷತೆಯೂ ಹೆಚ್ಚುತ್ತದೆ. ಹಾಗಾಗಿ ಇದರಿಂದ ದೂರಗಾಮಿ ಪ್ರಯೋಜನವಿದೆ’ ಎಂದು ಅವರು ವಿವರಿಸಿದರು.

ನ್ಯಾಷನಲ್‌ ಕಾಲೇಜು ನಿಲ್ದಾಣದಲ್ಲಿ ನಡೆದ ಘಟನೆ ನಡೆದ ಬಳಿಕ ಎಲ್ಲ ಮೆಟ್ರೊ ನಿಲ್ದಾಣಗಳಲ್ಲೂ ಪಿಎಸ್‌ಡಿ ವ್ಯವಸ್ಥೆ ಒದಗಿಸಬೇಕು ಎಂಬ ಬೇಡಿಕೆ ಹೆಚ್ಚಿದೆ.

‘ನವದೆಹಲಿ ಹಾಗೂ ಚೆನ್ನೈ ಮೆಟ್ರೊಗಳಲ್ಲಿ ಪಿಎಸ್‌ಡಿ ವ್ಯವಸ್ಥೆ ಈಗಾಗಲೇ ಇದೆ. ಮೆಟ್ರೊ ಯೋಜನೆ ರೂಪಿಸುವಾಗಲೇ ಈ ಬಗ್ಗೆ ಮುಂದಾಲೋಚನೆಮಾಡುತ್ತಿದ್ದರೆ ಇಂತಹಘಟನೆಗಳನ್ನುತಡೆಯಲುಸಾಧ್ಯವಿತ್ತು. ಇನ್ನುಕೂಡಾ ಕಾಲ ಮಿಂಚಿಲ್ಲ. ಎಲ್ಲ ಪ್ಲ್ಯಾಟ್‌ಫಾರಂಗಳಲ್ಲೂ ಪಿಎಸ್‌ಡಿ ವ್ಯವಸ್ಥೆ ಕಲ್ಪಿಸಬೇಕು’ ಎಂದು ಕರ್ನಾಟಕ ರೈಲ್ವೆ ವೇದಿಕೆ ಕೆ.ಎನ್‌.ಕೃಷ್ಣಪ್ರಸಾದ್‌ ಒತ್ತಾಯಿಸಿದರು.

‘ಎಲ್ಲ ರೈಲುಗಳನ್ನು ಆರು ಬೋಗಿಯ ರೈಲುಗಳನ್ನಾಗಿ ಪರಿವರ್ತಿಸಿದ ಬಳಿಕ ಹಾಗೂ ಎರಡನೇ ಹಂತದ ವಿಸ್ತರಣಾ ಕಾಮಗಾರಿ

ಪೂರ್ಣಗೊಂಡು ವೈಟ್‌ಫೀಲ್ಡ್‌ನಿಂದ ಕೆಂಗೇರಿವರೆಗೆ ಮೆಟ್ರೊ ಸಂಪರ್ಕ ಸಾಧ್ಯವಾದ ಬಳಿಕ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ. ಆಗ ಸುರಕ್ಷತಾ ಸಮಸ್ಯೆಗಳು ಇನ್ನಷ್ಟು ಹೆಚ್ಚಲಿವೆ. ಹಾಗಾಗಿ ನಿಗಮದವರು ಈ ಬಗ್ಗೆ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು’ ಎಂದು ಅವರು ಸಲಹೆ ನೀಡಿದರು.

‘ಎಲ್ಲ ನಿಲ್ದಾಣಗಳಗಳಲ್ಲೂ ಈ ವ್ಯವಸ್ಥೆ ಅಳವಡಿಸಬಹುದು. ಆದರೆ, ಪ್ಲ್ಯಾಟ್‌ಫಾರಂಗಳಲ್ಲಿ ಸದ್ಯ ಅಷ್ಟೊಂದು ಸಂಖ್ಯೆಯಲ್ಲಿ ಪ್ರಯಾಣಿಕರ ದಟ್ಟಣೆ ಇಲ್ಲ. ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಎಲ್ಲಾ ನಿಲ್ದಾಣಗಳಲ್ಲೂ ಪಿಎಸ್‌ಡಿ ವ್ಯವಸ್ಥೆ ಅಳವಡಿಸುತ್ತೇವೆ’ ಎಂದು ಚೌಹಾಣ್‌ ತಿಳಿಸಿದರು.

ನ್ಯಾಷನಲ್‌ ಕಾಲೇಜು ನಿಲ್ದಾಣದಲ್ಲಿ ನಡೆದ ಘಟನೆ ಮರುಕಳಿಸದಂತೆ ತಡೆಯುವುದು ಬಿಎಂಆರ್‌ಸಿಎಲ್‌ ಪಾಲಿಗೂ ಸವಾಲಿನ ವಿಷಯವಾಗಿದೆ.

‘ನಿಲ್ದಾಣಗಳಲ್ಲಿ ಸುರಕ್ಷತೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದೇವೆ. ಶೀಘ್ರವೇ ಈ ಬಗ್ಗೆ ನಿರ್ಧಾರಕ್ಕೆ ಬರಲಿದ್ದೇವೆ’ ಎಂದು ಚೌಹಾಣ್‌ ತಿಳಿಸಿದರು.

ಏನಿದು ಪ್ಲ್ಯಾಟ್‌ಫಾರಂ ಸ್ಕ್ರೀನ್‌ಡೋರ್

ಪ್ಲ್ಯಾಟ್‌ಫಾರಂ ನೆಲದಿಂದ ಚಾವಣಿವರೆಗೆ ಸಂಪೂರ್ಣ ಅಡ್ಡಗೋಡೆ ನಿರ್ಮಿಸಿ ರೈಲು ಬಂದು ನಿಂತಾಗ ಮಾತ್ರ ಬಾಗಿಲು ತೆರೆಯುವಂತಹ ವ್ಯವಸ್ಥೆಯೇ ಪಿಎಸ್‌ಡಿ. ಫ್ಲ್ಯಾಟ್‌ಫಾರಂನ ಬಾಗಿಲು ಮುಚ್ಚದ ಹೊರತು ರೈಲು ಮುಂದಕ್ಕೆ ಚಲಿಸುವುದಿಲ್ಲ. ಹಾಗಾಗಿ ಯಾವುದೇ ವ್ಯಕ್ತಿ ಹಳಿಗೆ ಬೀಳುವ ಸಾಧ್ಯತೆ ಇರುವುದಿಲ್ಲ.

ಪ್ರಯಾಣಿಕರು ಹಳಿಯ ಮೇಳೆ ಬೀಳುವುದನ್ನು ತಡೆಯಲು ಪ್ಲ್ಯಾಟ್‌ಫಾರಂ ಎಡ್ಜ್‌ ಡೋರ್‌ (ಪಿಇಡಿ) ವ್ಯವಸ್ಥೆಯನ್ನೂ ಕೆಲವು ಮೆಟ್ರೊ ನಿಲ್ದಾಣಗಳಲ್ಲಿ ಬಳಸಲಾಗುತ್ತದೆ. ಪಿಇಡಿ ವ್ಯವಸ್ಥೆಯಲ್ಲಿ ನೆಲದಿಂದ ಚಾವಣಿವರೆಗೆ ಅಡ್ಡಗೋಡೆ ನಿರ್ಮಿಸುವ ಬದಲು ಅರ್ಧದವರೆಗೆ ಮಾತ್ರ ತಡೆಗೋಡೆ ನಿರ್ಮಿಸಲಾಗುತ್ತದೆ. ಪಿಎಸ್‌ಡಿಗೆ
ಹೋಲಿಸಿದರೆ ಇವುಗಳ ಅಳವಡಿಕೆಗೆ ಕಡಿಮೆ
ವೆಚ್ಚ ಸಾಕು.

ಅನುಕೂಲಗಳೇನು?

* ಹೆಚ್ಚು ಸುರಕ್ಷಿತ

* ಪ್ರಯಾಣಿಕರು ಹಳಿಗೆ ಬಿದ್ದು ಅಪಘಾತ ಉಂಟಾಗುವುದನ್ನು ತಡೆಯಲು ಸಹಕಾರಿ

* ಆತ್ಮಹತ್ಯೆ ಪ್ರಯತ್ನಗಳನ್ನು ತಡೆಯುತ್ತವೆ

* ನಿಲ್ದಾಣದ ಒಳಗೆ ಹವಾನಿಯಂತ್ರಣ ವ್ಯವಸ್ಥೆ ನಿರ್ವಹಣೆಗೂ (ವಿಶೇಷವಾಗಿ ಸುರಂಗ ಮಾರ್ಗಗಳಲ್ಲಿ) ಪ್ರಯೋಜನಕಾರಿ

* ಪ್ಲ್ಯಾಟ್‌ಫಾರಂ ನಿರ್ವಹಣೆಗೆ ಕಡಿಮೆ ಮಾನವ ಸಂಪನ್ಮೂಲ (ಭದ್ರತಾ ಸಿಬ್ಬಂದಿ) ಸಾಕಾಗುತ್ತದೆ

* ಹಳಿ ಮೇಲೆ ಕಸ ಬೀಳುವುದನ್ನು ತಡೆಯುತ್ತದೆ. (ಹೈವೋಲ್ಟೇಜ್‌ನ ವಿದ್ಯುತ್‌ ಮಾರ್ಗವೂ ಹಳಿಯ
ಪಕ್ಕ ಇರುವುದರಿಂದ ಕೆಲವೊಮ್ಮೆ ಅದರ ಮೇಲೆ ಕಸ ಬಿದ್ದು ಬೆಂಕಿ ಉಂಟಾಗುವ ಅಪಾಯವೂ
ಇರುತ್ತದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT