ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿಗಿಳಿದ ಮೆಟ್ರೊ ರೈಲು: ಬೆಂಗಳೂರಿನಲ್ಲಿ ಸಂಚಾರ ಆರಂಭ

Last Updated 21 ಜೂನ್ 2021, 5:50 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್ ಡೌನ್ ಕಾರಣ ಎರಡು ತಿಂಗಳು ಸ್ಥಗಿತಗೊಂಡಿದ್ದ ಮೆಟ್ರೊ ರೈಲುಗಳು ಸೋಮವಾರ ಹಳಿಗಿಳಿದವು. ಬೆಳಿಗ್ಗೆ 7ರಿಂದಲೇ ಸಂಚಾರ ಆರಂಭವಾಯಿತು. ಹಸಿರು ಮತ್ತು ನೇರಳೆ ಮಾರ್ಗಗಳೆರಡಲ್ಲೂ ನಿರೀಕ್ಷಿಸಿದಷ್ಟು ಪ್ರಯಾಣಿಕರು ಇರಲಿಲ್ಲ. ಮೆಜೆಸ್ಟಿಕ್ ನಿಲ್ದಾಣ ಹೊರತು ಪಡಿಸಿ, ಉಳಿದ ನಿಲ್ದಾಣಗಳಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರಿದ್ದರು.

ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಮೆಟ್ರೊ ನಿಲ್ದಾಣ ಮತ್ತು ರೈಲುಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ.

ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷಿಸಲು ಸ್ವಯಂಚಾಲಿತ ಯಂತ್ರಗಳನ್ನು ಅಳವಡಿಸಲಾಗಿದೆ. ಯಂತ್ರದ ಬಳಕೆ ತಿಳಿಯದವರಿಗೆ ಸಿಬ್ಬಂದಿಯೇ ಮಾರ್ಗದರ್ಶನ ಮಾಡುತ್ತಿದ್ದಾರೆ. ಮಾಸ್ಕ್ ಧರಿಸಿದವರಿಗೆ ಮಾತ್ರ ನಿಲ್ದಾಣದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ.

ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಜನಸಂಪರ್ಕವನ್ನು ಆದಷ್ಟು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಟೋಕನ್ ಬದಲು ಸ್ಮಾರ್ಟ್ ಕಾರ್ಡ್ ಮಾತ್ರ ವಿತರಿಸಲಾಗುತ್ತಿದೆ. ಪ್ರಯಾಣಿಕರು ಆನ್ ಲೈನ್ ಮೂಲಕವೂ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿಕೊಳ್ಳಬಹುದು. ನಿಲ್ದಾಣದ ಕೌಂಟರ್ ಗಳಲ್ಲಿಯೂ ಹೊಸ ಸ್ಮಾರ್ಟ್ ಕಾರ್ಡ್ ಖರೀದಿಸಬಹುದು. ಮೊಬೈಲ್ ನಲ್ಲಿ ಆರೋಗ್ಯ ಸೇತು ಆ್ಯಪ್ ಅಳವಡಿಸಿಕೊಂಡವರಿಗೆ ಮಾತ್ರವೇ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿದೆ.

ಐದು ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸುತ್ತಿವೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 7ರಿಂದ 11ರವರೆಗೆ ಮತ್ತು ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಮೆಟ್ರೊ ರೈಲುಗಳ ಸೇವೆ ಇರಲಿದೆ.

ರಸ್ತೆಗಿಳಿದ ಬಸ್:

ಬಿಎಂಟಿಸಿ ಬಸ್ ಗಳೂ ಸೋಮವಾರದಿಂದ ರಸ್ತೆಗಿಳಿದವು. ಸೋಮವಾರ ಬೆಳಿಗ್ಗೆ 9 ಗಂಟೆಯ ವೇಳೆಗೆ 1,086 ಬಸ್ ಗಳು ಸಂಚಾರ ನಡೆಸಿದವು.

ಬಸ್ ಗಳಲ್ಲಿ ನಿಂತು ಪ್ರಯಾಣಿಸಲು ಅವಕಾಶ ನೀಡಲಾಗುತ್ತಿಲ್ಲ. ಆಸನ ಸಾಮರ್ಥ್ಯದಷ್ಟೇ ಪ್ರಯಾಣಿಕರು ಬಸ್ ಏರಲು ಅವಕಾಶ ನೀಡಲಾಗುತ್ತಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಜನ ನಗರಕ್ಕೆ ಮರಳುತ್ತಿರುವುದರಿಂದ, ರಾಜ್ಯ ಸಾರಿಗೆ ಮತ್ತು ಬಿಎಂಟಿಸಿ ಬಸ್ ನಿಲ್ದಾಣದ ಸುತ್ತ- ಮುತ್ತ ಸಂಚಾರ ದಟ್ಟಣೆ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT