ಭಾನುವಾರ, ಜುಲೈ 25, 2021
22 °C
ಕೋವಿಡ್‌ 19: ಒಬ್ಬ ಸಿಬ್ಬಂದಿ ಗುಣಮುಖ

ಬಿಎಂಟಿಸಿ: ಮತ್ತೆ ಮೂರು ಸಿಬ್ಬಂದಿಗೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಎಂಟಿಸಿಯ ಮೂವರು ಸಿಬ್ಬಂದಿಗೆ ಕೊರೊನಾ ಸೋಂಕು ಶನಿವಾರ ದೃಢಪಟ್ಟಿದೆ. ಸಂಸ್ಥೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಈ ಪೈಕಿ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು.

ಇಬ್ಬರು ಸಂಚಾರ ನಿಯಂತ್ರಕರು (ಟಿ.ಸಿ) ಮತ್ತಿಬ್ಬರು ಸಹಾಯಕ ಸಂಚಾರ ನಿರೀಕ್ಷಕರಿಗೆ (ಎಟಿಐ) ಸೋಂಕು ಶುಕ್ರವಾರ ದೃಢಪಟ್ಟಿತ್ತು. ಘಟಕಗಳಲ್ಲೇ ಕೆಲಸ ಮಾಡುವ ಇವರಿಗೆ ಸೋಂಕು ಹೇಗೆ ತಗುಲಿತು ಎಂಬುದು ಗೊತ್ತಾಗಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

ಇಂದಿರಾನಗರ ಘಟಕದ ಇಬ್ಬರು ಮತ್ತು ಅಂಜನಾಪುರ ಘಟಕದ ಒಬ್ಬ ಸಿಬ್ಬಂದಿಗೆ ಸೋಂಕಿರುವುದು ಶನಿವಾರ ದೃಢಪಟ್ಟಿದೆ. ಶುಕ್ರವಾರ ಅಂಜನಾಪುರ ಘಟಕದಲ್ಲಿ ಸೋಂಕು ದೃಢಪಟ್ಟಿದ್ದ ಸಿಬ್ಬಂದಿಯ ಪತ್ನಿ ಮತ್ತು ಮಗಳಿಗೂ ಹರಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಇದೇ 12ರಂದು ಸೋಂಕು ದೃಢಪಟ್ಟು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಘಟಕ–24ರ ಸಿಬ್ಬಂದಿ ಗುಣಮುಖರಾಗಿದ್ದು, ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾದರು.

ಸಿಬ್ಬಂದಿಗೆ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಅವರಿಗೆ ವೈಯಕ್ತಿಕ ಸುರಕ್ಷತಾ ಸಾಧನಗಳನ್ನು ನೀಡಲಾಗುತ್ತಿದೆ. ಸ್ವಚ್ಛತೆ ಕಾಪಾಡಲಾಗುತ್ತಿದೆ. ಸಿಬ್ಬಂದಿ ಮತ್ತು ಪ್ರಯಾಣಿಕರು ಭಯಪಡುವ ಅಗತ್ಯ ಇಲ್ಲ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

₹10 ಸಾವಿರ ಮುಂಗಡ

ಕೋವಿಡ್‌ 19 ಸೋಂಕು ದೃಢಪಟ್ಟ ಸಿಬ್ಬಂದಿಗೆ ₹10 ಸಾವಿರ ವೈದ್ಯಕೀಯ ಮುಂಗಡ ನೀಡಲು ಬಿಎಂಟಿಸಿ ಸುತ್ತೋಲೆ ಹೊರಡಿಸಿದೆ.

ಈಗಾಗಲೇ ಚಾಲ್ತಿಯಲ್ಲಿರುವ ಈ ವ್ಯವಸ್ಥೆಯನ್ನು ಕೊರೊನಾ ಸೋಂಕಿತರಿಗೆ ತುರ್ತು ಚಿಕಿತ್ಸೆಗಾಗಿ ಬಿಡುಗಡೆ ಮಾಡುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಘಟಕಗಳಲ್ಲೇ ಕೊರೊನಾ ಪರೀಕ್ಷೆ

ಬಿಎಂಟಿಸಿ 20 ಘಟಕಗಳಲ್ಲಿನ 50 ವರ್ಷ ಮೇಲ್ಪಟ್ಟ ಸಿಬ್ಬಂದಿಯ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಕೊರೊನಾ ಪರೀಕ್ಷೆ ನಡೆಸಲು ಸಂಸ್ಥೆ ಮುಂದಾಗಿದೆ.

ಬಿಬಿಎಂಪಿ ವೈದ್ಯಕೀಯ ತಂಡಗಳು ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಭಾನುವಾರ ಇಂದಿರಾನಗರ, ಕೋರಮಂಗಲ, ರಾಜರಾಜೇಶ್ವರಿನಗರ, ಬನಶಂಕರಿ, ಶಾಂತಿನಗರ, ದೀಪಾಂಜಲಿನಗರ, ಯಶವಂತಪುರ, ಪೀಣ್ಯ, ಹೆಣ್ಣೂರು ಮತ್ತು ಐಟಿಐ ಘಟಕಗಳಲ್ಲಿ ತಪಾಸಣೆ ನಡೆಯಲಿದೆ.

ಅಂಜನಾಪುರ, ಶಾಂತಿನಗರ, ಕೆಂಗೇರಿ, ಸುಮ್ಮನಹಳ್ಳಿ, ಎಂ.ಎಸ್.ಪಾಳ್ಯ, ಯಲಹಂಕ, ಎಲೆಕ್ಟ್ರಾನಿಕ್ ಸಿಟಿ, ಸೂರ್ಯ ಸಿಟಿ, ಕಲ್ಯಾಣನಗರ ಮತ್ತು ಆರ್‌.ಟಿ. ನಗರ ಘಟಕಗಳಲ್ಲಿ ಸೋಮವಾರ ಆರೋಗ್ಯ ಪರೀಕ್ಷೆ ಮಾಡಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು