ಬೆಂಗಳೂರು: ದೇಶದಲ್ಲಿ ಮೊದಲ ಮಿಥೆನಾಲ್ ಮಿಶ್ರಿತ ಇಂಧನ ಆಧಾರಿತ ಬಸ್‍ಗಳ ಸಂಚಾರವನ್ನು ಬಿಎಂಟಿಸಿ ಆರಂಭಿಸಿದ್ದು, ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಭಾನುವಾರ ಚಾಲನೆ ನೀಡಿದರು.
ಪ್ರಾಯೋಗಿಕವಾಗಿ 20 ವಾಹನಗಳಿಗೆ ಈ ಇಂಧನ ಬಳಕೆ ಮಾಡಲಾಗಿದೆ. ಅಶೋಕ್ ಲೆಲ್ಯಾಂಡ್ ಸಹಯೋಗದಲ್ಲಿ ಪ್ರಯೋಗವನ್ನು ಬಿಎಂಟಿಸಿ ಮಾಡಿದೆ. ಈಗಿರುವ ಡೀಸೆಲ್ ಆಧಾರಿತ ಬಸ್‍ಗಳಲ್ಲಿ ಶೇ 15ರಷ್ಟು ಮಿಥೆನಾಲ್ ಮಿಶ್ರಣ ಮಾಡಿ ಸೇವೆಗೆ ಇಳಿಸಲಾಗಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್‍ಗಳು ಈ ವ್ಯವಸ್ಥೆಗೆ ಸೇರಲಿವೆ.
ಬಿಎಂಟಿಸಿಗೆ ಬರುವ ವರಮಾನದಲ್ಲಿ ಶೇ 80ರಷ್ಟು ಇಂಧನಕ್ಕೇ ವೆಚ್ಚವಾಗುತ್ತಿದೆ. ಮಿಥೆನಾಲ್ ಮಿಶ್ರಣದ ಪ್ರಯೋಗವು ಯಶಸ್ವಿಯಾದರೆ, ಆ ಇಂಧನ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ. ಬಿಎಂಟಿಸಿಯು ಸಂಪೂರ್ಣವಾಗಿ ಈ ಇಂಧನಕ್ಕೆ ಬದಲಾಗಲು ಕನಿಷ್ಠ ಮೂರು ತಿಂಗಳು ಬೇಕಾಗಲಿದೆ.
ಶೇ 15ರಷ್ಟು ಮಿಥೆನಾಲ್, ಶೇ 12 ಕಪ್ಲರ್ಸ್ ಮತ್ತು ಶೇ 2ರಷ್ಟು ಸಿಟೇನ್ ಇಂಪ್ರೂವರ್ ಸೇರಿರುತ್ತದೆ. ಉಳಿದ ಶೇ 71ರಷ್ಟು ಡೀಸೆಲ್ ಇರುತ್ತದೆ. ಇಂಧನದ ದಹನ ಕ್ರಿಯೆಯು ಸುಲಲಿತವಾಗಿ ನಡೆಯಲು ಮಿಥೆನಾಲ್ ನೆರವಾಗುತ್ತದೆ. ಮಿಥೆನಾಲ್ ಬಳಕೆಯಿಂದ ವಾಹನದಿಂದ ಹೊರಡುವ ಹೊಗೆ ಮತ್ತು ಇಂಗಾಲದ ಡೈಆಕ್ಸೈಡ್ ಪ್ರಮಾಣ ಕಡಿಮೆ ಆಗುತ್ತದೆ.
ಈ ಬಸ್‍ಗಳಿಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ‘ವಾರ್ಷಿಕ ₹16 ಸಾವಿರ ಕೋಟಿ ಮೊತ್ತದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಸುಮಾರು 34 ಕೋಟಿ ವಾಹನಗಳು ನಿತ್ಯ ಸಂಚರಿಸುತ್ತಿದ್ದು, ಹೊಗೆ ಉಗುಳುವ ಮೂಲಕ ವಾಯುಮಾಲಿನ್ಯ ಉಂಟುಮಾಡುತ್ತಿವೆ. ಮಿಥೆನಾಲ್ ಪ್ರಯೋಗ ಯಶಸ್ವಿಯಾದರೆ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ’ ಎಂದರು.
ಲೀಟರ್ ಮಿಥೆನಾಲ್‌ಗೆ ₹25 ದರವಿದ್ದು, ಇದರಿಂದ ವಾಯು ಮಾಲಿನ್ಯ ಕಡಿಮೆಯಾಗಲಿದೆ. ಕಡಿಮೆ ವೆಚ್ಚ ಮತ್ತು ಪರಿಸರ ಸ್ನೇಹಿಯೂ ಆಗಿದೆ ಎಂದು ಹೇಳಿದರು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಮಾತನಾಡಿ, ‘ಬಿಎಂಟಿಸಿ ಅಂದಾಜು ತಿಂಗಳಿಗೆ ₹70 ಕೋಟಿಯನ್ನು ಡೀಸೆಲ್ ಖರೀದಿಗಾಗಿಯೇ ವೆಚ್ಚ ಮಾಡುತ್ತಿದೆ. ಮಿಥೆನಾಲ್ ಬಳಕೆ ಸಾಧ್ಯವಾದರೆ, ಈ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಬಹುದು. ಸದ್ಯ 20 ಬಸ್‍ಗಳಲ್ಲಿ ಈ ಪ್ರಯೋಗ ನಡೆಯುತ್ತಿದ್ದು, ಮಿಥೆನಾಲ್ ಮಿಶ್ರಿತ ಇಂಧನವನ್ನು(ಡೀಸೆಲ್) ಭಾರತೀಯ ತೈಲ ನಿಗಮ(ಐಒಸಿ) ಪೂರೈಸಲಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.