ಬುಧವಾರ, ಜನವರಿ 27, 2021
20 °C
ಒಂದೇ ಪಾಳಿ ಇರುವುದರಿಂದ ಸಿಬ್ಬಂದಿಗೆ ಕಾರ್ಯಭಾರ ಕಡಿಮೆ * ಕರ್ತವ್ಯ ನಿರ್ವಹಿಸದಿದ್ದರೆ ಹಾಜರಾತಿ ಇಲ್ಲ

ಬಿಎಂಟಿಸಿ ಸಿಬ್ಬಂದಿಗೆ ‘ಒತ್ತಾಯ ರಜೆ’!

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಒಂದೇ ಪಾಳಿ ವ್ಯವಸ್ಥೆ ಮುಂದುವರಿಸಿದ್ದು, ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ಮಾತ್ರ ಹಾಜರಾತಿ ನೀಡುತ್ತಿದೆ. ಇದರಿಂದ ಸಂಸ್ಥೆಯ ಚಾಲನಾ ಸಿಬ್ಬಂದಿಯು ತಮ್ಮ ರಜೆಗಳನ್ನು ಕಳೆದುಕೊಳ್ಳಬೇಕಾಗಿದೆ.

‘ಲಾಕ್‌ಡೌನ್‌ ಸಡಿಲಿಕೆ ನಂತರದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದುದರಿಂದ ಎರಡು ಪಾಳಿ ವ್ಯವಸ್ಥೆ ಬದಲು, ಒಂದೇ ಪಾಳಿ ಮಾಡಲಾಗಿತ್ತು. ಹೆಚ್ಚುವರಿ ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಂಡು ಸಂಜೆ ವೇಳೆಗೆ ಕಳಿಸುತ್ತಿದ್ದರು. ಹಾಜರಾತಿಯೂ ನೀಡಲಾಗುತ್ತಿತ್ತು. ಆದರೆ, ಜ.1ರಿಂದ ಈ ವ್ಯವಸ್ಥೆ ಬದಲಾಗಿದ್ದು, ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ಮಾತ್ರ ಹಾಜರಾತಿ ಕೊಡುತ್ತಿದ್ದಾರೆ. ಉಳಿದವರಿಗೆ ರಜೆ ಕೊಟ್ಟು ಕಳುಹಿಸಲಾಗುತ್ತಿದೆ. ಒತ್ತಾಯಪೂರ್ವಕವಾಗಿ ನಮ್ಮ ರಜೆಗಳನ್ನು ಕಳೆದುಕೊಳ್ಳಬೇಕಾಗಿದೆ’ ಎಂದು ನಿರ್ವಾಹಕಿ ಮಾಲತಿ ಅಸಮಾಧಾನ ವ್ಯಕ್ತಪಡಿಸಿದರು.

‘ಚಾಲನಾ ಸಿಬ್ಬಂದಿಗೆ ಮಾತ್ರ ಈ ನಿಯಮ ಅನ್ವಯಿಸಲಾಗುತ್ತಿದೆ. ಡಿಪೊದಲ್ಲಿ ಬೇರೆ ಹುದ್ದೆಯಲ್ಲಿದ್ದವರು ಕೆಲಸ ಮಾಡಲಿ, ಬಿಡಲಿ ಅವರಿಗೆ ಹಾಜರಾತಿ ನೀಡಲಾಗುತ್ತಿದೆ. ಒಂದೇ ಪಾಳಿ ಮಾಡಿರುವುದರಿಂದ ಯಾವುದೇ ಡಿಪೊದಲ್ಲಾದರೂ 50ರಿಂದ 60 ಜನ ಹೆಚ್ಚುವರಿಯಾಗಿ ಉಳಿಯುತ್ತಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಕೇವಲ ಒಂದೆರಡು ತಿಂಗಳಲ್ಲಿಯೇ ನಮ್ಮೆಲ್ಲ ರಜೆಗಳನ್ನೂ ನಾವು ಕಳೆದುಕೊಳ್ಳಬೇಕಾಗುತ್ತದೆ. ನಂತರ ವೇತನ ಕಡಿತವಾಗುತ್ತದೆ’ ಎಂದು ಆತಂಕ ತೋಡಿಕೊಂಡರು.

‘ಹೆಚ್ಚುವರಿ ಸಿಬ್ಬಂದಿಯನ್ನು ಸಿಬ್ಬಂದಿ ಕಡಿಮೆ ಇರುವ ಡಿಪೊಗಳಲ್ಲಿ ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ. ಆದರೆ, ಎಲ್ಲ ಡಿಪೊಗಳಲ್ಲಿಯೂ ಹೆಚ್ಚುವರಿ ಸಿಬ್ಬಂದಿ ಇದ್ದೇ ಇರುತ್ತಾರೆ. ಕಡಿಮೆ ಸಿಬ್ಬಂದಿ ಇರುವ ಡಿಪೊಗಳಿಗೆ ಇವರೇ ಸಿಬ್ಬಂದಿಯನ್ನು ನಿಯೋಜಿಸಿ ನಂತರ ಈ ಆದೇಶ ಮಾಡಬಹುದಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

‘ಮೊದಲಿನಂತೆ, ಕೆಲಸ ಮಾಡದೇ ಹಾಜರಾತಿ ನೀಡಿ ಎಂದೂ ನಾವು ಕೇಳುತ್ತಿಲ್ಲ. ಈಗಾಗಲೇ ಶಾಲಾ–ಕಾಲೇಜುಗಳು ಪ್ರಾರಂಭವಾಗಿವೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಎರಡು ಪಾಳಿ ಮಾಡಿದರೆ ಎಲ್ಲರಿಗೂ ಕೆಲಸ ಸಿಗುತ್ತದೆ. ಪ್ರಯಾಣಿಕರಿಗೂ ಅನುಕೂಲವಾಗುತ್ತದೆ’ ಎಂದು ನಿರ್ವಾಹಕ ಎಂ. ಶ್ರೀನಿವಾಸ್ ಹೇಳಿದರು.

‘ಗ್ರಾಮ ಪಂಚಾಯಿತಿ ಚುನಾವಣೆ ಇದ್ದುದರಿಂದ ಬಹಳಷ್ಟು ಸಿಬ್ಬಂದಿ ರಜೆ ಹಾಕಿ ಹೋಗಿದ್ದರು. ಈಗ ಅವರೆಲ್ಲರೂ ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಎಲ್ಲರೂ ಬಂದ ನಂತರ ಹೆಚ್ಚುವರಿ ಸಿಬ್ಬಂದಿ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ’ ಎಂದು ಅವರು ಹೇಳಿದರು.

ಬಸ್‌ನಲ್ಲಿ ನಿಂತು ಪ್ರಯಾಣ!
‘ಕೋವಿಡ್‌ ಮಾರ್ಗಸೂಚಿಯನ್ವಯ ಬಸ್‌ಗಳಲ್ಲಿ ನಿಂತು ಪ್ರಯಾಣಿಸಲು ಅವಕಾಶವಿಲ್ಲ. ಆದರೆ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದಾಗ ಬಸ್‌ನಲ್ಲಿ ನಿಂತು ಪ್ರಯಾಣಿಸಲು ಅವಕಾಶ ನೀಡುತ್ತಿದ್ದೇವೆ. ಈ ಕುರಿತು ಲಿಖಿತ ಆದೇಶವನ್ನು ಅಧಿಕಾರಿಗಳು ನೀಡಿಲ್ಲ. ಹತ್ತಿಸಿಕೊಂಡು ಹೋಗಿ ಪರವಾಗಿಲ್ಲ ಎಂದು ಮೌಖಿಕವಾಗಿ ಹೇಳುತ್ತಾರೆ’ ಎಂದು ನಿರ್ವಾಹಕರೊಬ್ಬರು ತಿಳಿಸಿದರು.

‘ಪ್ರಯಾಣಿಕರಿಲ್ಲ ಎಂಬ ನೆಪ ಹೇಳಿ ಒಂದೇ ಪಾಳಿ ಮಾಡುವ ಬದಲು, ಎರಡು ಪಾಳಿ ಮಾಡಿದರೆ ಚಾಲನಾ ಸಿಬ್ಬಂದಿಗೂ ಸಮಸ್ಯೆ ಇರುವುದಿಲ್ಲ, ಪ್ರಯಾಣಿಕರಿಗೂ ತೊಂದರೆಯಾಗುವುದಿಲ್ಲ’ ಎಂದು ಅವರು ಹೇಳಿದರು.

ಅಂಕಿ–ಅಂಶ

30 ಸಾವಿರ: ಬಿಎಂಟಿಸಿಯಲ್ಲಿರುವ ಚಾಲನಾ ಸಿಬ್ಬಂದಿಯ ಅಂದಾಜು ಸಂಖ್ಯೆ

48: ಡಿಪೊಗಳು

50: ಪ್ರತಿ ಡಿಪೊದಲ್ಲಿನ ಹೆಚ್ಚುವರಿ ಸಿಬ್ಬಂದಿಯ ಕನಿಷ್ಠ ಸಂಖ್ಯೆ

2,400: ಒಟ್ಟು ಹೆಚ್ಚುವರಿ ಸಿಬ್ಬಂದಿ (ಅಂದಾಜು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು