ಗುರುವಾರ , ಜುಲೈ 29, 2021
27 °C

ಕಳಪೆ ದಿನಸಿ ವಿತರಣೆ: ಕಾರ್ಮಿಕರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ಲಾಕ್‌ಡೌನ್‌ ಕಾರಣ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೀಡುತ್ತಿರುವ ದಿನಸಿ ಕಿಟ್ ಕಳಪೆಯಾಗಿದೆ ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೊಮ್ಮನಹಳ್ಳಿ ಭಾಗದಲ್ಲಿ ಕಾರ್ಮಿಕರಿಗೆ ನೀಡಲಾಗುತ್ತಿರುವ ದಿನಸಿ ಪದಾರ್ಥ ಬಳಕೆ ಯೋಗ್ಯವಾಗಿಲ್ಲ ಎಂಬ ದೂರು ಕೇಳಿ ಬಂದಿದೆ.

5 ಕೆಜಿ ಅಕ್ಕಿ, 2 ಕೆಜಿ ಗೋದಿ ಹಿಟ್ಟು, ಬೇಳೆ, ರವೆ, ಅವಲಕ್ಕಿ, ಉಪ್ಪು, ಸಕ್ಕರೆ ತಲಾ ಕೆಜಿ, 1 ಲೀಟರ್ ಅಡುಗೆ ಎಣ್ಣೆ, 200 ಗ್ರಾಂ ಸಾಂಬಾರ್ ಪುಡಿ, 100 ಗ್ರಾಂ ಖಾರದ ಪುಡಿ ಸೇರಿದಂತೆ ಒಟ್ಟು ಹತ್ತು ಪದಾರ್ಥಗಳ ಕಿಟ್ ನೀಡಲಾಗುತ್ತಿದೆ. ಇದರಲ್ಲಿ ಅಕ್ಕಿಯನ್ನು ಮಂಡಳಿಯು ಸರ್ಕಾರದಿಂದ ಖರೀದಿಸಿ ನೀಡಲಾಗುತ್ತಿದೆ ಎಂದು ಕಾರ್ಮಿಕರು ಹೇಳಿದ್ದಾರೆ.

ದಿನಸಿ ಕಿಟ್ ತಯಾರಿಸಲು ವಿವಿಧ ಸಂಸ್ಥೆಗಳಿಗೆ ಆರು ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದೆ. ‘ವೈಟ್ ಪೆಟಲ್ಸ್’ ಎಂಬ ಸಂಸ್ಥೆಯಿಂದ ಬಂದ ದಿನಸಿಯನ್ನು ವಿತರಿಸುವಾಗ ಇದು ಬೆಳಕಿಗೆ ಬಂದಿದೆ.

‘ಕಲ್ಯಾಣ ಮಂಡಳಿಯಿಂದ ನೀಡಲಾಗಿರುವ ದಿನಸಿ ಪದಾರ್ಥ ಬಳಸಲು ಸಾಧ್ಯವೇ ಇಲ್ಲ, ಇದನ್ನು ಕೊಟ್ಟಿದ್ದಾದರೂ ಯಾಕೆ? ಎಂದು ಕಟ್ಟಡ ಕಾರ್ಮಿಕ ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

‘ಅನ್ನ ಮಾಡಲು ಅಕ್ಕಿಯನ್ನು ತೊಳೆಯುತ್ತಿದ್ದಂತೆ ಅಕ್ಕಿ ಪೂರ್ತಿ ನುಚ್ಚಾಯಿತು, ಬೇಳೆಕಾಳು ಎಷ್ಟು ಬೇಯಿಸಿದರೂ ಬೇಯುವುದಿಲ್ಲ, ರವೆಯಲ್ಲಿ ಹುಳು ಇವೆ. ಇದನ್ನು ತಿನ್ನುವುದಾದರೂ ಹೇಗೆ?’ ಎಂದು ಕಟ್ಟಡ ಕಾರ್ಮಿಕ ಮಾಧು ಪ್ರಶ್ನಿಸಿದರು.

ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿ ಸಂಚಾಲಕ ಕೆ.ಮಹಾಂತೇಶ್ ಪ್ರತಿಕ್ರಿಯಿಸಿ ‘ಕಟ್ಟಡ ಕಾರ್ಮಿಕ ಸಂಘಟನೆಗಳ ಪರವಾಗಿ ನಾವು, ರೇಷನ್ ಕಿಟ್ ಬದಲು ನಗದು ವರ್ಗಾವಣೆ ಮಾಡಬೇಕೆಂದು ಬೇಡಿಕೆ ಸಲ್ಲಿಸಿದ್ದೆವು. ಇದರಿಂದ ಕಾರ್ಮಿಕರು ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುತ್ತಾರೆ, ಜತೆಗೆ ರಾಜ್ಯದ ಆರ್ಥಿಕತೆಯೂ ಪುನಶ್ಚೇತನಗೊಳ್ಳುತ್ತದೆ. ಆದ್ದರಿಂದ ತಲಾ ₹10 ಸಾವಿರ ನೇರ ನಗದು ವರ್ಗಾವಣೆ ಮಾಡಬೇಕೆಂಬ ನಮ್ಮ ಅಹವಾಲನ್ನು ಪರಿಗಣಿಸದೇ, ಈ ರೀತಿಯಾಗಿ ಕಳಪೆಯಾದ ದಿನಸಿ ನೀಡಿದ್ದಾರೆ. ನಾವು ಇದನ್ನು ಸಚಿವರ ಮನೆಗೆ ವಾಪಸ್ ನೀಡುವ ಮೂಲಕ ಪ್ರತಿಭಟಿಸುತ್ತೇವೆ’ ಎಂದರು.

‘ಒಂದು ದಿನಸಿ ಕಿಟ್‌ಗೆ ₹880ನಂತೆ ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ದರದಲ್ಲಿ ಖರೀದಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಇದೇ ಮೊತ್ತಕ್ಕೆ ಗುಣಮಟ್ಟದ ಹಾಗು ಹೆಚ್ಚಿನ ಮೌಲ್ಯದ ಪದಾರ್ಥ ಸಿಗುತ್ತದೆ. ಇದರ ಒಟ್ಟು ವ್ಯವಹಾರ ಪಾರದರ್ಶಕವಾಗಿ ನಡೆದಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಇದು ತನಿಖೆಯಾಗಬೇಕು’ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಡಾ.ಕೆ.ಪ್ರಕಾಶ್ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು