ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಪ್ಪ ಚಾರಿತ್ರಿಕ ವ್ಯಕ್ತಿಯೂ ಇರಬಹುದು: ಸಾಹಿತಿ ಬಂಜಗೆರೆ ಜಯಪ್ರಕಾಶ

‘ಮೂಡ್ಲಮಲೆ ಮಾದಯ್ಯ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಲೇಖಕ ಬಂಜಗೆರೆ ಜಯಪ್ರಕಾಶ
Published 19 ಫೆಬ್ರುವರಿ 2024, 15:40 IST
Last Updated 19 ಫೆಬ್ರುವರಿ 2024, 15:40 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾದಪ್ಪ ಚಾರಿತ್ರಿಕ ವ್ಯಕ್ತಿಯೂ ಇರಬಹುದು; ಚಾರಿತ್ರಿಕವಲ್ಲದೇ ಪರಂಪರೆಯಿಂದ ಬಂದ ದೇವರೂ ಆಗಿರಬಹುದು. ಅವರೆಡನ್ನೂ ಬೆರೆಸಿ ಈ ಕಾಲಘಟ್ಟದಲ್ಲಿ ಒಬ್ಬ ಮಾದಪ್ಪನನ್ನು ಸೃಷ್ಟಿ ಮಾಡಿಕೊಂಡಿದ್ದೇವೆ’ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ ವಿಶ್ಲೇಷಿಸಿದರು.

ಸಾಹಿತ್ಯ ಸಂಗಮ ಟ್ರಸ್ಟ್‌, ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೂದನೂರು ಪುಟ್ಟಸ್ವಾಮಿ ಅವರ ‘ಮೂಡ್ಲಮಲೆ ಮಾದಯ್ಯ’ ಎಂಬ ಸಂಶೋಧನಾ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮಾದಪ್ಪನ ಪರಂಪರೆ ಆರಂಭವಾದ ದಿನಗಳಿಂದಲೂ ಇಲ್ಲಿಯವರೆಗೆ ಅದೇ ಮಾದಪ್ಪ ಇದ್ದಾನೆಯೇ? ಅದೇ ಮಾದಪ್ಪ ಇರಬೇಕೆಂದೂ ಇಲ್ಲ. ಈ ಎಲ್ಲ ಸೂಕ್ಷ್ಮ ವಿಚಾರಗಳನ್ನು ಗ್ರಹಿಸಿ, ಆಕರ ಗ್ರಂಥಗಳನ್ನು ಬಳಸಿ ಬೂದನೂರು ಪುಟ್ಟಸ್ವಾಮಿ ಸಂಶೋಧನಾ ಕೃತಿ ಬರೆದಿದ್ದಾರೆ. ಇದು ಮೆಚ್ಚುವ ವಿಚಾರ. ಕುಲಕಥನ, ಜಾನಪದ ಕಥನ, ಕಾವ್ಯ ಪುರಾಣ, ಕಾವ್ಯಗಳು... ಸೃಷ್ಟಿ ಆಗಬೇಕಿದ್ದರೆ ಸಂಕ್ರಮಣ ಕಾಲಘಟ್ಟ ಬರಬೇಕು ಎಂದು ಹೇಳಿದರು.

‘ಬೇರೆಲ್ಲ ದೇವರಿಗೆ ಒಂದೇ ಪರಿಷೆಯಿದ್ದರೆ, ಮಾದಪ್ಪನಿಗೆ ಹಲವು ಪರಿಷೆಗಳಿವೆ. ಬೇರೆ ರಾಜ್ಯದ ಕೃಷಿಕರೂ ಬೆಟ್ಟಕ್ಕೆ ಬರುತ್ತಾರೆ. ಭಕ್ತರ ಸಂಖ್ಯೆಯೂ ಹೆಚ್ಚಿದೆ. ಬೆಟ್ಟದಲ್ಲಿ ಜಾಗೃತ ದೈವಾರಾಧನೆ ನಡೆಯುತ್ತದೆ’ ಎಂದು ಹೇಳಿದರು.

‘ವಿ.ವಿಗಳಲ್ಲಿರುವ ಸಂಶೋಧಕರು, ಮಾಡದಷ್ಟು ಕೆಲಸವನ್ನು ಪುಟ್ಟಸ್ವಾಮಿ ಮಾಡಿದ್ದಾರೆ. ಈ ಕೃತಿಯ ಮೌಲ್ಯ ಹೆಚ್ಚಿದೆ. ಇದು ಹರಟೆ ಸ್ವರೂಪದ ಕೃತಿಯಲ್ಲ. ವಸ್ತುನಿಷ್ಠ, ಒಳನೋಟ, ಚರ್ಚೆ ಒದಗಿಸುವ ಕೃತಿ ಇದು’ ಎಂದು ಪ್ರತಿಪಾದಿಸಿದರು.

‘ಕೆಲವರಿಗೆ ಅಧ್ಯಯನದ ವಿನಯವಂತಿಕೆ ಇಲ್ಲ. ಅಧ್ಯಯನ ನಿಷ್ಠೆಯುಳ್ಳ ಕೃತಿಗಳು ಹೆಚ್ಚು ಬರಬೇಕಿದೆ’ ಎಂದು ಹೇಳಿದರು.

‘ಅಧಿಕಾರಿಯಾಗಿದ್ದ ಪುಟ್ಟಸ್ವಾಮಿ ಅವರು ಇನ್ನಷ್ಟು ಅಧ್ಯಯನಶೀಲ ಕೃತಿಗಳನ್ನು ಬರೆಯುವ ಆಸಕ್ತಿ ಹೊಂದಿದ್ದರು. ಆದರೆ, ಅವರ ಆರೋಗ್ಯ ಹಠಾತ್‌ ಕೈಕೊಟ್ಟ ಕಾರಣಕ್ಕೆ ನಮ್ಮನ್ನು ಬಿಟ್ಟು ಅಗಲಿದರು’ ಎಂದು ಹೇಳಿದರು.‌

ಪತ್ರಕರ್ತ ಆರ್‌ಜಿ ಹಳ್ಳಿ ನಾಗರಾಜ್‌ ಮಾತನಾಡಿ, ‘ಪುಟ್ಟಸ್ವಾಮಿ ಅವರು ಸಾಹಿತ್ಯ, ಸಾಂಸ್ಕೃತಿಕ ಜಗತ್ತಿನ ಅಪರೂಪದ ಚಿಂತಕ. ಅವರ ಓದು, ಗ್ರಹಿಕೆ ತುಂಬಾ ಭಿನ್ನವಾಗಿತ್ತು. ಅವರು ಓದಿನ ಜ್ಞಾನವನ್ನು ಹಿಗ್ಗಿಸಿಕೊಳ್ಳಲು ಮಲೆ ಮಹದೇಶ್ವರ ಸಂಶೋಧನೆಗೆ ತೊಡಗಿದರು. ಶೈವ ಸಂಸ್ಕೃತಿಯ, ವಚನ ಸಾಹಿತ್ಯದ, ಜಾನಪದ ಸಾಹಿತ್ಯ... ಹೀಗೆ ಅನೇಕ ಕೃತಿಗಳನ್ನು ಗುಡ್ಡೆ ಹಾಕಿಕೊಂಡು ಓದಿ ಸಂಶೋಧನೆ ಕೃತಿ ರಚಿಸಿದ್ದಾರೆ’ ಎಂದು ಹೇಳಿದರು.

ಪುಸ್ತಕ ಪರಿಚಯ

ಕೃತಿ ಹೆಸರು: ಮೂಡ್ಲಮಲೆ ಮಾದಯ್ಯ

ಲೇಖಕ: ಬೂದನೂರು ಪುಟ್ಟಸ್ವಾಮಿ

ಬೆಲೆ: ₹275

ಪುಟಗಳು: 192

ಪ್ರಕಾಶನ: ಶಶಿ ಪಬ್ಲಿಕೇಷನ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT