ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಮುದ್ರಕರಿಗೆ ₹ 70 ಕೋಟಿ ಬಾಕಿ

26 ಮುದ್ರಕರಿಗೆ ಬಾಕಿ: ಪಾವತಿಗೆ ಕ್ರಮ–ಕರ್ನಾಟಕ ಪಠ್ಯಪುಸ್ತಕ ಸಂಘ ಭರವಸೆ
Last Updated 23 ಆಗಸ್ಟ್ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಮುದ್ರಿಸಿ ಸಕಾಲಕ್ಕೆ ಪೂರೈಸಿದ್ದ ಮುದ್ರಕರಿಗೆ ಕರ್ನಾಟಕ ಪಠ್ಯಪುಸ್ತಕ ಸಂಘ ಸುಮಾರು ₹ 70 ಕೋಟಿಯಷ್ಟು ಬಿಲ್‌ ಪಾವತಿಸುವುದು ಬಾಕಿ ಉಳಿದಿದೆ.

‘26 ಮುದ್ರಕರಿಗೆ ಬಾಕಿ ಪಾವತಿಸಬೇಕಾಗಿದೆ. ಪುಸ್ತಕಗಳನ್ನು ಸರಬರಾಜು ಮಾಡಿ 3 ತಿಂಗಳಾಗಿವೆ. ಹಣ ಬಿಡುಗಡೆಯಾಗದೇ ಬಹಳ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸರ್ಕಾರ ತಕ್ಷಣ ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮುದ್ರಕರೊಬ್ಬರು ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಒಟ್ಟು ₹ 160 ಕೋಟಿ ಮೊತ್ತಕ್ಕೆ ಟೆಂಡರ್‌ ಆಗಿತ್ತು. ಈ ಪೈಕಿ ಶೇ 60ರಷ್ಟು ಪಾವತಿಯಾಗಿದೆ. ಪಿಯು ಪಠ್ಯಪುಸ್ತಕ, ಮಕ್ಕಳ ಡೈರಿಯಂತಹ ಪುಸ್ತಕಗಳನ್ನು ಮುದ್ರಿಸಿ ಕೊಡಲಾಗಿತ್ತು. ಸುಮಾರು ₹ 15 ಕೋಟಿಯಷ್ಟು ಹಣ ಬಂದಿಲ್ಲ. ಹಣ ಸಿಗದೆ ಮುದ್ರಣ ಸಂಸ್ಥೆಗಳು ಕಷ್ಟದಲ್ಲಿವೆ’ ಎಂದರು.

‘2 ವರ್ಷದ ಹಿಂದೆ ಮುದ್ರಕರಿಗೆ ₹ 3 ಕೋಟಿ ದಂಡ ವಿಧಿಸಲಾಗಿತ್ತು. ಮಾನವೀಯತೆ ಆಧಾರದಲ್ಲಿ ಈ ದಂಡವನ್ನು ಮರಳಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಅದೂ ನಮ್ಮ ಕೈಸೇರಿಲ್ಲ’ ಎಂದೂ ಅವರು ತಿಳಿಸಿದರು.

ಶೇ 20ರಷ್ಟು ಬಾಕಿ: ‘ಮುದ್ರಕರಿಗೆ ಶೇ 80ರಷ್ಟು ಬಿಲ್‌ ಪಾವತಿ ಮಾಡಿ ಮುಗಿದಿದೆ. ಶೇ 20ರಷ್ಟು ಬಾಕಿ ಉಳಿದಿದೆ. ಅದನ್ನೂ ಶೀಘ್ರ ಪಾವತಿಸಲು ಕ್ರಮವಹಿಸುತ್ತೇವೆ’ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕ ಎಚ್‌.ಎನ್‌.ಗೋಪಾಲಕೃಷ್ಣ ಅವರು ಪ್ರತಿಕ್ರಿಯಿಸಿದರು.

‘ಮುದ್ರಕರಿಗೆ ಬಾಕಿ ಉಳಿದಿರುವ ಮೊತ್ತ ನಿಖರವಾಗಿ ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಲೆಕ್ಕಾಚಾರ ನಡೆಯುತ್ತಿದೆ. ವಾರದೊಳಗೆ ಲೆಕ್ಕಾಚಾರ ಕೊನೆಗೊಂಡು ಬಾಕಿ ಪಾವತಿ ಮಾಡುವುದು ಸಾಧ್ಯವಾಗಬಹುದು’ ಎಂದು ಹೇಳಿದರು.

ಸಂಘವು ಸರ್ಕಾರಿಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಉಚಿತವಾಗಿಪಠ್ಯಪುಸ್ತಕಗಳನ್ನು ನೀಡುವ ಹೊಣೆ ಹೊಂದಿದ್ದು,ಖಾಸಗಿ ಶಾಲೆಗಳಿಂದ ಮುಂಗಡವಾಗಿ ಹಣ ಪಡೆದುಕೊಂಡು ಪಠ್ಯಪುಸ್ತಕ ಪೂರೈಸುತ್ತಿದೆ.

‘ಮುಂದಿನ ವರ್ಷ ಬೇಸಿಗೆ ರಜೆಗೆ ಪುಸ್ತಕ’

‘ಈ ವರ್ಷ ಶಾಲೆಗಳು ಆರಂಭವಾಗುತ್ತಿದ್ದಂತೆಯೇ ಪುಸ್ತಕಗಳನ್ನು ಪೂರೈಸಿದ್ದೆವು. ಮುಂದಿನ ವರ್ಷ ಬೇಸಿಗೆ ರಜೆ ಆರಂಭವಾಗುವ ವೇಳೆಗೇ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಿದ್ದೇವೆ. ಮುಂದಿನ ತಿಂಗಳ ಆರಂಭದಲ್ಲೇ ಇದಕ್ಕಾಗಿ ಇ–ಟೆಂಡರ್‌ ಕರೆಯಲಾಗುತ್ತಿದೆ’ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕ ಎಚ್‌.ಎನ್‌.ಗೋಪಾಲಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT